ಉಡುಪಿಯಲ್ಲಿ ಆಯೋಜಿಸಿದ್ದ 'ನಶಾಮುಕ್ತ ಭಾರತ ಅಭಿಯಾನ'ವನ್ನು ಹರಿರಾಮ್​ ಶಂಕರ್​ ಉದ್ಘಾಟಿಸಿದರು. ಮಾಲತಿದೇವಿ ಎ., ಶಂಕರ್​ ನಾಯ್ಕ್​, ಗಾಯತ್ರಿ ಗಿರಿಧರ್​ ಪೈ, ವಿಶ್ವನಾಥ್​ ಪೈ, ಅಮ್ಮುಂಜೆ ರಮೇಶ್​ ನಾಯಕ್​, ವಿ.ಜಿ. ಶೆಟ್ಟಿ ಇತರರಿದ್ದರು. 
ಉಡುಪಿ

ಮಾದಕ ವಸ್ತುಗಳ ನಿಯಂತ್ರಣಕ್ಕೆ ಕ್ಯುಆರ್​ ಕೋಡ್​

* ಉಡುಪಿ ಎಸ್ಪಿ ಹರಿರಾಮ್​ ಶಂಕರ್​ ಮಾಹಿತಿ

* 'ನಶಾಮುಕ್ತ ಭಾರತ ಅಭಿಯಾನ' ಉದ್ಘಾಟನೆ

ಉಡುಪಿ: ಯುವಸಮುದಾಯ ಮಾದಕ ವ್ಯಸನಿಗಳಾಗುತ್ತಿರುವ ಪ್ರಕರಣ ಹೆಚ್ಚುತ್ತಿದೆ. ಒಂದು ಕ್ಷಣದಲ್ಲಿ ದುಡುಕಿನ ನಿರ್ಧಾರದಿಂದಾಗಿ ಭವಿಷ್ಯ ಹಾಳುಮಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಜನೆ ಸಮಯದಲ್ಲಿ ಇಂತಹ ಮಾರಕ ವ್ಯಸನಗಳಿಗೆ ಬಲಿಯಾಗದೆ ಶೈಕ್ಷಣಿಕ ಸಾಧನೆಯತ್ತ ಗಮನ ಹರಿಸಬೇಕು. ಮಾದಕ ವಸ್ತುಗಳ ನಿಯಂತ್ರಣಕ್ಕಾಗಿ ಪೊಲೀಸ್​ ಇಲಾಖೆಯಿಂದ ಕ್ಯುಆರ್​ ಕೋಡ್​ ಆರಂಭಿಸಲಾಗಿದೆ. ಯಾರಾದರೂ ಮಾದಕ ವಸ್ತುಗಳ ಸಾಗಾಟ-ಮಾರಾಟ ಅಥವಾ ಸೇವಿಸುವುದು ಕಂಡು ಬಂದಲ್ಲಿ ಮಾಹಿತಿ ನೀಡಬಹುದು. ಅಂತಹವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಜಿಲ್ಲಾ ಪೊಲೀಸ್​ ವರಿಷ್ಠ ಹರಿರಾಮ್​ ಶಂಕರ್​ ತಿಳಿಸಿದರು. 
ಉಡುಪಿಯ ಎಂಜಿಎಂ ಕಾಲೇಜಿನ ವತಿಯಿಂದ ನೂತನ ರವೀಂದ್ರ ಮಂಟಪದಲ್ಲಿ ಜಿಲ್ಲಾ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ, ಉಡುಪಿ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘ (ರಿ.)ದ ವತಿಯಿಂದ ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ನಿಮಿತ್ತ ಗುರುವಾರ (ಜೂ.25) ಆಯೋಜಿಸಿದ್ದ 'ನಶಾಮುಕ್ತ ಭಾರತ ಅಭಿಯಾನ' ಉದ್ಘಾಟಿಸಿ ಮಾತನಾಡಿದರು.
ಎಂಜಿಎಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಾಲತಿದೇವಿ ಎ. ಅಧ್ಯಕ್ಷತೆ ವಹಿಸಿದ್ದರು. ಡಾ. ಎ.ವಿ. ಬಾಳಿಗಾ ಆಸ್ಪತ್ರೆ ದೊಡ್ಡಣಗುಡ್ಡೆಯ ಖ್ಯಾತ ಮನೋವೈದ್ಯ ಡಾ. ಪಿ.ವಿ. ಭಂಡಾರಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದರು.
ಎಂಜಿಎಂ ಪದವಿ ಕಾಲೇಜಿನ ಪ್ರಾಂಶುಪಾಲೆ ಗಾಯತ್ರಿ ಗಿರಿಧರ್​ ಪೈ, ಉಪ ಪ್ರಾಂಶುಪಾಲ ವಿಶ್ವನಾಥ್​ ಪೈ, ಉಡುಪಿ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಮ್ಮುಂಜೆ ರಮೇಶ್​ ನಾಯಕ್​ ಉಪಸ್ಥಿತರಿದ್ದರು. 
ಕಾಲೇಜಿನ ವಿದ್ಯಾರ್ಥಿನಿ ಅದಿತಿ ಐತಾಳ್​ ಪ್ರಾರ್ಥಿಸಿದರು. ಕಾಲೇಜಿನ ಕಂಪ್ಯೂಟರ್​ ಸೈನ್ಸ್​ ವಿಭಾಗದ ಉಪನ್ಯಾಸಕಿ ಭಾರತಿ ಸ್ವಾಗತಿಸಿದರು. ಉಡುಪಿ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ನಿಕಟಪೂರ್ವ ಅಧ್ಯಕ್ಷ ವಿ.ಜಿ. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಸಂಸ್ಕೃತ ಉಪನ್ಯಾಸಕ ಮುರಳೀಧರ್​ ಎನ್​. ಕಾರ್ಯಕ್ರಮ ನಿರ್ವಹಿಸಿದರು.   

ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ

ಅಭಿಯಾನದ ನಿಮಿತ್ತ ಸಭಾ ಕಾರ್ಯಕ್ರಮಕ್ಕೂ ಮೊದಲು ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಜಿಲ್ಲಾ ಔಷಧ ವ್ಯಾಪಾರಿಗಳು ಜನ ಜಾಗೃತಿ ಜಾಥಾ ನಡೆಸಿದರು. ಕಾಲೇಜು ಆವರಣದಿಂದ ಮೆರವಣಿಗೆ ಹೊರಟು ಉಡುಪಿ ನಗರದತ್ತ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಘೋಷಣೆ ಕೂಗುತ್ತ ಓಷಿಯನ್​ ಪರ್ಲ್​ ಹೋಟೆಲ್​ ವರೆಗೆ ಜಾಥಾ ನಡೆಸಿದರು. ಮತ್ತೆ ಮಣಿಪಾಲ ಮಾರ್ಗದ ಹೆದ್ದಾರಿ ಮೂಲಕ ಪುನ: ಕಾಲೇಜಿನತ್ತ ಸಾಗಿ ಬಂದರು.  

ಔಷಧ-ಮಾತ್ರೆಗಳ ದುರುಪಯೋಗ 

ಉಡುಪಿ ಜಿಲ್ಲಾ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಸಹಾಯಕ ಔಷಧ ನಿಯಂತ್ರಕ ಶಂಕರ್​ ನಾಯ್ಕ್​ ಮಾತನಾಡಿ, ಚಿಕಿತ್ಸಾ ಉಪಯೋಗಿ ಅವಲಂಬನೆಯ ಔಷಧ-ಮಾತ್ರೆಗಳ ದುರುಪಯೋಗ ಆಗುತ್ತಿದೆ. ಅಮಲಿನಲ್ಲಿರಲು ನೋವು ನಿವಾರಕ ಹಾಗೂ ನಿದ್ರೆಯ ಮಾತ್ರೆಯನ್ನು ಅನಗತ್ಯವಾಗಿ ಸೇವಿಸುವುದು ಕಂಡು ಬರುತ್ತಿದೆ. ಇದರಿಂದ ಕಿಡ್ನಿ, ಲೀವರ್​ ಹಾಳಾಗಿ ಜೀವಹಾನಿ ಉಂಟಾಗುತ್ತದೆ. ಹೀಗಾಗಿ ಅಂತಹ ಔಷಧ ಬ್ಯಾನ್​ ಆಗುತ್ತಿದ್ದು, ಕೆಲವೊಂದು ರೋಗಗಳಿಗೆ ಔಷಧಗಳ ಅಲಭ್ಯತೆ ಉಂಟಾಗುತ್ತದೆ. ಯುವ ಜನರು ಔಷಧಗಳ ದುರುಪಯೋಗ ಮಾಡಬಾರದು. ಸ್ವಸ್ಥ ಸಮಾಜದಲ್ಲಿ ಆನಂದದಿಂದ ಜೀವಿಸುವ ಅವಕಾಶ ಕಳೆದುಕೊಳ್ಳಬಾರದು. ಔಷಧಗಳ ದುರುಪಯೋಗ ತಡೆಯಲು ಇಲಾಖೆಯೂ ತೀವ್ರ ನಿಗಾ ವಹಿಸುತ್ತಿದೆ ಎಂದರು.  
"

ಮಾದಕ ವ್ಯಸನಕ್ಕೆ ತುತ್ತಾದರೆ ಅದರಿಂದ ಹೊರ ಬರಲು ಸಾಧ್ಯವೇ ಇಲ್ಲ. ಅಂತಹವರಿಗೆ ಸಮಾಜದಲ್ಲಿ ಹಾಗೂ ಅವರ ಮನೆಯವರಿಗೂ ಸಹ ಗೌರವ ಲಭಿಸದು. ಮಾದಕದ್ರವ್ಯ ಸೇವನೆ ಕುರಿತು ಯುವಸಮುದಾಯದ ದಾರಿ ತಪ್ಪಿಸುವವರಿದ್ದಾರೆ. ಅವರಿಂದಲೂ ಜಾಗೃತರಾಗಿರಬೇಕು.

— ಡಾ. ಪಿ.ವಿ. ಭಂಡಾರಿ. ಖ್ಯಾತ ಮನೋವೈದ್ಯ.