ಉಡುಪಿ ನಗರಸಭೆಯ ಬಾಕಿ ಕಾಮಗಾರಿಗಳಿಗೆ ವೇಗ ನೀಡುವಂತೆ ಆಗ್ರಹಿಸಿ ನಿಕಟಪೂರ್ವ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸದರು. ಪ್ರಭಾಕರ್​ ಪೂಜಾರಿ, ದಿನೇಶ್​ ಅಮೀನ್​ ಹಾಗೂ ಮಾಜಿ ಸದಸ್ಯರು ಇದ್ದರು. 
ಉಡುಪಿ

ಉಡುಪಿ ನಗರಸಭೆಯ ಕಾಮಗಾರಿಗಳಿಗೆ ಚುರುಕು ಮುಟ್ಟಿಸಿ

* ನಿಕಟಪೂರ್ವ ಅಧ್ಯಕ್ಷ ಪ್ರಭಾಕರ್​ ಪೂಜಾರಿ ಆಗ್ರಹ

* ಜಿಲ್ಲಾಧಿಕಾರಿಗೆ ನಿಯೋಗದೊಂದಿಗೆ ಮನವಿ

ಉಡುಪಿ: ಜನಪ್ರತಿನಿಧಿಗಳ ಆಡಳಿತವಿಲ್ಲದೆ ಉಡುಪಿ ನಗರಸಭೆ ನಿಷ್ಕ್ರಿಯವಾಗಿದ್ದು ಜನರಿಗೆ ಸೇವಾ ಸೌಲಭ್ಯ ತ್ವರಿತಗತಿಯಲ್ಲಿ ಸಿಗುತ್ತಿಲ್ಲ. ಕಚೇರಿಯ ಸಮಯದಲ್ಲೂ ಅಧಿಕಾರಿಗಳು, ಸಿಬ್ಬಂದಿ ಸೇವೆಗೆ ಲಭ್ಯವಿರುವುದಿಲ್ಲ. ಹಿಂದಿನ ಆಡಳಿತದ ಅವಧಿಯಲ್ಲಿ ಅನುಮೋದಿತ ಹಲವು ಕಾಮಗಾರಿ ಇನ್ನೂ ಆರಂಭವಾಗಿಲ್ಲ. ನಗರಸಭೆಯ ಕಾರ್ಯಕಲಾಪಗಳಿಗೆ ಚುರುಕು ಮುಟ್ಟಿಸಲು ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ನಗರಸಭೆಯ ಆಡಳಿತಾಧಿಕಾರಿಯೂ ಆದ ಸ್ವರೂಪಾ ಟಿ.ಕೆ. ಅವರಿಗೆ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ್​ ಪೂಜಾರಿ ಆಗ್ರಹಿಸಿದರು.

ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ನಗರಸಭೆಯ ನಿಕಟಪೂರ್ವ ಸದಸ್ಯರನಿಯೋಗದೊಂದಿಗೆ ತೆರಳಿ ಮನವಿ ಅರ್ಪಿಸಿ ಮಾತನಾಡಿದರು.

ಉಡುಪಿ ನಗರ ಬಿಜೆಪಿಯ ಅಧ್ಯಕ್ಷರಾದ ದಿನೇಶ್​ ಅಮೀನ್​ ಮಾತನಾಡಿ, ನಗರಸಭೆಯಲ್ಲಿ ಬಾಕಿ ಇರುವ ಎಲ್ಲ ಕಾಮಗಾರಿಗಳನ್ನು ತಕ್ಷಣ ಪ್ರಾರಂಭಿಸಬೇಕು. ಅಧಿಕಾರಿಗಳು ಮತ್ತು ಸಿಬ್ಬಂದಿ ಕಚೇರಿ ಸಮಯದಲ್ಲಿ ತಪ್ಪದೆ ಹಾಜರಿರುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಉಡುಪಿ ನಗರ ಬಿಜೆಪಿಯ ಪ್ರಮುಖರು ಮತ್ತು ನಗರಸಭೆಯ ನಿಕಟಪೂರ್ವ ಸದಸ್ಯರು ಉಪಸ್ಥಿತರಿದ್ದರು.

ಪ್ರಾಣಿದಯಾ ಸಂಘಟನೆಗಳಿಂದ ಸಿಗದ ಸ್ಪಂದನೆ

ನಗರದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚುತ್ತಿದೆ. ಪ್ರತಿದಿನವೂ ಬೀದಿ ನಾಯಿಗಳ ಕಾಟದ ಬಗ್ಗೆ ಹತ್ತಾರು ದೂರುಗಳು ಬರುತ್ತಿವೆ. ಇದಕ್ಕೂ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದುರು. ಇದಕ್ಕೆ ಪ್ರತಿಕ್ರಿಸಿದ ಡಿಸಿ ಸ್ವರೂಪಾ, ಈ ಬಗ್ಗೆ ಕ್ರಮ ಕೈಗೊಳ್ಳಲು ಪ್ರಾಣಿದಯಾ ಸಂಘಟನೆಗಳ ಸ್ಪಂದನೆ ಮತ್ತು ಸಹಕಾರದ ಕೊರತೆಯಿದೆ. ಬೀದಿ ನಾಯಿಗಳ ಸಂತಾನ ಶಕ್ತಿಹರಣಕ್ಕೆ ಹೇರಳ ಅನುದಾನ ಬರುತ್ತಿದ್ದರೂ ನಾಯಿಗಳನ್ನು ಹಿಡಿಯುವ ಪ್ರಕ್ರಿಯೆಗೆ ಸಿಬ್ಬಂದಿ ಲಭ್ಯರಿಲ್ಲ. ನಾಯಿಗಳನ್ನು ಹಿಡಿಯಲು ಜಿಲ್ಲಾಡಳಿತ ತರಬೇತಿ ನೀಡಲೂ ಸಿದ್ಧವಿದೆ. ಅದಕ್ಕೂ ಮಾನವ ಸಂಪನ್ಮೂಲ ದೊರಕುತ್ತಿಲ್ಲ. ಯಾವುದೇ ಪ್ರಾಣಿದಯಾ ಸಂಘಟನೆಗಳು ಜಿಲ್ಲಾಡಳಿತಕ್ಕೆ ಸಲಹೆ ನೀಡುವುದು ಬಿಟ್ಟರೆ ಸಹಕಾರಕ್ಕಾಗಿ ಮುಂದೆ ಬರುತ್ತಿಲ್ಲ. ಕೇಂದ್ರ ಸರ್ಕಾರಕ್ಕೆ ಸಂಬಂಧಿತ ಸಂಸ್ಥೆಯಲ್ಲಿ ಪ್ರಾಣಿದಯಾ ಸಂಘಟನೆ ನೋಂದಣಿ ಆಗದಿರುವುದು ನಮಗೆ ಇಕ್ಕಟ್ಟಿನ ಪರಿಸ್ಥಿತಿ ತಂದಿದೆ ಎಂದು ಜಿಲ್ಲಾಧಿಕಾರಿ ಅಸಹಾಯಕತೆ ವ್ಯಕ್ತಪಡಿಸಿದರು.

ಎಸ್​ಐಆರ್​ ಪ್ರಕ್ರಿಯೆಗೆ ಹಲವು ಅಧಿಕಾರಿ ಹಾಗೂ ಸಿಬ್ಬಂದಿ ಬಳಸಿಕೊಳ್ಳಲಾಗಿದೆ. ಹತ್ತು ದಿನಗಳಲ್ಲಿ ಈ ಪ್ರಕ್ರಿಯೆ ಸಂಪೂರ್ಣಗೊಳ್ಳಲಿದ್ದು ಎಲ್ಲರೂ ಅವರವರ ಇಲಾಖೆಗಳಲ್ಲಿ ಕಾರ್ಯತತ್ಪರಾಗಲಿದ್ದಾರೆ. ನಗರಸಭೆಯಲ್ಲಿರುವ ಸಮಸ್ಯೆಗಳ ಪರಿಶೀಲನೆ ಮತ್ತು ಪರಿಹಾರಕ್ಕಾಗಿ ನಿಕಟಪೂರ್ವ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸುತ್ತೇನೆ.
ಸ್ವರೂಪಾ ಟಿ.ಕೆ. ಉಡುಪಿ ಜಿಲ್ಲಾಧಿಕಾರಿ.