ಬೆಂಗಳೂರಿನಲ್ಲಿ ನಡೆದ ಅಧಿವೇಶನದಲ್ಲಿ ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಮಾತನಾಡಿದರು. 
ಉಡುಪಿ

ಅಭಿವೃದ್ಧಿ ಕಾಮಗಾರಿಗೆ ನೀಡಿ ವಿಶೇಷ ಅನುದಾನ

* ಅಧಿವೇಶನದಲ್ಲಿ ಶಾಸಕ ಯಶ್​ಪಾಲ್​ ಸುವರ್ಣ ಆಗ್ರಹ 

* ರಸ್ತೆಗೆ ತೇಪೆ ಹಾಕಲೂ ಇಲ್ಲ ನಗರಸಭೆಯಲ್ಲಿ ಹಣ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಿಂದಾಗಿ ನಗರಭಾಗದ ರಸ್ತೆಗಳೆಲ್ಲ ತೀವ್ರ ಹದಗೆಟ್ಟಿದ್ದು ದುರಸ್ತಿಗೆ ಹಾಗೂ ಉಡುಪಿ ತಾಲೂಕಿನಲ್ಲಿ ಅಭಿವೃದ್ಧಿಗೆ ಕಾಮಗಾರಿಗಳಿಗೆ ವಿಶೇಷ ಅನುದಾನ ಒದಗಿಸಿಕೊಡಬೇಕು ಎಂದು ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ವಿಧಾನಸಭಾ ಅಧಿವೇಶನದಲ್ಲಿ ಸಭಾಧ್ಯಕ್ಷ ಯು.ಟಿ. ಖಾದರ್​ ಅವರಿಗೆ ಶುಕ್ರವಾರ (ಡಿ.12) ಮನವಿ ಮಾಡಿದರು. 
 ಜಿಲ್ಲಾ ಕೇಂದ್ರವಾಗಿರುವ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.60ರಷ್ಟು ಪ್ರದೇಶ ಉಡುಪಿ ನಗರಸಭಾ ವ್ಯಾಪ್ತಿಗೆ ಒಳಪಟ್ಟಿದೆ. 2023, 2024 ಹಾಗೂ 2025ರಲ್ಲಿ ಉಡುಪಿ ಜಿಲ್ಲೆಯಲ್ಲಿ ವಾಡಿಕೆಗಿಂತ ಅತಿಹೆಚ್ಚು ಮಳೆಯಾಗಿದೆ. ಹೀಗಾಗಿ ರಸ್ತೆಗಳೆಲ್ಲ ಸಂಪೂರ್ಣ ಹದಗೆಟ್ಟಿದ್ದು, ವಾಹನಗಳ ಸುಗಮ ಸಂಚಾರಕ್ಕೆ ತೊಡಕಾಗುತ್ತಿದೆ. ನಡೆದಾಡಲೂ ಸಹ ಜನರು ತುಂಬ ಕಷ್ಟ ಅನುಭವಿಸುತ್ತಿದ್ದಾರೆ. ಚರಂಡಿಯೂ ಸಹ ಕೊಚ್ಚಿಹೋಗಿದೆ ಎಂದು ತಿಳಿಸಿದರು.

100 ಕೋಟಿ ರೂ. ಹಾನಿ

ಒಂದು ಭಾಗದಲ್ಲಿ ಸಮುದ್ರ ಹಾಗೂ ಇನ್ನೊಂದು ಭಾಗದಲ್ಲಿ ಹೆಚ್ಚು ನದಿ ಇರುವುದರಿಂದ ಮಳೆಗಾಲದಲ್ಲಿ ಅಪಾರ ಹಾನಿಯಾಗಿದೆ. ವರದಿ ಪ್ರಕಾರ 100 ಕೋಟಿ ರೂ.ಗೂ ಅಧಿಕ ಹಾನಿಯಾಗಿರುವುದಾಗಿ ಜಿಲ್ಲಾಧಿಕಾರಿಯೇ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ. ಇಷ್ಟೊಂದು ಹಾನಿಯಾಗಿದ್ದರೂ ಸಹ ಸರ್ಕಾರದಿಂದ ಒಂದಿಷ್ಟೂ ಅನುದಾನ ಇಲ್ಲ. ರಸ್ತೆಗೆ ತೇಪೆ ಹಾಕಲೂ ಸಹ ಹಣ ಬಿಡುಗಡೆ ಆಗಿಲ್ಲ. ಅಭಿವೃದ್ಧಿ ಕಾರ್ಯವೇ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯುಜಿಡಿ ಯೋಜನೆ ನೀಡಿ

ಬರುವ ಜನವರಿ 18ರಂದು ಉಡುಪಿ ಮಠದಲ್ಲಿ ಐತಿಹಾಸಿಕ ಪರ್ಯಾಯ ಆರಂಭಗೊಳ್ಳಲಿದೆ. ಹೀಗಾಗಿ ಉಡುಪಿ ನಗರಕ್ಕೆ ಹೊಸ ಯುಜಿಡಿ ಯೋಜನೆ ನೀಡಬೇಕು. ಉಡುಪಿ ನಗರಸಭೆಯನ್ನು ಮೇಲ್ದರ್ಜೆಗೆ ಏರಿಸುವ ವಿಚಾರವೂ ಸಹ ನನೆಗುದಿಗೆ ಬಿದ್ದಿದೆ. ನಗರಸಭಾ ವ್ಯಾಪ್ತಿಯಲ್ಲಿ 3 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದ್ದು, ಸುಮಾರು 800 ಕಿ.ಮೀ. ರಸ್ತೆ ಹಾನಿಗೊಳಗಾಗಿದೆ. ಉಡುಪಿ ನಗರ ಹಾಗೂ ತಾಲೂಕಿನ ಅಭಿವೃದ್ಧಿಗೆ ಸರ್ಕಾರ ವಿಶೇಷ ಅನುದಾನ ನೀಡಬೇಕು ಎಂದು ಸಭಾಧ್ಯಕ್ಷರ ಗಮನಕ್ಕೆ ತಂದರು.