ಉಡುಪಿಯ ಸಿಟಿ ಬಸ್​ ನಿಲ್ದಾಣದಿಂದ ಸರ್ವೀಸ್​ ಬಸ್​ ನಿಲ್ದಾಣ ಸಂಪರ್ಕಿಸುವ ರಸ್ತೆಯ ಸಮೀಪದಲ್ಲಿ ವಾಲಿಕೊಂಡ ಸ್ಥಿತಿಯಲ್ಲಿರುವ ತೆಂಗಿನಮರ. 
ಉಡುಪಿ

ರಸ್ತೆಗೆ ವಾಲಿಕೊಂಡ ತೆಂಗಿನಮರ ತೆರವಿಗೆ ಆಗ್ರಹ

* ಉಡುಪಿ ನಗರದ ಹೃದಯಭಾಗದಲ್ಲಿರುವ ಮರ

ಉಡುಪಿ: ನಗರದ ಸಿಟಿ ಬಸ್​ ನಿಲ್ದಾಣದಿಂದ ಸರ್ವೀಸ್​ ಬಸ್​ ನಿಲ್ದಾಣ ಸಂಪರ್ಕಿಸುವ ರಸ್ತೆಯ ಸಮೀಪದಲ್ಲಿ ಬೃಹತ್​ ಎತ್ತರದ ತೆಂಗಿನಮರವು ವಾಲಿಕೊಂಡ ಸ್ಥಿತಿಯಲ್ಲಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.

ಮರದಿಂದ ಒಣಗಿದ ತೆಂಗಿನಕಾಯಿ ಹಾಗೂ ಒಣಗಿದ ಗರಿಗಳು ಆಗಾಗ ರಸ್ತೆಗೆ ಬೀಳುತ್ತಿದ್ದು, ಈ ಮಾರ್ಗದಲ್ಲಿ ಸಂಚರಿಸುವವರಿಗೆ ಜೀವಭಯ ಕಾಡುತ್ತಿದೆ.

ಈ ರಸ್ತೆಯ ಮಾರ್ಗವು ಸದಾ ಜನಜಂಗುಳಿ ಇರಲಿದ್ದು, ನೂರಾರು ವಾಹನಗಳು ಸಂಚರಿಸುತ್ತವೆ. ಶಾಲಾ-ಕಾಲೇಜ್​ಗಳಿಗೆ ತೆರಳುವ ಹಲವು ವಿದ್ಯಾರ್ಥಿಗಳೂ ಸಹ ಈ ಮಾರ್ಗದಲ್ಲೇ ಸಾಗುತ್ತಾರೆ. ಇಂತಹ ಜನನಿಬಿಡ ಪ್ರದೇಶದಲ್ಲಿ ತೆಂಗಿನಮರವು ಅಪಾಯದ ಸ್ಥಿತಿಯಲ್ಲಿದೆ.

ಸಾರ್ವಜನಿಕರ ಸುರಕ್ಷತೆಗಾಗಿ ಸಂಬಂಧಪಟ್ಟ ನಗರಸಭೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತೆಂಗಿನಮರದಿಂದ ಆಗಬಹುದಾದ ಅಪಾಯದ ಸ್ಥಿತಿ ಪರಿಶೀಲಿಸಬೇಕು. ಮರ ಬೀಳುವ ಹಂತದಲ್ಲಿದ್ದು, ಗಾಳಿ ಅಥವಾ ಮಳೆಯಿಂದ ಉರುಳಿ ಜೀವಹಾನಿ ಉಂಟಾಗಬಹುದು. ಅನಾಹುತ ಸಂಭವಿಸಿದ ಬಳಿಕ ಕ್ರಮ ಕೈಗೊಳ್ಳುವ ಬದಲು ಜೀವಕ್ಕೆ ಅಪಾಯ ತಂದೊಡ್ಡಬಹುದಾದ ಈ ಮರವನ್ನು ಕೂಡಲೇ ತೆರವುಗೊಳಿಸಬೇಕೆಂದು ಸಮಾಜಸೇವಕ ನಿತ್ಯಾನಂದ ಒಳಕಾಡು ಆಗ್ರಹಿಸಿದ್ದಾರೆ.