ಪಡುವರಿ ಗ್ರಾಮದ ಸೋಮೇಶ್ವರ ಕಡಲ ತೀರದ ವಿಹಂಗಮ ನೋಟ
ವಿಜಯವಾಣಿ ಸುದ್ದಿಜಾಲ ಬೈಂದೂರು
ರಾಜ್ಯದ ಪ್ರಮುಖ ಕಡಲ ತೀರಗಳಲ್ಲಿ ಜಾಗತಿಕ ಮನ್ನಣೆ ಪಡೆದಿರುವ ಬೈಂದೂರಿನ ಪಡುವರಿ ಗ್ರಾಮದ ಸೋಮೇಶ್ವರ ಕಡಲ ತೀರ ಪ್ರವಾಸಿಗರ ಪಾಲಿಗೆ ಸ್ವರ್ಗ. ಧಾರ್ಮಿಕ ಹಿನ್ನೆಲೆ, ನೈಸರ್ಗಿಕ ಸೌಂದರ್ಯ ಬೆಳವಣಿಗೆಗೆ ಅವಕಾಶಗಳಿರುವುದರಿಂದ ಸೋಮೇಶ್ವರ ಕಡಲತೀರವನ್ನು ದೂರದೃಷ್ಟಿತ್ವದ ಚಿಂತನೆಯೊಂದಿಗೆ ಅಭಿವೃದ್ಧಿಪಡಿಸಿದರೆ ಬೈಂದೂರಿನ ಭೌಗೋಳಿಕ ಬೆಳವಣಿಗೆಗೆ ಬಹುದೊಡ್ಡ ಕೊಡುಗೆ ನೀಡಲಿದೆ.
ಕಡಲು ಇಳಿತದ ಸಮಯದಲ್ಲಿ ಇಲ್ಲಿ ಮೂರರಿಂದ ನಾಲ್ಕು ಕಿ.ಮೀ. ಬಯಲಿನಂತೆ ಭಾಸವಾಗುತ್ತದೆ. ಹೀಗಾಗಿ ಅಪಾಯ ಕಡಿಮೆ. ಈ ರೀತಿಯ ಬೀಚ್‌ಗಳು ಜಗತ್ತಿನಲ್ಲಿ ಅತ್ಯಂತ ವಿರಳ. ಜಾಗತಿಕ ಮಟ್ಟದ ಅನೇಕ ಉದ್ಯಮಿಗಳು ಈ ಬೀಚನ್ನು ಪ್ರಶಂಸಿದ್ದಾರೆ. ಇಲ್ಲಿನ ಪರಿಸರ ಅಭಿವೃದ್ಧಿಯಾಗಬೇಕಾದರೆ ದೂರದೃಷ್ಟಿತ್ವದ ಚಿಂತನೆಗಳು ಮುಖ್ಯ. ಸೋಮೇಶ್ವರ ಕಡಲ ತೀರಕ್ಕೆ ಹಿಂದೆ ಸ್ಥಳೀಯರು ಮಾತ್ರ ಭೇಟಿ ನೀಡುತ್ತಿದ್ದರು. ಆದರೆ ಇಂದು ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಹೀಗಾಗಿ ಪಾರ್ಕಿಂಗ್, ಹೋಟೆಲ್, ಉದ್ಯೋಗಾವಕಾಶ, ಹೋಂ ಸ್ಟೇ ಮುಂತಾದ ಅಭಿವೃದ್ಧಿಗಳಿಗೆ ಉತ್ತಮ ಅವಕಾಶಗಳಿವೆ. ಕಳೆದ ಅವಧಿಯಲ್ಲಿ ರಾಜ್ಯ ಸರ್ಕಾರ 10 ಕೋಟಿ ರೂ. ಅನುದಾನದಲ್ಲಿ ಬೀಚ್ ಅಭಿವೃದ್ಧಿಪಡಿಸಿದ್ದು, ಇನ್ನಷ್ಟು ಅಭಿವೃದ್ಧಿ ಕಾರ್ಯಗಳಾಗಬೇಕಿದೆ.
ಈಗಿರುವ ಸೋಮೇಶ್ವರ ಬೀಚ್ ವ್ಯಾಪ್ತಿ ಸಣ್ಣದು. ಒಂದು ವೇಳೆ ನದಿ, ಸಾಗರ, ಸಂಗಮವಾದ ಪ್ರದೇಶಕ್ಕೆ ತೂಗು ಸೇತುವೆ ನಿರ್ವಾಣವಾದರೆ ತಾರಾಪತಿಯವರೆಗೆ ಬೀಚ್ ವ್ಯಾಪ್ತಿ ಬೆಳೆಯುತ್ತದೆ. ಈ ಪ್ರದೇಶದಲ್ಲಿ ಜನವಸತಿ ಇಲ್ಲದಿರುವ ಕಾರಣ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಈ ಕಡಲತೀರಕ್ಕೆ ಸ್ಕೂಬಾ ಡೈವಿಂಗ್‌ಗಾಗಿ ಹಾಗೂ ಕುಂದಾಪುರದಿಂದ ಪ್ರವಾಸಿಗರು ಬರುತ್ತಾರೆ. ಹೀಗಾಗಿ ಈ ಕಡಲತಡಿಯಲ್ಲಿ ಜಟ್ಟಿ ನಿರ್ವಾಣವಾದರೆ ಪ್ರವಾಸಿಗರಿಗೆ ಸ್ಕೂಬಾ ಡೈವಿಂಗ್‌ಗೆ ಸಾಗುವ ಸ್ಥಳ ಹತ್ತಿರವಾಗಲಿದೆ.
ಅಭಿವೃದ್ಧಿಯಾಗಲಿ ಕ್ಷಿತಿಜ ನೇಸರಧಾಮ
ಸೋಮೇಶ್ವರ ಕಡಲತೀರಕ್ಕೆ ಹೊಂದಿಕೊಂಡಂತೆ ಇರುವ ಗುಡ್ಡ ಪ್ರದೇಶದ ಕ್ಷಿತಿಜ ನೇಸರಧಾಮ ಅಂತಾರಾಷ್ಟ್ರೀಯಮಟ್ಟದ ಸೌಲಭ್ಯಗಳೊಂದಿಗೆ ಅಭಿವೃದ್ಧಿಯಾಗಬೇಕು. ಇತ್ತೀಚೆಗೆ ಭೇಟಿ ನೀಡಿದ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಕೂಡ ಸೋಮೇಶ್ವರ ಅಭಿವೃದ್ಧಿಗೆ ವಿಶೇಷ ಆಸಕ್ತಿ ವಹಿಸಿದ್ದಾರೆ. ಈ ಭಾಗದಲ್ಲಿ ವಾಟರ್ ಸ್ಪೋರ್ಟ್ಸ್, ರೆಸ್ಟೋರೆಂಟ್ ಸೇರಿದಂತೆ ಹೈಟೆಕ್ ಅಭಿವೃದ್ಧಿಯಾಗಬೇಕಿದೆ. ಸೋಮೇಶ್ವರ ಕಡಲತೀರದ ಪ್ರವಾಸಿಗರಿಂದಲೇ ಬೈಂದೂರಿನ ಪ್ರಗತಿಯಾಗಲಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ಡಬಲ್ ಇಂಜಿನ್ ಸರ್ಕಾರದ ಅವಧಿಯಲ್ಲಿ ಮಂಜೂರಾದ 10 ಕೋಟಿ ರೂ.ನಲ್ಲಿ ಸೋಮೇಶ್ವರ ಬೀಚ್ ಅಭಿವೃದ್ಧಿಪಡಿಸಲಾಗಿದೆ. ಕೊಲ್ಲೂರು, ಸೋಮೇಶ್ವರ, ಮರವಂತೆ ಅಭಿವೃದ್ಧಿಗೆ, ಸೀ ಪ್ಲೇನ್ ಯೋಜನೆ, ಬಂದರು ಹಾಗೂ ಕಿರು ವಿವಾನ ನಿಲ್ದಾಣಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರದಿಂದ ಜಮೀನು ಹಸ್ತಾಂತರ ಕಾರ್ಯ ತ್ವರಿತಗತಿಯಲ್ಲಿ ಆಗಬೇಕಾಗಿದೆ.