ಉಡುಪಿ ಡಿಸಿ ಕಚೇರಿಯಲ್ಲಿ ಸ್ವರೂಪಾ ಟಿ.ಕೆ ಆಟೋ ಚಾಲಕ-ಮಾಲೀಕರೊಂದಿಗೆ ಸಭೆ ನಡೆಸಿದರು. ಯಶ್ಪಾಲ್ ಸುವರ್ಣ, ಹರಿರಾಂ ಶಂಕರ್ ಇತರರಿದ್ದರು.
* ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚನೆ
* ಚಾಲಕ-ಮಾಲೀಕರೊಂದಿಗೆ ವಿಶೇಷ ಸಭೆ
ಉಡುಪಿ: ನಗರ ವ್ಯಾಪ್ತಿಯಲ್ಲಿ ಕೆಲವು ಸಂಸ್ಥೆಗಳು ಡಿಜಿಟಲ್ ಆ್ಯಪ್ ಆಧಾರಿತ ಆಟೋ (ಸಾರ್ವಜನಿಕ ಸಾಗಾಣಿಕೆ)ಸೇವೆ ಒದಗಿಸುತ್ತಿದ್ದು, ಇದಕ್ಕೆ ಸರ್ಕಾರದ ಪರವಾನಗಿ ಪತ್ರ ಪಡೆಯುವುದು ಕಡ್ಡಾಯ. ಇದಕ್ಕೆ ಪರ-ವಿರೋಧದ ಅಭಿಪ್ರಾಯ ವ್ಯಕ್ತವಾಗಿದ್ದು, ಅಗತ್ಯ ದಾಖಲೆಗಳನ್ನು ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಮುಂದೆ ಹಾಜರುಪಡಿಸಿದರೆ ಸ್ಥಳಿಯ ಆಟೋ ಚಾಲಕರ ಯೂನಿಯನ್ಗಳೊಂದಿಗೆ ಸಾಧಕ-ಬಾಧಕ ಚರ್ಚಿಸಲಾಗುವುದು. ಸೂಕ್ತವಿದ್ದಲ್ಲಿ ಮಾತ್ರ ಆಟೋ ಚಲಾವಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ತಿಳಿಸಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಡುಪಿ ನಗರ ವ್ಯಾಪ್ತಿಯಲ್ಲಿ ನಮ್ಮ ಯಾತ್ರಿ ಆ್ಯಪ್ ಹಾಗೂ ರ್ಯಾಪಿಡ್ ಆ್ಯಪ್ ಆಟೋ ಸಂಚಾರ ಕುರಿತು ಆಟೋ ಚಾಲಕರ ಮತ್ತು ಮಾಲೀಕರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸೋಮವಾರ (ಫೆ.2) ಆಯೋಜಿಸಿದ್ದ ವಿಶೇಷ ಸಭೆಯಲ್ಲಿ ಮಾತನಾಡಿದರು.
ಮೀಟರ್ ಬಳಕೆ ಕಡ್ಡಾಯ
ಉಡುಪಿ ನಗರದ ವಲಯ-1ರಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ಆಟೋಗಳ ನೋಂದಣಿ ಆಗಿದ್ದು, ನಿಲ್ದಾಣಗಳಲ್ಲಿ ಸರದಿಯಂತೆ ಸೇವೆ ಒದಗಿಸುತ್ತಿದ್ದಾರೆ. ಕೆಲವರು ಹಲವು ವರ್ಷದಿಂದ ಈ ವೃತ್ತಿ ಮಾಡಿಕೊಂಡು ಬರುತ್ತಿದ್ದಾರೆ. ಅವರೆಲ್ಲರ ಅಭಿಪ್ರಾಯ ಪಡೆಯಲಾಗುವುದು. ಪ್ರಸ್ತುತ ಚಾಲನೆಯಲ್ಲಿರುವ ಎಲ್ಲ ಆಟೋಗಳು ಕಡ್ಡಾಯವಾಗಿ ಮೀಟರ್ ಬಳಕೆ ಮಾಡಬೇಕು ಎಂದು ಡಿಸಿ ಸ್ವರೂಪಾ ಸಲಹೆ ನೀಡಿದರು.
ಮೂಲ ಸೌಕರ್ಯ ಕಲ್ಪಿಸಿ
ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಉಡುಪಿ ನಗರದಲ್ಲಿ ಸಂಚರಿಸುವ ಜನರು ಹಾಗೂ ಪ್ರವಾಸಿಗರ ಬೇಡಿಕೆ ಮತ್ತು ಆಟೋ ನಿಲ್ದಾಣಗಳಲ್ಲಿ ಸಾಮರ್ಥ್ಯಕ್ಕೆ ಅನುಗುಣವಾಗಿ ಬಾಡಿಗೆ ಮಾಡಲು ಅವಕಾಶ ನೀಡಬೇಕು. ನಿಲ್ದಾಣಗಳಲ್ಲಿ ಚಾಲಕರುಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಗಮನಹರಿಸಬೇಕು. ಡಿಜಿಟಲ್ ಆ್ಯಪ್ ಆಧಾರಿತ ಆಟೋ ಸಂಚಾರದಿಂದ 25&30 ವರ್ಷದಿಂದ ಆಟೋ ಚಾಲನೆಯಿಂದಲೇ ಜೀವನ ನಡೆಸುತ್ತಿರುವವರಿಗೆ ಸಮಸ್ಯೆ ಆಗಬಹುದು. ಸೂಕ್ತ ಚರ್ಚೆ ಅಗತ್ಯ ಎಂದರು.
ಸಭೆಯಲ್ಲಿ ನಗರಸಭಾ ಪೌರಾಯುಕ್ತ ಮಹಾಂತೇಶ್ ಹಂಗರಗಿ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಂತೋಷ್ ಶೆಟ್ಟಿ, ಆಟೋ ಯೂನಿಯನ್ ಪದಾಧಿಕಾರಿಗಳು, ಚಾಲಕರು ಹಾಗೂ ಮಾಲೀಕರು ನಮ್ಮ ಯಾತ್ರಿ ಹಾಗೂ ರ್ಯಾಪಿಡ್ ಆ್ಯಪ್ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.
ನಗರ ವಲಯ-2ರಲ್ಲಿ ಪರವಾನಗಿ ಪಡೆದು ನಗರ ವ್ಯಾಪ್ತಿಯಲ್ಲಿ ಆಟೋ ಚಾಲನೆ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಆಟೋ ನಿಲ್ದಾಣಗಳಲ್ಲಿ ಈ ಹಿಂದೆ ನೋಂದಣಿ ಹೊಂದಿದವರಿಗೆ ಮಾತ್ರ ಅವಕಾಶ ಇದೆ. ನಿಲ್ದಾಣ ಹೊಂದದೇ ಇರುವ ಅಟೋ ಚಾಲಕರು ನೋಂದಣಿಗೆ ಅರ್ಜಿ ಸಲ್ಲಿಸಿದರೆ ಅಲ್ಲಿನ ಆಟೋ ದಟ್ಟಣೆ ನೋಡಿ ನಗರಸಭೆಯೊಂದಿಗೆ ಚರ್ಚಿಸಿ ಅನುಮತಿ ನೀಡಲಾಗುವುದು. ವಲಯ-1 ಹಾಗೂ ವಲಯ-2ರಲ್ಲಿ ಸಂಚರಿಸುವ ಆಟೋಗಳಿಗೆ ಕಲರ್ ಕೋಡಿಂಗ್ ಅಳವಡಿಸುವುದು ಸೂಕ್ತ.