ಕುಕ್ಕೆಯ ಹಾಲು ಸೊಸೈಟಿ ಕಟ್ಟಡ ಶಿಥಿಲಾವಸ್ಥೆಯಲ್ಲಿರುವುದು.  
ಉಡುಪಿ

ಸೊಸೈಟಿ ಕಟ್ಟಡಕ್ಕೆ ಬೇಕು ಕಾಯಕಲ್ಪ

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಳೆದ 26 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸುಬ್ರಹ್ಮಣ್ಯ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ರೈತರು ಹಾಗೂ ಸಿಬ್ಬಂದಿ ಜೀವಭಯದ ನಡುವೆಯೇ ದಿನನಿತ್ಯದ ವ್ಯವಹಾರ ನಡೆಸುವಂತಾಗಿದೆ. ಶಿಥಿಲಾವಸ್ಥೆ ತಲುಪಿದ ಕಟ್ಟಡಕ್ಕೆ ಕಾರ್ಯಕಲ್ಪ ನೀಡಲು ಸಂಬಂಧಪಟ್ಟ ಇಲಾಖೆ ಗಮನ ಹರಿಸುವುದು ಅತ್ಯವಶ್ಯಕ ಎಂದು ಹೈನುಗಾರರು ಆಗ್ರಹಿಸಿದ್ದಾರೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸ್ಥಳದಲ್ಲಿರುವ ಈ ಕಟ್ಟಡದಲ್ಲಿ ಈ ಹಿಂದೆ ಸಾರ್ವಜನಿಕ ಗ್ರಂಥಾಲಯ ಕಾರ್ಯನಿರ್ವಹಿಸುತ್ತಿತ್ತು. ಬಳಿಕ ಸುಮಾರು 26 ವರ್ಷಗಳಿಂದ ಇದೇ ಕಟ್ಟಡದಲ್ಲಿ ಸುಬ್ರಹ್ಮಣ್ಯ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಕಾರ್ಯನಿರ್ವಹಿಸುತ್ತಿದೆ. ಸಂಘದಲ್ಲಿ 265 ಸದಸ್ಯರಿದ್ದು, ಅವರಲ್ಲಿ 42 ಹೈನುಗಾರರು ಪ್ರತಿದಿನ ಹಾಲು ಪೂರೈಕೆ ಮಾಡುತ್ತಿದ್ದಾರೆ. ಗ್ರಾಮೀಣ ಹೈನುಗಾರಿಕೆಗೆ ಪ್ರಮುಖ ಕೇಂದ್ರವಾಗಿರುವ ಈ ಕಟ್ಟಡ ದಿನದಿಂದ ದಿನಕ್ಕೆ ಶಿಥಿಲಗೊಳ್ಳುತ್ತಿರುವುದು ಸದಸ್ಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಹಾಲು ತರುವ ರೈತರು ಹಾಗೂ ಸಿಬ್ಬಂದಿ ಇದೇ ಕಟ್ಟಡದಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಅನಾಹುತ ಸಂಭವಿಸುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ಕಟ್ಟಡದ ತಾಂತ್ರಿಕ ಪರಿಶೀಲನೆ ನಡೆಸಿ, ತುರ್ತು ದುರಸ್ತಿ ಕೈಗೊಳ್ಳಬೇಕು ಅಥವಾ ನೂತನ ಕಟ್ಟಡ ನಿರ್ಮಾಣಕ್ಕೆ ಕ್ರಮವಹಿಸಬೇಕು ಎಂದು ರೈತರು ಹಾಗೂ ಹೈನುಗಾರರು ಸಂಬಂಧಪಟ್ಟವರಲ್ಲಿ ಒತ್ತಾಯಿಸಿದ್ದಾರೆ.

ಒಡೆದು ಹೋಗಿವೆ ಮೇಲ್ಛಾವಣಿ ಹೆಂಚು

ಕಟ್ಟಡದ ಮೇಲ್ಛಾವಣಿ ಶಿಥಿಲವಾಗಿದೆ. ಹೆಂಚುಗಳು ಹಲವು ಕಡೆ ಒಡೆದು ಹೋಗಿವೆ. ಮುಂಭಾಗದಲ್ಲಿ ಛಾವಣಿಯ ರೀಪುಗಳು ಎದ್ದು ಕಾಣುತ್ತಿವೆ. ಛಾವಣಿಯ ಹೆಂಚು ಒಡೆದಿರುವ ಕಾರಣ ಮಳೆ ನೀರು ಒಳನುಗ್ಗುತ್ತಿದೆ. ನೀರು ಒಳ ಬಾರದಂತೆ ತಾತ್ಕಾಲಿಕವಾಗಿ ಪ್ಲಾಸ್ಟಿಕ್ ಹೊದಿಕೆ ಅಳವಡಿಸಲಾಗಿದೆ. ಗೋಡೆಗಳಲ್ಲಿಯೂ ಬಿರುಕು ಕಾಣಿಸಿಕೊಂಡಿದೆ. ಕಟ್ಟಡ ಕುಸಿಯುವ ಭೀತಿ ಎದುರಾಗಿದೆ ಎಂದು ದೂರಿದ್ದಾರೆ ಹೈನುಗಾರರು.

ಪಶು ಆಹಾರಕ್ಕೆ ಹಾನಿ ಸಾಧ್ಯತೆ

ಜಾನುವಾರುಗಳಿಗೆ ಅಗತ್ಯವಿರುವ ಆಹಾರ, ಲವಣ ಮಿಶ್ರಣ ಹಾಗೂ ವಿವಿಧ ಔಷಧಗಳನ್ನು ಇದೇ ಕಟ್ಟಡದಲ್ಲಿ ಸಂಗ್ರಹಿಸಲಾಗುತ್ತಿದೆ. ಮಳೆ ನೀರು ಕಟ್ಟಡದ ಒಳಗೆ ಹರಿದು ಇವು ಹಾಳಾಗುವ ಭೀತಿ ಇದೆ. ಅಲ್ಲದೆ ಸೊಸೈಟಿಯ ಕಂಪ್ಯೂಟರ್‌ಗಳು, ಪ್ರಮುಖ ದಾಖಲೆಗಳು ಹಾಗೂ ಇತರ ಅಮೂಲ್ಯ ವಸ್ತುಗಳಿಗೆ ಮಳೆ ನೀರು ತಾಗಿ ಹಾನಿಯಾಗುತ್ತಿರುವುದು ಸಿಬ್ಬಂದಿ ಮತ್ತು ಸದಸ್ಯರ ಆತಂಕ ಮತ್ತಷ್ಟು ಹೆಚ್ಚಿಸಿದೆ.

ಕುಕ್ಕೆ ಸುಬ್ರಹ್ಮಣ್ಯದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ಹೈನುಗಾರರು ಹಾಗೂ ಸಿಬ್ಬಂದಿ ಜೀವಭಯದ ನಡುವೆಯೇ ವ್ಯವಹಾರ ನಡೆಸುವಂತಾಗಿದೆ. ಮೇಲ್ಛಾವಣಿ ಸೋರುವುದರಿಂದ ಹಸುಗಳ ಆಹಾರ, ಲವಣ ಮಿಶ್ರಣ ಹಾಗೂ ಇತರ ಸಾಮಗ್ರಿ ಹಾಳಾಗುತ್ತಿವೆ. ಅನಾಹುತ ಸಂಭವಿಸುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕಟ್ಟಡದ ದುರಸ್ತಿ ಅಥವಾ ನೂತನ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು.

— ರವೀಂದ್ರ ಕುಮಾರ ರುದ್ರಪಾದ ಹೈನುಗಾರರು ಮತ್ತು ಕೃಷಿಕರು