ಉಡುಪಿ ಮಲ್ಪೆಯ ತೊಟ್ಟಂ ಸಂತ ಅನ್ನಮ್ಮ ದೇವಾಲಯದಲ್ಲಿ ನಡೆದ ಈಸ್ಟರ್ ಭಾನುವಾರದ ಬಲಿಪೂಜೆಯ ನೇತೃತ್ವ ವಹಿಸಿದ್ದ ಧರ್ಮಗುರು ಡೆನಿಸ್ ಡೆಸಾ ಪ್ರಾರ್ಥನೆ ಕೈಗೊಂಡರು. ಆಲ್ವಿನ್ ಸಿಕ್ವೇರಾ ಇದ್ದರು.
* ತೊಟ್ಟಂ ಚರ್ಚ್ನ ಫಾದರ್ ಡೆನಿಸ್ ಡೆಸಾ ಸಂದೇಶ
* ಕ್ರೈಸ್ತರ ಮನೆಗಳಲ್ಲಿ ಹಬ್ಬದ ವಿಶೇಷ ಆಚರಣೆ
ಉಡುಪಿ: ಯೇಸುವಿನ ತ್ಯಾಗ ಮತ್ತು ಬಲಿದಾನ ಸ್ಮರಿಸುತ್ತ ಉಪವಾಸ ಮತ್ತು ವೃತಾಚರಣೆಯಲ್ಲಿ ತೊಡಗಿದ್ದ ಉಡುಪಿ ಜಿಲ್ಲೆಯ ಕ್ರೈಸ್ತ ಸಮುದಾಯದವರು ಯೇಸುಕ್ರಿಸ್ತನ ಪುನರುತ್ಥಾನದ ಈಸ್ಟರ್ ಹಬ್ಬವನ್ನು ಭಾನುವಾರ (ಏ.5) ಸಂಭ್ರಮದಿಂದ ಆಚರಿಸಿದರು.
ಮಲ್ಪೆಯ ತೊಟ್ಟಂ ಸಂತ ಅನ್ನಮ್ಮ ದೇವಾಲಯದಲ್ಲಿ ಧರ್ಮಗುರು ವಂ.ಡೆನಿಸ್ ಡೆಸಾ ಅವರು ಈಸ್ಟರ್ ಭಾನುವಾರದ ಬಲಿಪೂಜೆಯ ನೇತೃತ್ವ ವಹಿಸಿದ್ದರು.ಧರ್ಮಪ್ರಾಂತ್ಯದ ಪಾಕ್ಷಿಕ ಪತ್ರಿಕೆ ಉಜ್ವಾಡ್ ಸಂಪಾದಕ ವಂ.ಆಲ್ವಿನ್ ಸಿಕ್ವೇರಾ ಉಪಸ್ಥಿತರಿದ್ದರು.
ಸಾವೇ ಅಂತಿಮವಲ್ಲ
ಪ್ರವಚನ ನೀಡಿದ ಡೆನಿಸ್ ಡೆಸಾ, ದುಷ್ಟ ಜನರ ಒಳಸಂಚಿನಿಂದ ಯೇಸುಕ್ರಿಸ್ತರು ಅನ್ಯಾಯದ ತೀರ್ಪಿಗೆ ಒಳಗಾದರು. ಶಿಲುಬೆಯಲ್ಲಿ ಘೋರ ಮರಣ ಹೊಂದಿದರೂ ಅವರು ಮೂರನೆಯ ದಿನ ಮತ್ತೆ ಜೀವಂತವಾಗಿ ಎದ್ದು ಬಂದು ತಮ್ಮ ದೈವತ್ವ ತೋರ್ಪಡಿಸಿದ್ದರ ಸಂಭ್ರಮದ ಆಚರಣೆಯೇ ಈಸ್ಟರ್. ಇದು ದೈವತ್ವದ ಪ್ರತಿಪಾದನೆಯಷ್ಟೇ ಅಲ್ಲ. ಹೊಸ ಜೀವನ, ಹೊಸ ಸೃಷ್ಟಿ, ನಮ್ಮೊಳಗಿನ ಹೊಸ ಅನ್ವೇಷಣೆ ಹಾಗೂ ಸಾವೇ ಅಂತಿಮವಲ್ಲ ಎನ್ನುವುದುರ ಸಂಕೇತವೂ ಆಗಿದೆ ಎಂದರು.
ಚಾಪೆಲ್ನಲ್ಲಿ ಪ್ರಾರ್ಥನೆ
ಉಡುಪಿ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಶನಿವಾರ ರಾತ್ರಿ ಜರುಗಿದ ಪಾಸ್ಕ ಜಾಗರಣೆಯಲ್ಲಿ ಪಾಲ್ಗೊಂಡು, ಭಾನುವಾರ ತಮ್ಮ ನಿವಾಸದಲ್ಲಿನ ಚಾಪೆಲ್ನಲ್ಲಿ ಈಸ್ಟರ್ ಹಬ್ಬದ ನಿಮಿತ್ತ ಪ್ರಾರ್ಥನೆ ಸಲ್ಲಿಸಿದರು.
ನೆಂಟರೊಂದಿಗೆ ಭೋಜನ ಕೂಟ
ಉಡುಪಿ ಜಿಲ್ಲೆಯ ಎಲ್ಲ ಚರ್ಚ್ಗಳಲ್ಲಿ ಭಾನುವಾರದ ಈಸ್ಟರ್ ಹಬ್ಬದ ವಿಶೇಷ ಪ್ರಾರ್ಥನಾ ವಿಧಿ ಮತ್ತು ಬಲಿಪೂಜೆ ನಡೆಯಿತು. ಮನೆಗಳಲ್ಲೂ ಸಹ ನೆಂಟರು, ಅತಿಥಿಗಳನ್ನು ಸ್ವಾಗತಿಸಿ ಅವರೊಂದಿಗೆ ಹಬ್ಬದ ವಿಶೇಷ ಊಟ ಸವಿದು ಸಂತೋಷ ಹಂಚಿಕೊಂಡರು. ಭಾನುವಾರ ಬೆಳಗ್ಗೆ ಹೊಸಬಟ್ಟೆ ಧರಿಸಿ ಖುಷಿಯಿಂದ ಚರ್ಚ್ನ ಪ್ರಾರ್ಥನಾ ವಿಧಿಯಲ್ಲಿ ಪಾಲ್ಗೊಂಡ ಕೆಸ್ತರು, ಧರ್ಮಗುರುಗಳಿಂದ ಆಶೀರ್ವಾದ ಪಡೆದರು. ಶುಭಾಶಯ ವಿನಿಮಯ ಮಾಡಿಕೊಂಡು, ಮನೆಗಳಲ್ಲಿ ಕುಟುಂಬಿಕರು, ಸ್ನೇಹಿತರೊಂದಿಗೆ ಸೇರಿ ಹಬ್ಬ ಆಚರಿಸಿದರು.