ಅಪಾಯಕ್ಕೆ ಸಿಲುಕಿದ್ದ ತಾಯಿ&ಶಿಶುವನ್ನು ರಸಿ ಮಹಿಳಾ ನಿಲಯದಲ್ಲಿ ಪುನರ್ವಸತಿ ನೀಡಲಾಯಿತು. ನಿತ್ಯಾನಂದ ಒಳಕಾಡು, ರಮ್ಯಾ, ವಿದ್ಯಾ ಇದ್ದರು.
* ಕುಡಿತದ ಮತ್ತಿನಲ್ಲಿ ಹಿಂಸೆ ನೀಡುತ್ತಿದ್ದ ಪತಿ
* ಸಮಯಪ್ರಜ್ಞೆ ಮೆರೆದ ನಿತ್ಯಾನಂದ ಒಳಕಾಡು
ಉಡುಪಿ: ಕುಡಿತದ ಮತ್ತಿನಲ್ಲಿ ತಮ್ಮದೆ ಮಗುವನ್ನು ಹಿಂಸಾತ್ಮಕವಾಗಿ ಎಳೆದಾಡುತ್ತಿದ್ದ ದಂಪತಿ ವಶದಿಂದ ಐದು ದಿನದ ಶಿಶುವನ್ನು ಸಮಯಪ್ರಜ್ಞೆಯಿಂದ ಸಮಾಜ ಸೇವಕ ನಿತ್ಯಾನಂದ ಒಳಕಾಡು ರಕ್ಷಿಸಿದ್ದಾರೆ.
ಇಂದ್ರಾಳಿ ರೈಲು ನಿಲ್ದಾಣ ಸಂಪರ್ಕಿಸುವ ಜಾರ್ಜ್ ಫರ್ನಾಂಡಿಸ್ ರಸ್ತೆ ಮಾರ್ಗದ ಬಳಿ ದಂಪತಿ ಹಿಂಸಾತ್ಮಕವಾಗಿ ಮಗುವಿನೊಂದಿಗೆ ವರ್ತಿಸುತ್ತಿದ್ದರು. ಅದನ್ನು ಗಮನಿಸಿದ ಶ್ವೇತಾ ಪೂಜಾರಿ ಎಂಬವರು ನಿತ್ಯಾನಂದ ಒಳಕಾಡು ಗಮನಕ್ಕೆ ತಂದರು. ತಕ್ಷಣ ನೆರವಿಗೆ ಬಂದ ಒಳಕಾಡು, ಮಗು ಮತ್ತು ಬಾಣಂತಿಯನ್ನು ಆಂಬುಲೆನ್ಸ್ನಲ್ಲಿ ಸಾಗಿಸಿ ಉಡುಪಿಯ ತಾಯಿ ಮಕ್ಕಳ ಆಸ್ಪತ್ರೆಗೆ ತಂದು ಚಿಕಿತ್ಸೆಗೆ ಒಳಪಡಿಸಿದರು.
ನಗರ ಮಹಿಳಾ ಪೊಲೀಸ್ ಠಾಣೆ, ಸಖಿ ಸೆಂಟರ್, ಮಕ್ಕಳ ಸಹಾಯವಾಣಿ ಕೇಂದ್ರದ ಸಿಬ್ಬಂದಿ ಆಸ್ಪತ್ರೆಗೆ ಆಗಮಿಸಿ ತಾಯಿ-ಮಗುವಿನ ಆರೋಗ್ಯ ಸ್ಥಿತಿ ವಿಚಾರಿಸಿ, ಕಾನೂನು ಪ್ರಕ್ರಿಯೆ ನಡೆಸಿ, ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಹಸ್ತಾಂತರಿಸಿದರು. ಬಳಿಕ ದೊಡ್ಡಣಗುಡ್ಡೆಯಲ್ಲಿರುವ ಮಕ್ಕಳ ಕಲ್ಯಾಣ ಸಮಿತಿಯ ಆದೇಶಾನುಸಾರ ಮಗುವನ್ನು ಲಕ್ಷಿ$್ಮನಗರದ ಕೃಷ್ಣಾನುಗ್ರಹ ದತ್ತು ಸ್ವೀಕಾರ ಕೇಂದ್ರಕ್ಕೆ ಒಪ್ಪಿಸಲಾಗಿದೆ. ನಿಟ್ಟೂರಿನ ರಾಜ್ಯ ಮಹಿಳಾ ನಿಲಯದಲ್ಲಿ ಬಾಣಂತಿಗೆ ಪುನರ್ವಸತಿ ಕಲ್ಪಿಸಲಾಗಿದೆ.
ಐದು ದಿನದ ಹಿಂದೆ ಜನ್ಮನೀಡಿದ್ದ ತಾಯಿ
ಅಪರಾಧದ ಭೀತಿಯಿಂದ ಮಗುವಿನ ತಂದೆ ಮಹಾರಾಷ್ಟ್ರದ ಕೊಲ್ಲಾಪುರದ ನಿವಾಸಿ ರಾಜು ಎಂಬಾತ ಘಟನಾ ಸ್ಥಳದಿಂದ ಪರಾರಿಯಾಗಿದ್ದನು. ಆತನ ಪತ್ನಿ ಹೆಸರು ಶೋಭಾ ಎಂದು ತಿಳಿದುಬಂದಿದ್ದು, ಐದು ದಿನದ ಹಿಂದೆ ಬೈಂದೂರು ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ತಂದೆ ಮಗುವಿನ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದ ಎನ್ನುವ ಆರೋಪ ಕೇಳಿಬಂದಿವೆ. ಕಾರ್ಯಾಚರಣೆಯಲ್ಲಿ ಮಹಿಳಾ ಪೊಲೀಸ್ ಠಾಣೆಯ ಆರಕ್ಷಕಿಯರು, ಮಕ್ಕಳ ರಕ್ಷಣಾ ಘಟಕದ ರಮ್ಯಾ, ವಿದ್ಯಾ, ಸಖಿ ಕೇಂದ್ರದ ಸಿಬ್ಬಂದಿ ಪಾಲ್ಗೊಂಡಿದ್ದರು.