ಬಾಳೆ ಮುಹೂರ್ತ ಹಾಗೂ ಬಾಳೆ ಮೇಳ ಅಮಂತ್ರಣಪತ್ರಿಕೆಯನ್ನು ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಬಿಡುಗಡೆಗೊಳಿಸಿದರು.  
ಉಡುಪಿ

ನ.29ರಿಂದ ಡಿ.1ರವರೆಗೆ ರಾಷ್ಟ್ರಮಟ್ಟದ ಬಾಳೆಮೇಳ: ಸೋದೆ ಶ್ರೀ

ಸೋದೆ ಮಠ ಪರ್ಯಾಯ ಪೂರ್ವಭಾವಿ ಬಾಳೆ ಮುಹೂರ್ತ ಬಗ್ಗೆ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಮಾಹಿತಿ

ಉಡುಪಿ: ಕೃಷ್ಣಮಠದಲ್ಲಿ 2028ರಲ್ಲಿ ಪ್ರಾರಂಭವಾಗುವ ಸೋದೆ ಮಠದ ಪರ್ಯಾಯ ಪೂರ್ವಭಾವಿಯಾಗಿ ಬಾಳೆಮುಹೂರ್ತ ನೆರವೇರಲಿದ್ದು, ಈ ಹಿನ್ನೆಲೆಯಲ್ಲಿ ಬಾಳೆಯ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಸೋದೆ ಶ್ರೀವಾದಿರಾಜ ಮಠದ ಆಶ್ರಯದಲ್ಲಿ ಕದಳೀ ವಿಶ್ವದರ್ಶನ ಎಂಬ ರಾಷ್ಟ್ರಮಟ್ಟದ ಬಾಳೆ ಮೇಳವನ್ನು ನ. 29ರಿಂದ ಡಿ. 1ರವರೆಗೆ ಕೃಷ್ಣಮಠದ ಪಾರ್ಕಿಂಗ್​ ಪ್ರದೇಶ ಸಮೀಪ ಆಯೋಜಿಸಲಾಗಿದೆ ಎಂದು ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ತಿಳಿಸಿದ್ದಾರೆ.

ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಳೆ ಕೃಷಿಯ ವಿಫುಲ ಅವಕಾಶಗಳು, ಆಧುನಿಕ ತಂತ್ರಜ್ಞಾನ ಹಾಗೂ ಕೃಷಿ ಆಧಾರಿತ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವುದು ಮೇಳದ ಪ್ರಮುಖ ಸಂಕಲ್ಪವಾಗಿದೆ. 100ಕ್ಕೂ ಹೆಚ್ಚು ತಳಿಗಳ ಬಾಳೆ ಗೊನೆಗಳ ಪ್ರದರ್ಶನ, 150ಕ್ಕೂ ಹೆಚ್ಚು ತಳಿಗಳ ಸಸಿಗಳ ಮಾರಾಟ, 500ಕ್ಕೂ ಹೆಚ್ಚು ಬಾಳೆ ತಳಿಗಳ ಪರಿಚಯ ಮಾಡಲಾಗುವುದು. ದೇಶದಲ್ಲಿ ಹೆಸರಿಲ್ಲದ ಒಂದು ವಿಶಿಷ್ಟ ಬಾಳೆ ತಳಿಯನ್ನು ಆಯ್ಕೆ ಮಾಡಿ, ಸೋದೆ ಮಠದ ವತಿಯಿಂದ ಅದಕ್ಕೊಂದು ವಿಶಿಷ್ಟ ನಾಮಕರಣ (ಬ್ರ್ಯಾಂಡಿಂಗ್​) ಮಾಡಿ ಜನಪ್ರಿಯಗೊಳಿಸಲಾಗುವುದು ಎಂದರು.

ಬಾಳೆ ನಾರಿನಿಂದ ತಯಾರಿಸಿದ ಜವಳಿ, ಕರಕುಶಲ ವಸ್ತುಗಳು, ಲೇಖನ ಸಾಮಗ್ರಿಗಳು ಹಾಗೂ 'ಹ್ಯಾಂಗ್ಯೋ' ಸಂಸ್ಥೆಯಿಂದ ಬಾಳೆಹಣ್ಣಿನ ನೂತನ ಐಸ್​ಕ್ರೀಮ್​ ಲೋಕಾರ್ಪಣೆಯೂ ನಡೆಯಲಿದೆ. ರಾಷ್ಟ್ರೀಯ ಬಾಳೆ ಸಂಶೋಧನಾ ಕೇಂದ್ರ ಹಾಗೂ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ ಅಧಿಕಾರಿಗಳು ರೈತರಿಗೆ ಸಂಶೋಧನೆ ಮತ್ತು ತಂತ್ರಜ್ಞಾನ ಮಾರ್ಗದರ್ಶನ ನೀಡಲಿದ್ದಾರೆ ಎಂದರು.

ಉದ್ಘಾಟನೆ

ನ.29ರಂದು ಬೆಳಗ್ಗೆ 10.30ಕ್ಕೆ ಬಾಳೆ ಮೇಳ ಉದ್ಘಾಟನಾ ಸಮಾರಂಭ ನಡೆಯಲಿದೆ. ಪಲಿಮಾರು ಶ್ರೀ ವಿದ್ಯಾಧಿಶ ತೀರ್ಥ ಸ್ವಾಮೀಜಿ, ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಸಂಜೆ 5:30ರಿಂದ 6:30ರವರೆಗೆ ಡಾ. ಪ್ರಸಾದ ರಾಮ ಹೆಗಡೆ ಹಾಗೂ ನವೀನ್​ ಕುಮಾರ್​ ಎಚ್​.ಎಂ. ಉಪನ್ಯಾಸ ನೀಡಲಿದ್ದಾರೆ. ನ.30 ರಂದು ವರ್ಷಾ ಶ್ರೀಕಂಠಸ್ವಾಮಿ ಹಾಗೂ ಅಶೋಕ್​ ಮಂಜುನಾಥ ಹೆಗಡೆ, ಡಿ. 1ರಂದು ಡಾ. ಟಿ. ಶ್ರೀಧರ್​ ಬಾಯರಿ ಹಾಗೂ ಡಾ. ಪಿ. ಸುರೇಶ್​ ಕುಮಾರ್​ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದರು.

ಶಾಲಾ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ

ನ. 22ರಂದು ಬೆಳಿಗ್ಗೆ 9 ಗಂಟೆಗೆ ಐ.ವೈ.ಸಿ. ಯಕ್ಷಗಾನ ಕಲಾರಂಗ ಸಭಾಂಗಣದಲ್ಲಿ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಬಾಳೆ ಆಧಾರಿತ ಚಿತ್ರಕಲಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಯ ವಿಜೇತರಿಗೆ ಡಿ. 1ರಂದು ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು. ಸಮಾವೇಶದಲ್ಲಿ ಸುಮಾರು 2,000 ರೈತರು, 2,000 ವಿದ್ಯಾರ್ಥಿಗಳು, ಸಂಶೋಧಕರು, ಉದ್ಯಮಿಗಳು ಹಾಗೂ 10,000ಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದೆ. ಜಲಗಾಂವ್​ನ ಪ್ರಮುಖ ಕೃಷಿಕರು, ತಮಿಳುನಾಡು, ಕೇರಳ ಮತ್ತು ಮಲಬಾರ್​ ಭಾಗದ ರೈತರು ಮೇಳಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಶ್ರೀಗಳು ತಿಳಿಸಿದರು.

ಮಠದ ದಿವಾನ್​ ಪಾಡಿಗಾರು ಶ್ರೀನಿವಾಸ ತಂತ್ರಿ, ಸೋದೆ ಮಠ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ರತ್ನಕುಮಾರ್​, ಮಧ್ವೇಶ್​ ತಂತ್ರಿ, ಮುರಳಿ ಕಡೆಕಾರ್​ ಉಪಸ್ಥಿತರಿದ್ದರು.

ನ.29ರಂದು ಬಾಳೆ ಮುಹೂರ್ತ ಸೋದೆ ಶ್ರೀಗಳ ಕೃಷ್ಣಪೂಜಾ ಪರ್ಯಾಯದ ಪೂರ್ವಭಾವಿ ಪ್ರಥಮ ಮುಹೂರ್ತ ಬಾಳೆ ಮುಹೂರ್ತ ನ. 29ರಂದು ಬೆಳಗ್ಗೆ 7:45ಕ್ಕೆ ದೇವತಾ ಪ್ರಾರ್ಥನೆಯೊಂದಿಗೆ ನೆರವೇರಲಿದೆ. ಈ ಧಾರ್ಮಿಕ ಆಚರಣೆಯು ಬೆಳಿಗ್ಗೆ 6:30ಕ್ಕೆ ಸೋದೆ ಮಠದ ಪಟ್ಟದ ದೇವರ ಸನ್ನಿಧಿಯಲ್ಲಿ ದೇವತಾ ಪ್ರಾರ್ಥನೆ ನಂತರ ಶ್ರೀಚಂದ್ರೇಶ್ವರ, ಅನಂತೇಶ್ವರ ದೇವರ ಹಾಗೂ ಶ್ರೀಕೃಷ್ಣಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಫಲಾನ್ಯಾಸ ಪೂರ್ವಕ ಪ್ರಾರ್ಥಿಸಿ 7:45ರ ವೃಶ್ಚಿಕ ಲಗ್ನ ಸುಮುಹೂರ್ತದಲ್ಲಿ ಸೋದೆ ಮಠದ ಆವರಣದಲ್ಲಿರುವ ತೋಟದಲ್ಲಿ ಬಾಳೆ ಗಿಡ , ಕಬ್ಬಿನ ಗಿಡ, ತುಳಸಿ ಗಿಡ ನೆಡುವುದರ ಮೂಲಕ ಬಾಳೆ ಮುಹೂರ್ತ ನೆರವೇರಲಿದೆ.