ಉಡುಪಿಯ ಕಟಪಾಡಿ ಎಸ್​ವಿಎಸ್​ ಪಿಯು ಕಾಲೇಜಿನಲ್ಲಿ ಪೋಕ್ಸೋ ಕಾಯಿದೆ ಕುರಿತು ನ್ಯಾ. ಎಂ.ಪುರುಷೋತ್ತಮ ವಿಶೇಷ ಉಪನ್ಯಾಸ ನೀಡಿದರು. ನಿತ್ಯಾನಂದ ಶೆಣೈ, ವೆಂಕರಮಣ ಭಟ್​, ಪ್ರೊ. ಡಾ.ದಯಾನಂದ್​ ಪೈ ಉಪಸ್ಥಿತರಿದ್ದರು. 
ಉಡುಪಿ

ಪೋಕ್ಸೋ ಅಪರಾಧಿಗಳಿಗೆ ಕಠಿಣ ಶಿಕ್ಷೆ

* ನ್ಯಾಯಾಧೀಶ ಎಂ.ಪುರುಷೋತ್ತಮ ಮಾಹಿತಿ

* ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ

ಉಡುಪಿ: ನ್ಯಾಯಾಲಯವು ಪೋಕ್ಸೋ ಪ್ರಕರಣದ ವಿಚಾರಣೆಯ ವೇಳೆ ಗಂಭೀರತೆ ಅರಿತು ಸಂತ್ರಸ್ಥೆಯರಿಗೆ ತೀರ್ಪಿನಲ್ಲಿ ಪರಿಹಾರವನ್ನೂ ಆದೇಶಿಸುತ್ತದೆ. ಅವರ ಮುಂದಿನ ಜೀವನಕ್ಕೆ ಸಹಕಾರಿಯಾಗುವಂತೆ, ಸಮಾಜದಲ್ಲಿ ಉತ್ತಮ ಜೀವನ ಕಟ್ಟಿಕೊಳ್ಳಲು ಪರಿಹಾರವನ್ನು ನಿರ್ಧರಿಸಲಾಗುತ್ತದೆ. ಅಲ್ಲದೆ, ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದು ಹಿರಿಯ ಸಿವಿಲ್​ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಪುರುಷೋತ್ತಮ ಮಾಹಿತಿ ನೀಡಿದರು.
ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಯಂತೆ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಕಾಲೇಜುಗಳಲ್ಲಿ ಪೋಕ್ಸೊ ಕಾಯಿದೆಯ ಕುರಿತಾಗಿ ಯುವಜನತೆಗೆ ಅರಿವು ಮೂಡಿಸುವ ನಿಮಿತ್ತ ಕಟಪಾಡಿಯ ಎಸ್​ವಿಎಸ್​ ಪಿಯು ಕಾಲೇಜಿನಲ್ಲಿ ಗುರುವಾರ (ಜೂ.11) ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೋಕ್ಸೋ ಕಾಯಿದೆ ಕುರಿತು ನ್ಯಾ. ಎಂ.ಪುರುಷೋತ್ತಮ ವಿಶೇಷ ಉಪನ್ಯಾಸ ನೀಡಿದರು.
ವೈದ್ಯಕೀಯ ಪರೀಕ್ಷೆ
ಸಾಕ್ಷಿದಾರರು ನ್ಯಾಯಾಲಯದಲ್ಲಿ ಸರಿಯಾದ ಹೇಳಿಕೆ ನೀಡದೇ ಇದ್ದರೂ ಸಹ ವೈದ್ಯಕೀಯ ಪರೀಕ್ಷೆಯ ಆಧಾರದಲ್ಲಿ ಆರೋಪ ಸಾಬೀತು ಮಾಡಲು ಸಾಧ್ಯವಿದೆ. ಆರೋಪ ಸಾಬೀತಾದಲ್ಲಿ ಅಪರಾಧಿಗೆ ಕನಿಷ್ಠ 10 ವರ್ಷ ಅಥವಾ ಜೀವಾವಧಿ ಶಿಕ್ಷೆ ನೀಡುವ ಅವಕಾಶ ಪೋಕ್ಸೋ ಕಾಯಿದೆಯಲ್ಲಿದೆ ಎಂದು ತಿಳಿಸಿದರು.
ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ನಿತ್ಯಾನಂದ ಶೆಣೈ, ವೆಂಕರಮಣ ಭಟ್​, ಪ್ರಾಂಶುಪಾಲ ಡಾ.ದಯಾನಂದ್​ ಪೈ ಉಪಸ್ಥಿತರಿದ್ದರು.

ನ್ಯಾಯಾಲಯದಲ್ಲಿನ ದೂರಿಗೆ ಮಾನ್ಯತೆ

ಅನೇಕರಲ್ಲಿ ಪೋಲಿಸ್​ ಠಾಣೆಗೆ ನೀಡುವುದೇ 'ದೂರು' ಎಂಬ ತಪ್ಪು ಕಲ್ಪನೆಯಿದೆ. ಬಿಎನ್​ಎಸ್​ಎಸ್​ ಸೆಕ್ಷನ್​ 2 (1)(ಎಚ್​)ರಲ್ಲಿ ದೂರು ಅಂದರೇನು ಎಂದು ವಿವರಿಸಲಾಗಿದೆ. ಪೋಲಿಸ್​ ಠಾಣೆಗೆ ನೀಡುವುದು ಪ್ರಥಮ ಮಾಹಿತಿ ಮಾತ್ರ. ಅದರ ಆಧಾರದಲ್ಲಿ ಅವರು ಎ​ಫ್ಐಆರ್​ (ಪ್ರಥಮ ವರ್ತಮಾನ ವರದಿ) ದಾಖಲಿಸುತ್ತಾರೆ. ನಂತರ ನ್ಯಾಯಾಲಯದಲ್ಲಿ ದೂರು ದಾಖಲಾಗುತ್ತದೆ. ನ್ಯಾಯಾಲಯದಲ್ಲಿ ಮಾತ್ರ ದೂರು ದಾಖಲಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ನ್ಯಾ. ಎಂ.ಪುರುಷೋತ್ತಮ ವಿವರಿಸಿದರು.
"

ಕೊಲೆ ಅಥವಾ ಇನ್ನಿತರ ಪ್ರಕರಣಗಳಲ್ಲಿ ಜೀವಾವಧಿ ಅಥವಾ ಅದಕ್ಕಿಂತ ಹೆಚ್ಚು ಶಿಕ್ಷೆಗೆ ಒಳಗಾದವರು ಜೈಲಿನಲ್ಲಿ ಸನ್ನಡತೆಯ ಆಧಾರದಲ್ಲಿ ಶಿಕ್ಷೆಯ ಪ್ರಮಾಣ ತಗ್ಗಿಸುವಂತೆ ವಿನಂತಿಸುವ ಅವಕಾಶ ಇದೆ. ಆದರೆ, ಪೋಕ್ಸೋ ಕಾಯಿದೆಯಲ್ಲಿ ಶಿಕ್ಷೆಗೆ ಒಳಗಾದರೆ ಅಪರಾಧಿಗಳು ಈ ಅವಕಾಶದಿಂದ ವಂಚಿತರಾಗುತ್ತಾರೆ.

— ಎಂ.ಪುರುಷೋತ್ತಮ. ಹಿರಿಯ ಸಿವಿಲ್​ ನ್ಯಾಯಾಧೀಶ.