ಉಡುಪಿಯ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ಆಯೋಜಿಸಿದ್ದ 'ಕುವೆಂಪು ಸಾಹಿತ್ಯ ದರ್ಶನ' ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಶಿವಕುಮಾರ್ ಅಳಗೋಡು ಮಾತನಾಡಿದರು. ಡಾ. ರಾಜಶೇಖರ್, ಡಾ. ಚಂದ್ರಕಾಂತ್ ಭಟ್, ಡಾ.ಪ್ರಜ್ಞಾ ಮಾರ್ಪಳ್ಳಿ ಇದ್ದರು.
ಡಾ.ಶಿವಕುಮಾರ್ ಅಳಗೋಡು ಅಭಿಪ್ರಾಯ
ಸಾಹಿತ್ಯ ದರ್ಶನಗಳ ವಿಶೇಷ ಉಪನ್ಯಾಸ
ಉಡುಪಿ: ಯುದ್ಧ, ಹಿಂಸೆ, ಭ್ರಷ್ಟ ರಾಜಕಾರಣದ ನಡುವೆ ನಲುಗುತ್ತಿರುವ ಜಗತ್ತಿಗೆ ಕುವೆಂಪು ಸಾರಿದ ವಿಶ್ವಮಾನವತೆಯ ಸಂದೇಶ ಬಹುದೊಡ್ಡ ಪಾಠವಾಗಿದೆ. ವರಕವಿ ದ.ರಾ. ಬೇಂದ್ರೆ ಅವರಿಂದ 'ಯುಗದ ಕವಿ ಜಗದ ಕವಿ' ಎಂದೇ ಕರೆಯಲ್ಪಟ್ಟ ರಸಋಷಿ ಕುವೆಂಪು ಅವರು ಹತ್ತು ಹಲವು ಸಂಗತಿಗಳಿಂದಾಗಿ ಈಗಲೂ ಪ್ರಸ್ತುತರೆನಿಸಿದ್ದಾರೆ. ಅವರು ಸರ್ವಕಾಲಕ್ಕೂ ಸಲ್ಲುವ ಮಹಾಕವಿಯಾಗಿದ್ದಾರೆ ಎಂದು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ್ ಅಳಗೋಡು ಅಭಿಪ್ರಾಯಪಟ್ಟರು.
ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜು ಹಾಗೂ ಕುಪ್ಪಳ್ಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ 'ಹೊಸ ತಲೆಮಾರಿಗೆ ಕುವೆಂಪು ಸಾಹಿತ್ಯ ದರ್ಶನ' ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಂಶುಪಾಲ ಡಾ. ಚಂದ್ರಕಾಂತ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಡಾ. ರಾಜಶೇಖರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಪ್ರಜ್ಞಾ ಮಾರ್ಪಳ್ಳಿ ವಂದಿಸಿದರು. ವಿದ್ಯಾರ್ಥಿ ದೇವರಾಜ್ ಪುತ್ರನ್ ಕಾರ್ಯಕ್ರಮ ನಿರೂಪಿಸಿದರು.
ರಾಷ್ಟ್ರ, ಸಮಾಜ, ಪ್ರಕೃತಿಯ ಕುರಿತಾಗಿ ಕುವೆಂಪು ಅವರ ಚಿಂತನೆಗಳು ಎಂದಿಗೂ ಆದರ್ಶಮಯ. ಅವರ ಜನ್ಮದಿನವನ್ನು 'ವಿಶ್ವಮಾನವ ದಿನ' ಎಂದು ಆಚರಿಸುತ್ತಿರುವುದು ಮತ್ತು ಅವರ ಗೌರವಾರ್ಥವಾಗಿ 3,600 ಎಕರೆಯಷ್ಟು ಪಶ್ಚಿಮ ಘಟ್ಟದ ಪರಿಸರ ಕಾಪಾಡಿರುವುದು ಅವರ ಶ್ರೇಷ್ಠತೆಯ ಪ್ರತೀಕ. ಅವರ ಸಾಹಿತ್ಯ ಓದುವ ಮೂಲಕ ನಮ್ಮೆಲ್ಲರಲ್ಲೂ 'ಕುವೆಂಪು ಚೇತನ' ಆವರಿಸಿಕೊಳ್ಳಲಿ.
— ಡಾ.ಶಿವಕುಮಾರ್ ಅಳಗೋಡು. ಕನ್ನಡ ಪ್ರಾಧ್ಯಾಪಕ.