ಉಡುಪಿ ಮಲ್ಪೆಯ ತೊಟ್ಟಂ ಚರ್ಚ್ನಲ್ಲಿ ಡೆನಿಸ್ ಡೆಸಾ ವಿಶೇಷ ಪ್ರಾರ್ಥನೆ ಮಾಡಿದರು.
* ವಂ.ಡೆನಿಸ್ ಡೆಸಾ ಪ್ರವಚನ
* ಯುದ್ಧದ ಉದ್ವಿಗ್ನತೆ ಶಮನ, ವಿಶ್ವಶಾಂತಿಗಾಗಿ ಪ್ರಾರ್ಥನೆ
ಉಡುಪಿ: ಮಾನವ ಜೀವ ಪವಿತ್ರವಾಗಿದ್ದು ಅದರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಹತ್ತಾರು ದಿನಗಳಿಂದ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಯುದ್ಧ ಭೀತಿಯಿಂದಾಗಿ ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಸಹೋದರ-ಸಹೋದರಿಯರಿರಲ್ಲಿ ಆತಂಕ ಮನೆ ಮಾಡಿದೆ. ಹಿಂಸೆ ಯಾವುದಕ್ಕೂ ಸನ್ಮಾರ್ಗವಲ್ಲ. ಪ್ರೀತಿಯ ಸಂವಾದದ ಮೂಲಕ ಪ್ರಪಂಚದಲ್ಲಿ ಸಮಾಧಾನ ಮತ್ತು ಶಾಂತಿ ನೆಲೆಸುವ ನಿಟ್ಟಿನಲ್ಲಿ ಜಗತ್ತಿನ ನಾಯಕರು ಕಾರ್ಯಪ್ರವೃತ್ತರಾಗಲಿ ಎಂದು ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ ಆಶಿಸಿದರು.
ಇರಾನ್ ಹಾಗೂ ನೆರೆಯ ರಾಷ್ಟ್ರಗಳಲ್ಲಿ ಇತ್ತೀಚೆಗಿನ ಯುದ್ಧದ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ದೇಶದ ಕ್ರೈಸ್ತ ಸಮುದಾಯವು ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಲು ಬಿಷಪ್ರ ಮಂಡಳಿ ಸೂಚಿಸಿದಂತೆ ಉಡುಪಿ ಧರ್ಮಪ್ರಾಂತ್ಯದ ಎಲ್ಲ ಚರ್ಚ್ಗಳಲ್ಲಿ ಭಾನುವಾರ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದ್ದು, ತೊಟ್ಟಂ ಚರ್ಚ್ನಲ್ಲಿ ಅವರು ಪ್ರವಚನ ನೀಡಿದರು.
ದೇವರು ಬೆಳಕಾಗಲಿ
ಯುದ್ಧದಿಂದಾಗಿ ಅಮಾಯಕರು ಪ್ರಾಣ ಅರ್ಪಿಸಬೇಕಾಗಿದೆ. ಅದರಿಂದಾಗಿ ಅವರ ಕುಟುಂಬವರ್ಗಕ್ಕೆ ಮರೆಯಲಾಗದ ನೋವುಂಟಾಗುತ್ತದೆ. ಯುದ್ಧಪಿಡಿತ ಪ್ರದೇಶದಲ್ಲಿ ಸ್ಫೋಟಕಗಳಿಂದಾಗಿ ಪರಿಸರದ ನಾಶಕ್ಕೂ ಕಾರಣವಾಗುತ್ತದೆ. ಹೀಗಾಗಿ ಜಗತ್ತಿನ ಮುಖಂಡರಿಗೆ ದೇವರು ಬೆಳಕಾಗಲಿ ಎಂದರು.
ಉಡುಪಿಯ ಶೋಕಮಾತಾ ಚರ್ಚ್ನಲ್ಲಿ ವಂ.ಚಾರ್ಲ್ಸ್ ಮಿನೇಜಸ್, ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ನಲ್ಲಿ ವಂ. ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಂದಾಪುರದ ಹೋಲಿ ರೋಜರಿಯಲ್ಲಿ ವಂ.ಪಾವ್ಲ್ ರೇಗೊ, ಕಾರ್ಕಳ ಸಂತ ಲಾರೆನ್ಸ್ ಬಸಿಲಿಕಾದಲ್ಲಿ ವಂ.ಆಲ್ಬನ್ ಡಿಸೋಜಾ ಸೇರಿದಂತೆ ವಿವಿಧ ಚರ್ಚ್ಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ವಿಶ್ವಶಾಂತಿಗಾಗಿ ಮಾ.8ರಿಂದ 14ರ ವರೆಗೆ ಶಾಂತಿಗಾಗಿ ವಿಶೇಷ ಪವಿತ್ರ ಜಪಸರ ಪ್ರಾರ್ಥನೆ ಹಾಗೂ ಮಾ.13ರಂದು ಉಪವಾಸ ಮತ್ತು ಪ್ರಾರ್ಥನಾ ದಿನವಾಗಿ ಆಚರಿಸಲು ಕ್ರೈಸ್ತ ಧರ್ಮಸಭೆ ಆಶಿಸಿದೆ.
ಪ್ರತಿಯೊಂದು ಬಿಕ್ಕಟ್ಟುಗಳಿಗೆ ಯುದ್ಧವೊಂದೇ ಪರಿಹಾರವಲ್ಲ. ಯುದ್ಧ ಮತ್ತು ಅಸ್ಥಿರತೆಯಿಂದ ಉಂಟಾಗುತ್ತಿರುವ ಮಾನವೀಯ ದು:ಖವು ವಿಶ್ವಮಾನವ ಕುಟುಂಬಕ್ಕೆ ಆಳವಾದ ಗಾಯ ಮಾಡುತ್ತಿದೆ. ಮಧ್ಯಪ್ರಾಚ್ಯದ ದೇಶಗಳಲ್ಲಿ ಕೆಲಸ ಮಾಡುತ್ತಿರುವ, ವಾಸಿಸುತ್ತಿರುವ ಭಾರತದ ಸಹೋದರ, ಸಹೋದರಿಯರ ಸುರಕ್ಷತೆಯ ಕುರಿತು ಚಿಂತಿಸಬೇಕಾಗಿದೆ. ಈ ಅನಿಶ್ಚಿತ ಸಮಯದಲ್ಲಿ ಅವರ ಸುರಕ್ಷತೆ, ಭದ್ರತೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಿದೆ. ಇದು ಆಡಳಿತ ವರ್ಗದ ಜವಾಬ್ದಾರಿ. ದೇವರು ವಿಶ್ವದ ನಾಯಕರಿಗೆ ಸನ್ಮತಿ, ಪ್ರೇರಣೆ ನೀಡಲಿ.