ಉಡುಪಿಯ ಡಿಸಿ ಕಚೇರಿಯಲ್ಲಿ ನಡೆದ 'ಭಾರತ್ ಜೋಡೋ' ಯುವ ಸಂಘ ರಚನೆ ನಿಮಿತ್ತ ಆಯೋಜಿಸಿದ್ದ ಸಭೆಯಲ್ಲಿ ಸ್ವರೂಪಾ ಟಿ.ಕೆ. ಮಾತನಾಡಿದರು. ಅಬೀದ್ ಗದ್ಯಾಳ, ಡಾ.ಉದಯ್ ಶೆಟ್ಟಿ, ಸುಬ್ರಹ್ಮಣ್ಯ ಶೆಟ್ಟಿ, ಡಾ. ರೋಶನ್ ಶೆಟ್ಟಿ ಇತರರಿದ್ದರು.
* ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚನೆ
* ಇಲಾಖಾ ಅಧಿಕಾರಿಗಳೊಂದಿಗೆ ಸಭೆ
ಉಡುಪಿ: ಯುವ ಜನರಲ್ಲಿ ಕ್ರೀಡೆ, ಸಂಘತಿ, ವೈಜ್ಞಾನಿಕ ಮನೋಭಾವ, ಸಾಮಾಜಿಕ ಸಾಮರಸ್ಯ ಉತ್ತೇಜಿಸಲು, ಸಮಾಜ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಹಾಗೂ ರಾಷ್ಟ್ರ ನಿಮಾರ್ಣ ಕಾರ್ಯಗಳಲ್ಲಿ ತೊಡಗಿಕೊಳ್ಳುವಂತಾಗಲು ರಾಜ್ಯ ಸರ್ಕಾರ 'ಭಾರತ್ ಜೋಡೋ' ಯುವ ಸಂಘ ಸ್ಥಾಪಿಸಲು ಆದೇಶಿಸಿದೆ. ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಮಾರ್ಗಸೂಚಿಯನ್ವಯ ಕೂಡಲೇ ಜಿಲ್ಲೆಯಲ್ಲಿ ಅನುಷ್ಠಾನ ಮಾಡಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ (ಆ.3) ಆಯೋಜಿಸಿದ್ದ 'ಭಾರತ್ ಜೋಡೋ' ಯುವ ಸಂಘ ಸ್ಥಾಪನೆಯ ಸಭೆಯಲ್ಲಿ ಮಾತನಾಡಿದರು.
ಎಲ್ಲ ಗ್ರಾಪಂ ವ್ಯಾಪ್ತಿಗಳಲ್ಲಿ
ರಾಜ್ಯಾದ್ಯಂತ ಗ್ರಾಪಂ ಹಾಗೂ ನಗರ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹತ್ತು ಸಾವಿರ ಸಂಘಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಜಿಲ್ಲೆಯ ಎಲ್ಲ 155 ಗ್ರಾಪಂ ವ್ಯಾಪ್ತಿಯಲ್ಲಿ ತಲಾ ಒಂದರಂತೆ 'ಭಾರತ್ ಜೋಡೋ' ಸಂಘ ಸ್ಥಾಪಿಸಲಾಗುತ್ತಿದ್ದು, ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿಯೂ ಸಹ ಸರಾಸರಿ 4 ಸಾವಿರ ಜನಸಂಖ್ಯೆಗೆ ಒಂದರಂತೆ, ಪುರಸಭೆ ವ್ಯಾಪ್ತಿಯಲ್ಲಿ ಸರಾಸರಿ 6 ಸಾವಿರ ಜನಸಂಖ್ಯೆ, ನಗರಸಭೆ ವ್ಯಾಪ್ತಿಯಲ್ಲಿ ಸರಾಸರಿ 8 ಸಾವಿರ ಜನಸಂಖ್ಯೆಗೆ ಒಂದು ಸಂಘ ಸ್ಥಾಪಿಸಬೇಕಿದೆ. ಸರ್ಕಾರದಿಂದ ಹಂತಹಂತವಾಗಿ ಅನುದಾನ ಬರಲಿದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಜಿಪಂ ಮುಖ್ಯ ಯೋಜನಾಧಿಕಾರಿ ಡಾ.ಉದಯ್ ಶೆಟ್ಟಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಶೆಟ್ಟಿ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಶೆಟ್ಟಿ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಸಂಘದಲ್ಲಿ ಕನಿಷ್ಠ 16ರಿಂದ ಗರಿಷ್ಠ 35 ವರ್ಷದೊಳಗಿನ ಯುವಕ-ಯುವತಿಯರು ಸದಸ್ಯರಾಗಬಹುದು. ಆದರೆ, ಪ್ರತಿ ಸಂಘದಲ್ಲಿ ಕನಿಷ್ಠ 100 ಸದಸ್ಯರು ಇರುವುದು ಕಡ್ಡಾಯ. ಸಂಘ ಸ್ಥಾಪನೆಗೆ ಸಂಬಂಧಿಸಿ ಆ.6ರಿಂದ ಬಿಜೆವೈಎಸ್ ವೆಬ್ಸೈಟ್ನಲ್ಲಿ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ಯುವಜನರು ಅದರಲ್ಲಿ ನೋಂದಣಿ ಮಾಡಿಕೊಂಡು ಸದಸ್ಯತ್ವ ಪಡೆಯಬಹುದು. ಪ್ರತಿ ಸಂಘವು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ 15 ಸದಸ್ಯರನ್ನು ಒಳಗೊಂಡ ಆಂತರಿಕ ಕಾರ್ಯಕಾರಿ ಸಮಿತಿ ಇರಲಿದೆ. ಇದರಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಖಜಾಂಜಿ ಹಾಗೂ ಕಾರ್ಯಕಾರಿಯ 12 ಸದಸ್ಯರು ಇರಲಿದ್ದಾರೆ. ಮಹಿಳಾ ಪ್ರಾತಿನಿಧ್ಯ, ಮೀಸಲಾತಿ ಕಡ್ಡಾಯವಾಗಿರಬೇಕು ಎಂದು ಡಿಸಿ ಸೂಚಿಸಿದರು.
ಭಾರತ್ ಜೋಡೋ ಸಂಘದ ಕುರಿತಾಗಿ ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗಳಲ್ಲಿ ಯುವಜನರು, ವಿದ್ಯಾರ್ಥಿಗಳು ಹೆಚ್ಚು ಸದಸ್ಯತ್ವ ಪಡೆಯುವಂತಾಗಲು ಅರಿವು ಹಾಗೂ ವಿವಿಧ ರೀತಿಯಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಬೇಕು. ಯೋಜನೆಯ ಅನುಷ್ಠಾನಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ನಗರಾಭಿವೃದ್ಧಿ, ಕಂದಾಯ ಹಾಗೂ ಶಿಕ್ಷಣ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು.
— ಸ್ವರೂಪಾ ಟಿ.ಕೆ. ಉಡುಪಿ ಜಿಲ್ಲಾಧಿಕಾರಿ.