ರಸ್ತೆಯ ಚರಂಡಿಗಳಲ್ಲಿ ಬೆಳೆದಿರುವ ಪೊದೆಗಳು 
ಉಡುಪಿ

ಸೋಮಂತಡ್ಕ ರಸ್ತೆ ಮೇಲ್ದರ್ಜೆಗೆ

ಮನೋಹರ್ ಬಳಂಜ ಬೆಳ್ತಂಗಡಿ
ರಾಷ್ಟ್ರೀಯ ಹೆದ್ದಾರಿ 275ರಿಂದ ರಾಜ್ಯ ಹೆದ್ದಾರಿ 276ನ್ನು ಸಂಪರ್ಕಿಸುವ ಬೆಳ್ತಂಗಡಿ ತಾಲೂಕಿನ ಸೋಮಂತಡ್ಕ-ಹೇಡ್ಯ ರಸ್ತೆಯ ನವೀಕರಣ ಹಾಗೂ ವಿಸ್ತರಣೆಗೆ ಕೇಂದ್ರ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಅಭಿವೃದ್ಧಿ ಭಾಗ್ಯ ಸನ್ನಿಹಿತವಾಗಿದೆ.
ದಿಡುಪೆ- ಪೈಚಾರು ರಾಜ್ಯ ಹೆದ್ದಾರಿ ವ್ಯಾಪ್ತಿಯ ಈ ರಸ್ತೆಯ ಮುಂಡಾಜೆ ಗ್ರಾಮದ ಸೋಮಂತಡ್ಕದಿಂದ ಕಡಿರುದ್ಯಾವರ ಗ್ರಾಮದ ಹೇಡ್ಯ ವರೆಗಿನ 5.50 ಕಿ.ಮೀ. ರಸ್ತೆ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ.
ಮುಂಡಾಜೆಯ ಸೋಮಂತಡ್ಕದಿಂದ ದಿಡುಪೆ ತನಕ 15 ಕಿ.ಮೀ. ಉದ್ದದ ರಸ್ತೆಯಲ್ಲಿ ಪ್ರತಿದಿನ ಕೆಎಸ್ಸಾರ್ಟಿಸಿ ಬಸ್, ಶಾಲಾ ಬಸ್ ಗಳ ಸಹಿತ ನೂರಾರು ವಾಹನಗಳು ಸಂಚರಿಸುತ್ತವೆ. ಎರ್ಮಾಯಿ, ಕಡಮಗುಂಡಿ, ಎಳನೀರು ಮೊದಲಾದ ಜಲಪಾತಗಳು, ಧಾರ್ಮಿಕ ಕೇಂದ್ರಗಳಾದ ಕೊಲ್ಲಿ ದೇವಸ್ಥಾನ, ಕಾಜೂರು ಮಸೀದಿ ಸೇರಿದಂತೆ ಪ್ರಮುಖ ಪ್ರವಾಸಿ ಸ್ಥಳಗಳಿಗೂ ಇದು ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಒಂದು ಕಾಲದಲ್ಲಿ ತೀರಾ ಹಿಂದುಳಿದಿದ್ದ ಈ ಪ್ರದೇಶ ನಂತರದ ದಿನಗಳಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಕಂಡಿದೆ.

ಎಳನೀರು ಸಂಪರ್ಕ ರಸ್ತೆ

ಸೋಮಂತಡ್ಕ-ದಿಡುಪೆ ರಸ್ತೆ ದಿಡುಪೆಯಿಂದ ಚಿಕ್ಕಮಗಳೂರಿನ ಸಂಸೆಗೆ ಸಂಪರ್ಕ ಕಲ್ಪಿಸುತ್ತದೆ. ಆದರೆ ದಿಡುಪೆಯಿಂದ ಎಳನೀರು ಮೂಲಕ ಹಾದು ಹೋಗುವ ಈ ರಸ್ತೆ ಅರಣ್ಯ ವ್ಯಾಪ್ತಿಯಲ್ಲಿದೆ. 8 ಕಿ.ಮೀ. ದೂರದ ರಸ್ತೆಯಲ್ಲಿ ಬೇಸಿಗೆ ಕಾಲದಲ್ಲಿ ನಿಗದಿತ ವಾಹನಗಳಷ್ಟೇ ಸಂಚರಿಸುತ್ತವೆ. ಆದರೆ ಮಳೆಗಾಲದಲ್ಲಿ ವಾಹನಗಳ ಸಂಚಾರ ಅಸಾಧ್ಯ. ಚಿಕ್ಕಮಗಳೂರು- ದ.ಕ. ಸಂಪರ್ಕದ ಅತಿ ಹತ್ತಿರದ ರಸ್ತೆ ಅಭಿವೃದ್ಧಿಗೆ ಹಲವು ವಷರ್ಗಳಿಂದ ಹೋರಾಟ ನಡೆಯುತ್ತಿದ್ದರೂ ಇದಕ್ಕೆ ಅರಣ್ಯ ನೀತಿ ಅಡ್ಡಿಯಾಗಿದೆ. ಶಾಸಕರು, ಸಂಸದರು ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸಿದ್ದಾರೆ. ಎಳನೀರು ಸಂಪರ್ಕದ ಆರಂಭ ಭಾಗವಾದ ಸೋಮಂತಡ್ಕ-ಹೇಡ್ಯ ರಸ್ತೆ ಅಭಿವೃದ್ಧಿಗೆ ಅನುದಾನ ದೊರಕಿದ್ದು, ಮುಂದಿನ ದಿನಗಳಲ್ಲಿ ಎಳನೀರು ರಸ್ತೆಯೂ ಅಭಿವೃದ್ಧಿಯಾಗುವ ನಿರೀಕ್ಷೆ ಮೂಡಿದೆ.

ನಿರ್ವಹಣೆ ಕೊರತೆ

ಹತ್ತು ವರ್ಷಗಳ ಹಿಂದೆ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿದ್ದ ಈ ರಸ್ತೆ ನಂತರದ ದಿನಗಳಲ್ಲಿ ಸೂಕ್ತ ನಿರ್ವಹಣೆ ಇಲ್ಲದೆ ಸಂಚಾರಕ್ಕೆ ಸಮಸ್ಯೆಯಾಗಿದೆ. ಚರಂಡಿಯಲ್ಲಿ ಗಿಡಗಂಟಿಗಳು ಬೆಳೆದು ಮಳೆ ನೀರು ಹರಿವಿಗೆ ಅಡ್ಡಿಯಾಗಿ ರಸ್ತೆಯಲ್ಲೇ ನೀರು ಹರಿಯುತ್ತದೆ. ಮಳೆ ನೀರಿನಲ್ಲಿ ಹರಿದು ಬರುವ ತ್ಯಾಜ್ಯ ಸಮೀಪದ ಮನೆಯಂಗಳಕ್ಕೆ ಬಂದು ಬೀಳುತ್ತಿದೆ. ರಸ್ತೆಗೆ ಬಾಗಿರುವ ಮರಗಳು, ತಡೆಗೋಡೆ ಇಲ್ಲದ ಮೋರಿಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಅಭಿವೃದ್ಧಿ ಕಾಮಗಾರಿ ಪ್ರಕ್ರಿಯೆ ಇನ್ನೂ ಆರಂಭಿಕ ಹಂತದಲ್ಲಿದ್ದು, ಅದಕ್ಕಿಂತ ಮೊದಲು ರಸ್ತೆ ನಿರ್ವಹಣೆ ಅಗತ್ಯವಾಗಿದೆ.

ಕೇಂದ್ರ ಸರ್ಕಾರ ದ.ಕ. ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಸಂಪರ್ಕ ರಸ್ತೆಗಳ ಸುಧಾರಣೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಇದರಲ್ಲಿ ಸೋಮಂತಡ್ಕ-ಹೇಡ್ಯ ರಸ್ತೆ ಒಳಗೊಂಡಿದೆ. ಮುಂದಿನ ದಿನಗಳಲ್ಲಿ ಈ ರಸ್ತೆ ಮೇಲ್ದರ್ಜೆಗೇರಲಿದೆ.

— ಕ್ಯಾ.ಬ್ರಿಜೇಶ್ ಚೌಟ, ಸಂಸದ

ಸೋಮಂತಡ್ಕ-ದಿಡುಪೆ ರಸ್ತೆ ಅಭಿವೃದ್ಧಿ ಬಹುವಷರ್ದ ಬೇಡಿಕೆಯಾಗಿದ್ದು, ಇದೀಗ ಹೇಡ್ಯ ತನಕದ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಂಡಿರುವುದರಿಂದ ಬಹುದಿನದ ಕನಸು ನನಸಾಗುತ್ತಿದೆ. ಈ ರಸ್ತೆ ದಿಡುಪೆವರೆಗೂ ಅಭಿವೃದ್ಧಿ ಹೊಂದಬೇಕು. ಮಳೆಗಾಲದಲ್ಲಿ ರಸ್ತೆಯನ್ನು ಸೂಕ್ತವಾಗಿ ನಿರ್ವಹಣೆ ಮಾಡಬೇಕು.

— ಅಶೋಕ್ ಕುಮಾರ್ ಮಾಜಿ ಅಧ್ಯಕ್ಷ, ಕಡಿರುದ್ಯಾವರ ಗ್ರಾಪಂ