ಸಾಂದರ್ಭಿಕ ಚಿತ್ರ  
ಉಡುಪಿ

ಆಸ್ತಿ ಬರೆಸಿಕೊಂಡು ಹೆತ್ತವರನ್ನು ಹೊರದಬ್ಬಿದ ಮಗ

ಗೋಪಾಲಕೃಷ್ಣ ಪಾದೂರ್
ಉಡುಪಿ: ತಾಯಿಯ ಹೆಸರಿನಲ್ಲಿದ್ದ ಮನೆ ಹಾಗೂ ಜಾಗವನ್ನು ಬಲವಂತವಾಗಿ ತನ್ನ ಹೆಸರಿಗೆ ನೋಂದಾಯಿಸಿಕೊಂಡು, ಬಳಿಕ ಹೆತ್ತವರನ್ನು ಮನೆಯಿಂದ ಹೊರಹಾಕಿದ ಆರೋಪದಡಿ ಮಗನ ವಿರುದ್ಧ ಮಲ್ಪೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಡಾನಿಡಿಯೂರು ಗ್ರಾಮದ ನಿವಾಸಿ ಸರಸು ಸುವರ್ಣ (69) ಎಂಬುವರು ತಮ್ಮ ಎರಡನೇ ಮಗ ವಿನೋದ ಸುವರ್ಣ ಎಂಬಾತನೊಂದಿಗೆ ವಾಸವಾಗಿದ್ದರು. ಸರಸು ಸುವರ್ಣ ಅವರ ಹೆಸರಿನಲ್ಲಿದ್ದ ಮನೆಯನ್ನು ತನ್ನ ಹೆಸರಿಗೆ ಮಾಡಿಕೊಡುವಂತೆ ವಿನೋದ ಪೀಡಿಸುತ್ತಿದ್ದ ಎನ್ನಲಾಗಿದೆ. ಆದರೆ ತಾಯಿ ಇದಕ್ಕೆ ನಿರಾಕರಿಸಿದಾಗ, ಆರೋಪಿ ವಿನೋದನು ತಾಯಿ ಸರಸು ಹಾಗೂ ತಂದೆ ದಾಸು ತಿಂಗಳಾಯ ಅವರಿಗೆ ಕೈಯಿಂದ ಹೊಡೆದು ಹಲ್ಲೆ ನಡೆಸಿ, ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ.

ನಂತರ ಆರೋಪಿಯು ಹೆತ್ತವರನ್ನು ಒತ್ತಾಯಪೂರ್ವಕವಾಗಿ ಸಬ್​ ರಿಜಿಸ್ಟ್ರಾರ್​ ಕಚೇರಿಗೆ ಕರೆದೊಯ್ದು, ಸರಸು ಸುವರ್ಣ ಅವರ ಹೆಸರಿನಲ್ಲಿದ್ದ 11 ಸೆಂಟ್ಸ್​ ಜಾಗ ಮತ್ತು ಮನೆಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾನೆ. ಈ ವಿಚಾರವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಂತರದ ಬೆಳವಣಿಗೆಯಲ್ಲಿ ನನಗೆ ಅನ್ಯಾಯವಾಗಿದೆ ಎಂದು ತಾಯಿ ಸರಸು ಸುವರ್ಣ ಅವರು ಎಸಿ (ಸಹಾಯಕ ಆಯುಕ್ತ) ಕೋರ್ಟ್​ನಲ್ಲಿ ಪ್ರಕರಣ ದಾಖಲಿಸಿದ್ದರು. ಇದರಿಂದ ಆಕ್ರೋಶಗೊಂಡ ವಿನೋದ್​, ತಾಯಿ, ತಂದೆ ಮತ್ತು ಸಹೋದರಿಯನ್ನು ಮನೆಯಿಂದ ಹೊರಗೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮಲ್ಪೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.