ಮಣ್ಣು, ನೀರು ತುಂಬಿದ ಎಡಪದವು ಹೆದ್ದಾರಿ ಪ್ರದೇಶದಲ್ಲಿ ಹೈಕೋರ್ಟ್ ಆದೇಶದಂತೆ ಡಿಬಿಎಲ್ ಸಂಸ್ಥೆಯು ತೋಡು ನಿರ್ಮಾಣ, ನೀರು-ಮಣ್ಣು ತೆರವು ಕಾಮಗಾರಿ ಆರಂಭಿಸಿದೆ. 
ಉಡುಪಿ

ಕೃಷಿ ಜಾಗದ ಮಣ್ಣು, ನೀರು ತೆರವು

ಗುರುಪುರ: ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ 169ರ ಎಡಪದವಿನಲ್ಲಿ ಹೆದ್ದಾರಿ ವಿಸ್ತರಣೆ ಸಂದರ್ಭದಲ್ಲಿ ನಡೆಸಿರುವ ಅವೈಜ್ಞಾನಿಕ ಕಾಮಗಾರಿಯಿಂದ ಸ್ಥಳೀಯ ಕೃಷಿ, ಅಡಕೆ ತೋಟ ನಾಶವಾಗಿದೆ ಎಂಬುದು ಅಧಿಕಾರಿಗಳ ತಂಡ ನಡೆಸಿರುವ ಸ್ಥಳ ಪರಿಶೀಲನಾ ವರದಿಯಿಂದ ಸ್ಪಷ್ಟಗೊಂಡಿದ್ದು, ತಕ್ಷಣ ಕೃಷಿ ಜಾಗದಲ್ಲಿರುವ ತುಂಬಿರುವ ಕೆಸರು ಮತ್ತು ನೀರು ತೆರವುಗೊಳಿಸಬೇಕು ಎಂದು ಹೆದ್ದಾರಿ ಗುತ್ತಿಗೆ ಕಾಮಗಾರಿ ನಡೆಸಿರುವ ಡಿಬಿಎಲ್ ಸಂಸ್ಥೆಗೆ ರಾಜ್ಯ ಹೈಕೋರ್ಟ್ ಆದೇಶಿಸಿದೆ.

ತನ್ನ ಜಾಗದಲ್ಲಿ ನಡೆದಿರುವ ಅವೈಜ್ಞಾನಿಕ ಕಾಮಗಾರಿಯಿಂದ ಕೃಷಿ ನಾಶವಾಗಿದೆ. ಕೆರೆ ಮುಳುಗಡೆಯಾಗಿದೆ. ಅಡಿಕೆ ಮರಗಳು ಸಾಯಲಾರಂಭಿಸಿವೆ ಎಂದು ಸಂತ್ರಸ್ತ ಜಮೀನುದಾರ ಅಶ್ವಿನ್ ನಾಯ್ಕ ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಮಂಗಳೂರು ತಹಸೀಲ್ದಾರ್ ಒಳಗೊಂಡ ಉನ್ನತಾಧಿಕಾರಿಗಳ ತಂಡದಿಂದ ಸತ್ಯಾನ್ವೇಷಣೆಗೆ ಆದೇಶ ನೀಡಿತ್ತು.
ಮಂಗಳೂರು ತಹಸೀಲ್ದಾರ್ ರಮೇಶ್ ಬಾಬು ನೇತೃತ್ವದಲ್ಲಿ ಗುರುಪುರ ಹೋಬಳಿ ಆರ್‌ಐ ಪೂರ್ಣಚಂದ್ರ ತೇಜಸ್ವಿ, ತೆಂಕಎಡಪದವು ವಿಎ ರಾಮಚಂದ್ರ, ವಿಶೇಷ ಭೂಸ್ವಾಧೀನಾಧಿಕಾರಿ ಎನ್‌ಎಚ್ 169 ಮಂಗಳೂರು(3ನೇ ಪ್ರತಿವಾದಿ), ಸಿಬ್ಬಂದಿ ಭಾಸ್ಕರ, ಗೋಪಾಲ ಸೇರಿಗಾರ, ಶಾಂತರಾಜ ಜಿ.ಎಚ್, ಗುತ್ತಿಗೆ ಸಂಸ್ಥೆಯ ಪಿಡಿ ಜಿ.ಪಿ.ನಾರಾಯಣ, ಲೈಸಿನಿಂಗ್ ಮ್ಯಾನೇಜರ್ ಪ್ರಸಾದ್, ಗುತ್ತಿಗೆ ಸಂಸ್ಥೆಯ ಮ್ಯಾನೇಜರ್ ನಾಗಬಾಬು ಅವರನ್ನೊಳಗೊಂಡ ತಂಡ ಸ್ಥಳ ಪರಿಶೀಲನೆ ನಡೆಸಿ ಕೋರ್ಟಿಗೆ ವರದಿ ಸಲ್ಲಿಸಿತ್ತು.
ಎಡಪದವಿನಲ್ಲಿ 45 ಅಡಿ ಎತ್ತರಕ್ಕೆ ಮಣ್ಣು ತುಂಬಿಸಿ ಬೈಪಾಸ್ ನಿರ್ಮಿಸಲಾಗಿದೆ. ಅರ್ಜಿದಾರರ ನಾಯ್ಕ ಅವರ 2 ಎಕರೆ 12 ಸೆಂಟ್ಸ್ ಜಮೀನಿನಲ್ಲಿ 2ರಿಂದ 3 ಅಡಿಯಷ್ಟು ಮಳೆ ನೀರು, ಕೆಸರು ಮಣ್ಣು ತುಂಬಿರುವುದು ಕಂಡು ಬಂದಿದೆ. ಇದರಿಂದ 800 ಅಡಿಕೆ ಮರ, ಒಂದು ಕೆರೆ, ಪಂಪ್‌ಹೌಸ್, 2 ಬಾವಿಯಲ್ಲಿ ಮಣ್ಣು ತುಂಬಿಕೊಂಡಿದೆ.
ಸದ್ಯ ತಾತ್ಕಾಲಿಕ ತೋಡಿನ ಮೂಲಕ ನೀರು ಬೇರೆಡೆ ಹರಿಯುವಂತೆ ಮಾಡಲಾಗುತ್ತಿದೆ. ಈ ತೋಡು ರಾಜಕಾಲುವೆಯವರೆಗೆ ಮುಂದುವರಿದರೆ ಮತ್ತು ಶಾಶ್ವತ ತೋಡು ರಚನೆಯಾದರೆ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತದೆ ಎಂಬಿತ್ಯಾದಿಯಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.