ಉಡುಪಿಯ ಮಣಿಪಾಲದಲ್ಲಿ ಆಯೋಜಿಸಿದ್ದ ಬಿ.ಟೆಕ್ ಲ್ಯಾಟರಲ್ ಎಂಟ್ರಿ ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಾಗಾರವನ್ನು ಡಾ. ಚಂದ್ರಕಲಾ ಸಿ.ಬಿ. ಉದ್ಘಾಟಿಸಿದರು. ಡಾ. ರವಿಪ್ರಕಾಶ್ ವೈ., ಡಾ. ಹರಿಕೃಷ್ಣ, ವಿದ್ಯಾರ್ಥಿಗಳಿದ್ದರು.
* ಎಂಐಟಿ ಉಸ್ತುವಾರಿ ನಿರ್ದೇಶಕಿ ಡಾ. ಚಂದ್ರಕಲಾ ಸಿ.ಬಿ. ಅನಿಸಿಕೆ
* ಬಿ.ಟೆಕ್ ಲ್ಯಾಟರಲ್ ಎಂಟ್ರಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಾಗಾರ
ಉಡುಪಿ: ವಿದ್ಯಾರ್ಥಿಗಳು ನಾವೀನ್ಯತೆ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು. ಸುತ್ತಮುತ್ತಲಿನ ಪ್ರದೇಶಗಳಿಂದಲೇ ಕಲಿತು, ಹೊಸ ಹೊಸ ಅವಕಾಶಗಳನ್ನು ಅನ್ವೇಷಿಸಬೇಕು. ತನ್ಮೂಲಕ ಸಮಾಜ ಮತ್ತು ರಾಷ್ಟ್ರದ ಪ್ರಗತಿಗೆ ಅರ್ಥಪೂರ್ಣವಾಗಿ ಕೊಡುಗೆ ನೀಡಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ ಗಳಿಸಬೇಕು. ಇಂದಿನ ಯುವಕರಾದ ತಾವುಗಳೇ ನಾಳೆಯ ಸುಸ್ಥಿರ ಭವಿಷ್ಯದ ನಿರ್ಮಾತೃರಾಗಬೇಕು ಎಂದು ಎಂಐಟಿ ಮಣಿಪಾಲದ ಉಸ್ತುವಾರಿ ನಿರ್ದೇಶಕಿ ಡಾ. ಚಂದ್ರಕಲಾ ಸಿ.ಬಿ. ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಮಣಿಪಾಲದಲ್ಲಿ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಹಾಗೂ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ವತಿಯಿಂದ ಬಿ.ಟೆಕ್ ಲ್ಯಾಟರಲ್ ಎಂಟ್ರಿ ವಿದ್ಯಾರ್ಥಿಗಳಿಗಾಗಿ ಬುಧವಾರ (ಜು.8) ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮುಂದಿನ ಮೂರು ವರ್ಷದಲ್ಲಿ ಬಿ.ಟೆಕ್ ಲ್ಯಾಟರಲ್ ಎಂಟ್ರಿ ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಶೈಕ್ಷಣಿಕ ಪಠ್ಯಕ್ರಮ, ನಿಯಮ ಮತ್ತು ಕಲಿಕಾ ಅವಕಾಶಗಳ ಕುರಿತು ಅಸೋಸಿಯೇಟ್ ಡೈರೆಕ್ಟರ್ (ಶೈಕ್ಷಣಿಕ) ಡಾ. ರವಿಪ್ರಕಾಶ್ ವೈ. ಮಾಹಿತಿ ನೀಡಿದರು.
ಅಸೋಸಿಯೇಟ್ ಡೈರೆಕ್ಟರ್ (ವಿದ್ಯಾರ್ಥಿ ವ್ಯವಹಾರಗಳು) ಡಾ. ಹರಿಕೃಷ್ಣ ಶೈಕ್ಷಣಿಕ ಅವಕಾಶಗಳ ಕುರಿತಾಗಿ ಸಮಗ್ರ ಮಾಹಿತಿ ನೀಡಿದರು.
ವಿದ್ಯಾರ್ಥಿಗಳೊಂದಿಗೆ ಸಂವಾದವೂ ನಡೆಯಿತು. ಭವಿಷ್ಯದಲ್ಲಿ ಲಭ್ಯವಿರುವ ಅವಕಾಶಗಳ ಕುರಿತಾಗಿ ಮಾಹಿತಿ ನೀಡಲಾಯಿತು.