ಹೆತ್ತವರನ್ನು ಹತ್ಯೆ ಮಾಡಿದ ಆರೋಪಿ ಶಾಹಿದ್​ ಅಲಿ. 
ಉಡುಪಿ

ಹೆತ್ತವರನ್ನೇ ಹತ್ಯೆ ಮಾಡಿದ ಕುಪುತ್ರ

* ಉಡುಪಿ ಜಿಲ್ಲೆ ಬ್ರಹ್ಮಾವರದಲ್ಲಿ ದುರ್ಘಟನೆ

* ಸುತ್ತಿಗೆಯಿಂದ ಹೊಡದು ಕೊಲೆ

ಉಡುಪಿ: ಜನ್ಮ ನೀಡಿದ ತನ್ನ ತಂದೆ-ತಾಯಿಯನ್ನೇ ನಿರ್ದಯಿಯಾದ ಪುತ್ರ ಭೀಕರವಾಗಿ ಹತ್ಯೆ ಮಾಡಿದ ಘಟನೆ ಬ್ರಹ್ಮಾವರ ತಾಲೂಕಿನ ಬೈಕಾಡಿ ಗ್ರಾಮದ ಗಾಂಧಿ ನಗರದಲ್ಲಿ ನಡೆದಿದೆ. 
ಶಾಹಿದ್​ ಅಲಿ (31) ಹೆತ್ತವರನ್ನೇ ಕೊಲೆ ಮಾಡಿದ ಆರೋಪಿಯಾಗಿದ್ದು, ತಂದೆ ಮೆಹಬೂಬ್​ ಅಲಿ (55), ತಾಯಿ ಸಂಶದ್​ ಬೇಗಂ (50) ಮಗನಿಂದಲೇ ಸಾವು ಕಂಡ ನತದೃಷ್ಟರು.

ಕೊಂದಿದ್ದಾಗಿ ಕರೆ ಮಾಡಿದ ಮಗ

ಆ.23ರಂದು ಸಂಜೆ 7 ಗಂಟೆಯ ವೇಳೆಯಲ್ಲಿ ಅಪ್ಪ-ಅಮ್ಮನ ತಲೆಗೆ ಸುತ್ತಿಗೆಯಿಂದ ಹೊಡೆದು ಸಾಯಿಸಿದ್ದಾನೆ. ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಅವರ ಮೇಲೆ ಒಂದಿಷ್ಟೂ ಕನಿಕರವಿಲ್ಲದೆ ಸುತ್ತಿಗೆಯಿಂದ ಪದೇಪದೆ ಹೊಡೆದು ಕೊಂದಿದ್ದಾನೆ. ರಾತ್ರಿಯಿಡೀ ಸುಮ್ಮನೆ ಇದ್ದ ಆತ, ಸೋಮವಾರ (ಆ.24) ಬೆಳಗ್ಗೆ 9 ಗಂಟೆಗೆ 112 ನಂಬರ್​ ಕರೆ ಮಾಡಿ ತಾನು ತಂದೆ-ತಾಯಿಯನ್ನು ನಿನ್ನೆ ಕೊಲೆ ಮಾಡಿದ್ದಾಗಿ ತಿಳಿಸಿದ್ದಾನೆ.

ವಶಕ್ಕೆ ಪಡೆದ ಪೊಲೀಸರು

ಕರೆ ಸ್ವೀಕರಿಸಿದ ಬಳಿಕ ಕೂಡಲೇ ಸ್ಥಳಕ್ಕೆ ಧಾವಿಸಿದ ಬ್ರಹ್ಮಾವರ ಠಾಣೆ ಪೊಲೀಸರು, ಪಾಲಕರನ್ನು ಹತ್ಯೆ ಮಾಡಿದ ಮಗನನ್ನು ವಶಕ್ಕೆ ಪಡೆದರು. ವಿಚಾರಣೆ ವೇಳೆ ಆತ ನನ್ನ ತಂದೆ-ತಾಯಿ ಪ್ರತಿನಿತ್ಯ ಮಾನಸಿಕ ಹಿಂಸೆ ನೀಡುತ್ತಿದ್ದರು. ಅವರ ವರ್ತನೆಯಿಂದ ನಾನು ರೋಸಿ ಹೋಗಿದ್ದೆ. ಹೀಗಾಗಿ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ. 
ಜಿಲ್ಲಾ ಪೊಲೀಸ್​ ವರಿಷ್ಠ ಹರಿರಾಮ್​ ಶಂಕರ್​ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಬ್ರಹ್ಮಾವರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.