ಗಡಿಪಾರು ಆದೇಶಕ್ಕೊಳಗಾದ ವಿವಿಧ ಪ್ರಕರಣಗಳ ಆರೋಪಿಗಳು. 
ಉಡುಪಿ

ಉಡುಪಿ ಜಿಲ್ಲೆಯ ಮೂವರಿಗೆ ಗಡಿಪಾರು

* ಎಸ್ಪಿ ಹರಿರಾಂ ಶಂಕರ್​ ಆದೇಶ

* ಠಾಣೆಯಲ್ಲಿ ರೌಡಿ ಶೀಟ್​ ಓಪನ್​

B ಜಿಲ್ಲೆಯ ಹಿರಿಯಡ್ಕ ಪೊಲೀಸ್​ ಠಾಣಾ ವ್ಯಾಪ್ತಿಯ ಸಂದೇಶ, ಸುಶಾಂತ್​ ಹಾಗೂ ಪಡುಬಿದ್ರಿ ಪೊಲೀಸ್​ ಠಾಣಾ ವ್ಯಾಪ್ತಿಯ ಜಬ್ಬಾರ್​ ಹುಸೇನ್​ ಎಂಬವರ ವಿರುದ್ಧ ವಿಶೇಷ ಕಾರ್ಯಾಂಗ ದಂಡಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್​ ವರಿಷ್ಠ ಹರಿರಾಂ ಶಂಕರ್​ ಅವರು ಗಡಿಪಾರು ಆದೇಶ ಹೊರಡಿಸಿದ್ದಾರೆ.
ಕಾಪು ತಾಲೂಕಿನ ನಡ್ಸಾಲು ಗ್ರಾಮದ ಜಬ್ಬಾರ್​ ಹುಸೈನ್​, ಉಡುಪಿ ತಾಲೂಕಿನ ಬೊಮ್ಮರಬೆಟ್ಟು ಗ್ರಾಮದ ಪುತ್ತಿಗೆ ಮುಖ್ಯ ರಸ್ತೆ ಮಾರ್ಗ ನಿವಾಸಿ ಸಂದೇಶ್​ ಸದಾಶಿವ್​ ನಾಯ್ಕ್​ ಹಾಗೂ ಹಿರಿಯಡ್ಕ ಪಾಪುಜೆ ದರ್ಖಾಸು ನಿವಾಸಿ ಸುಶಾಂತ್​ ಸದಾನಂದ್​ ಪೂಜಾರಿ ಇವರು ಗಡಿಪಾರು ಆದೇಶಕ್ಕೆ ಒಳಗಾದವರು.

ವಿವಿಧ ಪ್ರಕರಣ ಹಿನ್ನೆಲೆ

ಜಬ್ಬಾರ್​ ಹುಸೈನ್​ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ರೌಡಿ ಶೀಟ್​ ತೆರೆಯಲಾಗಿದ್ದು, ಈತನ ವಿರುದ್ಧ ಉಡುಪಿ. ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆ ಹಾಗೂ ಮಂಗಳೂರ ನಗರದಲ್ಲಿ ಇದುವರೆಗೆ ಒಟ್ಟು 16 ಪ್ರಕರಣ ದಾಖಲಾಗಿದೆ. ಹಿರಿಯಡ್ಕ ಠಾಣಾ ವ್ಯಾಪ್ತಿಯ ಸಂದೇಶ್​ ನಾಯ್ಕ್​ ವಿರುದ್ಧ ಐದು ಪ್ರಕರಣ ದಾಖಲಾಗಿದ್ದು, ರೌಡಿ ಶೀಟ್​ ತೆರೆಯಲಾಗಿದೆ. ಹಿರಿಯಡ್ಕ ಠಾಣಾ ವ್ಯಾಪ್ತಿಯ ಸುಶಾಂತ್​ ಪೂಜಾರಿ ವಿರುದ್ಧ ಮೂರು ಪ್ರಕರಣ ದಾಖಲಾಗಿದೆ.
ಜಬ್ಬಾರ್​ ಹುಸೈನ್​ನನ್ನು ಹಾಸನ ಜಿಲ್ಲೆಯ ಪೆನ್ಷನ್​ ಮೊಹಲ್ಲಾ ಠಾಣಾ ವ್ಯಾಪ್ತಿಗೆ , ಸಂದೇಶ್​ನನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಗೆ ಹಾಗೂ ಸುಶಾಂತ್​ನನ್ನು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪೊಲೀಸ್​ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ ಎಂದು ಎಸ್ಪಿ ಹರಿರಾಂ ಶಂಕರ್​ ತಿಳಿಸಿದ್ದಾರೆ.