ಉಡುಪಿ: ಜನ್ಮ ನೀಡಿದ ತಾಯಿಯನ್ನೇ ಪುತ್ರನೋರ್ವ ಕಾರಿನಲ್ಲಿ ಕರೆತಂದು ಅಪರಿಚಿತ ಸ್ಥಳದಲ್ಲಿ ಬಿಟ್ಟುಹೋದ ಅಮಾನವೀಯ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ.
ತಮಿಳುನಾಡಿನ ತಿರವುಳ್ಳೂರು ನಿವಾಸಿ ಸರಸ್ವತಿ (72) ಮಕ್ಕಳಿಂದಲೇ ಪರಿತ್ಯಕ್ತಳಾದ ತಾಯಿ.
ಬ್ರಹ್ಮಾವರದ ಎಸ್ಎಂಎಸ್ ಆಂಗ್ಲ ಮಾಧ್ಯಮ ಶಾಲೆಯ ಬಳಿ ಅಸಹಾಯಕ ಸ್ಥಿತಿಯಲ್ಲಿದ್ದ ಹಾಗೂ ದಿಕ್ಕು ತೋಚದೆ ಚಡಪಡಿಸುತ್ತಿದ್ದ ಅಪರಿಚಿತ ವೃದ್ಧೆಯನ್ನು ಶಾಲೆಯ ಬಸ್ ಚಾಲಕ ರಾಮನಾಥ್ ಶೆಣೈ ಗಮನಿಸಿ, ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದರು. ತಕ್ಷಣ ಸ್ಪಂದಿಸಿದ ನಿತ್ಯಾನಂದ ಒಳಕಾಡು, 112 ತುರ್ತು ಪೊಲೀಸ್ ಸಹಾಯವಾಣಿ ಸಿಬ್ಬಂದಿ ನೆರವಿನಿಂದ ವೃದ್ಧೆಯನ್ನು ರಕ್ಷಿಸಿ ಉಡುಪಿ ಜಿಲ್ಲಾಸ್ಪತ್ರೆಗೆ ತಂದು ದಾಖಲಿಸಿದರು.
ಮೊಮ್ಮಗನೂ ಇದ್ದ
ಪುತ್ರ ಪ್ರದೀಪ್ ಕುಮಾರ್ ಕಾರಿನಲ್ಲಿ ನನ್ನನ್ನು ಇಲ್ಲಿಗೆ ತಂದು, ಬಳಿಕ ಆಟೋದವರನ್ನು ಕರೆದು ನನ್ನನ್ನು ಈ ಶಾಲೆಯ ಹತ್ತಿರ ಬಿಡಿ, ಅವರನ್ನು ಕರೆದುಕೊಂಡು ಹೋಗಲು ಜನ ಬರುತ್ತಾರೆ ಎಂದು ತಿಳಿಸಿ ಹೋಗಿದ್ದಾರೆ. ನನ್ನ ಮಗನೊಂದಿಗೆ ಮೊಮ್ಮಗ ಶಿವಾನಂದ್ ಸಹ ಇದ್ದ ಎಂದು ನೊಂದ ವೃದ್ಧೆ ತಿಳಿಸಿದ್ದಾರೆ. ಯಾಕಾಗಿ ಪುತ್ರ ಈ ರೀತಿ ಮಾಡಿದ ಎಂದು ಪ್ರಶ್ನಿಸಿದರೆ ಉತ್ತರಿಸದ ಆ ತಾಯಿಯ ಕಣ್ಣೀರು ಆಕೆಗೆ ಎದುರಾದ ಸಂಕಷ್ಟಕ್ಕೆ ಉತ್ತರವಾಗಿತ್ತು.
ಅನಾರೋಗ್ಯದಲ್ಲಿರುವಂತೆ ಕಾಣುವ ವೃದ್ಧೆ ನೈಟಿ ಧರಿಸಿದ್ದು, ಆಕೆಯ ಬಳಿ ಒಂದಿಷ್ಟು ಮಾತ್ರೆಯೂ ಇದೆ. ತೀವ್ರ ಕಾಲುನೋವಿನಿಂದ ಬಳಲುತ್ತಿರುವ ಆಕೆಗೆ ನಡೆದಾಡಲು ಆಗದ ಸ್ಥಿತಿಯಿದ್ದು, ಅವರ ಬಳಿ ಹೊಸ ವಾಕರ್ ಕೂಡ ಇತ್ತು. ವೃದ್ಧ ತಾಯಿಯೋರ್ವಳ ಈ ಸ್ಥಿತಿ ಕಂಡು ಸ್ಥಳದಲ್ಲಿದ್ದ ಸಾರ್ವಜನಿಕರು ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಘಟನೆಯ ಕುರಿತು ನಿತ್ಯಾನಂದ ಒಳಕಾಡು ಅವರು ಮಹಿಳಾ ಪೊಲೀಸ್ ಠಾಣೆಗೆ ಹಾಗೂ ಹಿರಿಯ ನಾಗರಿಕರ ಸಹಾಯವಾಣಿಗೆ ಮೌಖಿಕವಾಗಿ ಮಾಹಿತಿ ನೀಡಿದ್ದಾರೆ.