ಕಾಪು ತಾಲೂಕು ನಿರೀನ ಕಾರ್ಯಪಡೆ ಸಭೆಯಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿದರು. ತಹಸೀಲ್ದಾರ್ ಅನಂತಶಂಕರ ಬಿ., ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕಲ್ಲೇಶ್ ಪ್ರಸಾದ್ ಮತ್ತಿತರರಿದ್ದರು.
ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಕಾಪು ತಾಲೂಕಿನಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರು ಹಾಗೂ ಅದಕ್ಕೆ ಪೂರಕವಾಗಿ ವಿದ್ಯುತ್ ಸಂಪರ್ಕಕ್ಕೆ ಅಡಚಣೆಯಾದಲ್ಲಿ ತಕ್ಷಣ ಗಮನಕ್ಕೆ ತರುವಂತೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಧಿಕಾರಿಗಳಿಗೆ ಸೂಚಿಸಿದರು.
ಕಾಪು ತಾಲೂಕು ಕಚೇರಿ ಸಭಾಂಗಣದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ನೀರಿನ ಕಾರ್ಯಪಡೆ ಸಭೆಯಲ್ಲಿ ಮಾತನಾಡಿದರು.
ಕಾಪು ತಾಲೂಕಿನ ಕುಡಿಯುವ ನೀರಿನ ಸಮಸ್ಯೆ, ಜಲಮೂಲಗಳ ವಿಸ್ತರಣೆ, ಜಲಮೂಲಗಳ ಜೋಡಣೆ ಸಾಧ್ಯತೆಗಳು, ಸಾಧಕ-ಬಾಧಕಗಳ ಕುರಿತು ಅಧ್ಯಯನ ನಡೆಸಿ ಮೂರ‌್ನಾಲ್ಕು ದಿನಗಳಲ್ಲಿ ವಿಸ್ತೃತ ವರದಿ ಸಲ್ಲಿಸಿದಲ್ಲಿ ಜಿಲ್ಲಾಮಟ್ಟದ ಕೆಡಿಪಿ ಸಭೆಯಲ್ಲಿ ಪ್ರಸ್ತಾಪಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಬೇಕಿದೆ ಶಾಶ್ವತ ಪರಿಹಾರ
ಜೇಮ್ಸ್ ಡಿಸೋಜ ಮಾತನಾಡಿ, ತಾಲೂಕಿನ 16 ಗ್ರಾಪಂ ವ್ಯಾಪ್ತಿಯಲ್ಲಿ ವಿಶೇಷವಾಗಿ ಕೋಟೆ ಭಾಗದಲ್ಲಿ ಕುಡಿಯುವ ನೀರು, ಉಪ್ಪು ನೀರು ಸಮಸ್ಯೆ ಇದೆ. ಸ್ಥಳೀಯ ನೀರಿನ ಮೂಲಗಳ ಸಂರಕ್ಷಣೆ, ಪರ್ಯಾಯ ಜಲಮೂಲಗಳ ಬಗ್ಗೆ ಚಿಂತನೆ ಅಗತ್ಯವಿದೆ. ಪೈಪ್‌ಲೈನ್ ಸಂಪರ್ಕಗಳನ್ನು ಸಮರ್ಪಕ ಸ್ಥಿತಿಯಲ್ಲಿ ನಿರ್ವಹಿಸುವುದು ಅಗತ್ಯ ಎಂದರು. ಕೋಟೆ ಪಿಡಿಒ ಪ್ರತಿಕ್ರಿಯಿಸಿ, ಕೋಟೆ ಮಟ್ಟು ಪ್ರದೇಶದಲ್ಲಿ ನೀರಿನ ಸಮಸ್ಯೆ ಕಂಡುಬರುತ್ತಿದೆ. ಸಿಹಿ ನೀರಿನ ಮೂಲವಿರುವ ಗ್ರಾಮದ ದುಗ್ಗುಕೆರೆ ಸಮಗ್ರವಾಗಿ ಅಭಿವೃದ್ಧಿಪಡಿಸಿದಲ್ಲಿ ಸಮಸ್ಯೆ ನಿವಾರಣೆಗೆ ಸಹಕಾರಿಯಾಗಬಹುದು ಎಂದರು. ಈ ಬಗ್ಗೆ ಪರಿಶೀಲನೆ ನಡೆಸುವಂತೆ ಗ್ರಾಮೀಣ ಕುಡಿಯುವ ನೀರು ವಿಭಾಗದ ಇಂಜಿನಿಯರ್ ವೆಂಕಟೇಶ್ ಅವರಿಗೆ ಶಾಸಕರು ಸೂಚಿಸಿದರು.
ಕಟಪಾಡಿ ಜೆ.ಎನ್.ನಗರ, ಇನ್ನಂಜೆ ಗ್ರಾಮದ ಪಾಂಗಾಳ, ಮಂಡೇಡಿ, ಸದಾಡಿ, ಗುಡ್ಡೆ, ಗಾಂಧಿ ನಗರ ಪ್ರದೇಶದಲ್ಲಿ ಮುಂಬರುವ ದಿನಗಳಲ್ಲಿ ನೀರಿನ ಅಭಾವ ತಲೆದೋರಬಹುದು. ಬೆಳ್ಳೆ ಗಾಂಧಿನಗರ, ಕಟ್ಟಿಂಗೇರಿ ಪ್ರದೇಶಕ್ಕೆ ಕೊಳವೆ ಬಾವಿ ಅಗತ್ಯವಿದೆ. ಶಿರ್ವ ಗ್ರಾಮದ ಕಲ್ಲೊಟ್ಟೆ, ಅಗರಮೇಲ್, ಇಂದ್ರಪುರ, ತೆಂಕರಪಲ್ಕೆ ಪ್ರದೇಶಗಳಲ್ಲಿ ನಾಲ್ಕು ಬೋರ್‌ವೆಲ್‌ಗಳು ಕೈಕೊಟ್ಟಿವೆ. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇರುವುದರಿಂದ ಪರಿಹಾರ ಕ್ರಮ ಕೈಗೊಳ್ಳುವಂತೆ ಅಲ್ಲಿನ ಪಿಡಿಒ ಮನವಿ ಮಾಡಿದರು. ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಹೇಮಂತ್ ಕುಮಾರ್, ತಹಸೀಲ್ದಾರ್ ಅನಂತಶಂಕರ ಬಿ., ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕಲ್ಲೇಶ್ ಪ್ರಸಾದ್ ಮತ್ತಿತರರಿದ್ದರು.
ಅಂತರ್ಜಲಮಟ್ಟ ಕುಸಿತ
ಕುತ್ಯಾರಿನಲ್ಲಿ ಓವರ್‌ಹೆಡ್ ಟ್ಯಾಂಕ್ ಸಮಸ್ಯೆ ಇದೆ. ಶಂಕರನಾರಾಯಣ ಯೋಜನಾ ಅಧಿಕಾರಿಗಳ ನಿರ್ಲಕ್ಷೃದ ಬಗ್ಗೆ ಪತ್ರ ಬರೆಯುವಂತೆ ಪಿಡಿಒಗೆ ಶಾಸಕರು ಸೂಚನೆ ನೀಡಿದರು. ಎಲ್ಲೂರು ಗ್ರಾಮದ ಕುಂಜೂರು, ಮಜೂರು ಪಾದೂರು ಪ್ರದೇಶದಲ್ಲಿ ನೀರಿನ ಸಮಸ್ಯೆ, ಪಡುಬಿದ್ರಿ ಬೇಂಗ್ರೆ, ಹೆಜಮಾಡಿ, ಪಲಿಮಾರು ಗ್ರಾಮದ ಅಡ್ವೆ, ನಂದಿಕೂರು, ಬಡಾ ಗ್ರಾಮದ ಮುಳ್ಳಗುಡ್ಡೆ, ಅದಮಾರು ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು ನೀರಿನ ಮೂಲ ಕಡಿಮೆಯಾಗಿದೆ ಎಂದು ಪಿಡಿಒ ಗಮನಕ್ಕೆ ತಂದರು.
ಹಳೇ ಮೂಲಗಳ ಸಂಪರ್ಕ
ಕಾಪು ಪುರಸಭೆ ವ್ಯಾಪ್ತಿಗೆ ಕುರ್ಕಾಲು ಹೊಳೆಯಿಂದ ಎರಡು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಸಂಪರ್ಕ ಕಡಿತಗೊಂಡಿರುವ ಹಳೆಯ ಜಲ ಮೂಲಗಳ ಪರಿಶೀಲನೆ ನಡೆಸಲಾಗಿದ್ದು, ಕೆಲವೆಡೆ ಪೈಪ್‌ಲೈನ್ ಸಂಪರ್ಕ ಕಲ್ಪಿಸಲಾಗಿದೆ. ಉಳಿದ ಕಡೆಗಳಲ್ಲಿ ಸಂಪರ್ಕ ಕಲ್ಪಿಸಲು ಪ್ರಯತ್ನ ಮುಂದುವರಿಸಲಾಗಿದೆ ಅಧಿಕಾರಿಗಳು ಮಾಹಿತಿ ನೀಡಿದರು.