ಯುವವಾಹಿನಿ ಘಟಕ ಪದಪ್ರದಾನ ಸಮಾರಂಭವನ್ನು ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಉದ್ಘಾಟಿಸಿದರು. ಪ್ರಮುಖರಾದ ಜಯವಿಕ್ರಮ ಕಲ್ಲಾಪು, ಅಶೋಕ್ ಕುಮಾರ್ ಪಡ್ಪು, ಲೀಲಾವತಿ ವಸಂತ ಪೂಜಾರಿ ಮೊದಲಾದವರು ಇದ್ದರು.
ಬೆಳ್ತಂಗಡಿ: ಯುವವಾಹಿನಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಲಿಷ್ಠವಾದ ಯುವ ಸಂಘಟನೆ. ಶಿಸ್ತುಬದ್ಧ ಸಂಘಟನೆಯಾಗಿ ವಿದ್ಯೆ, ಉದ್ಯೋಗ, ಸಂಪರ್ಕದ ಕೊಂಡಿಯಾಗಿ ಸಮಾಜವನ್ನು ಬೆಸೆಯುವ-ಬೆಳೆಸುವ ಕಾರ್ಯ ನಿರಂತರ ಮಾಡುತ್ತಾ ಬಂದಿದೆ ಎಂದು ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಹೇಳಿದರು.
ಭಾನುವಾರ ಬೆಳ್ತಂಗಡಿ ಶ್ರೀ ಗುರು ಸಾನಿಧ್ಯ ಸಭಾಭವನದಲ್ಲಿ ಲೀಲಾವತಿ ವಸಂತ ಸಾಲಿಯಾನ್ ನೇತೃತ್ವದ ತಂಡದ 2026ನೇ ಸಾಲಿನ ಬೆಳ್ತಂಗಡಿ ಯುವವಾಹಿನಿ ಘಟಕದ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಘಟಕದ ಅಧ್ಯಕ್ಷ ಗುರುರಾಜ್ ಗುರುಪಳ್ಳ ಅಧ್ಯಕ್ಷತೆ ವಹಿಸಿದ್ದರು. ರಂಗ ಕಲಾವಿದ ಯಶವಂತ್ ಬೆಳ್ತಂಗಡಿ, ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ ಶಿಶಿರ್ ಜೆ.ಸಾಲಿಯಾನ್, ಕಲಾವಿದೆ ರಿತಿಷಾ ಎನ್.ಕರ್ಕೇರ ಅವರನ್ನು ಸನ್ಮಾನಿಸಲಾಯಿತು. ಸಾಂತ್ವನ ನಿಧಿ ಹಾಗೂ ವಿದ್ಯಾನಿಧಿ ವಿತರಣೆ ಮಾಡಲಾಯಿತು.
ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಅಧ್ಯಕ್ಷ ಜಯವಿಕ್ರಮ ಕಲ್ಲಾಪು, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು, ಘಟಕದ ನೂತನ ಅಧ್ಯಕ್ಷೆ ಲೀಲಾವತಿ ವಸಂತ ಪೂಜಾರಿ ಇದ್ದರು.
ಸಾನ್ವಿ ಪ್ರಾರ್ಥಿಸಿದರು. ಘಟಕದ ಸ್ಥಾಪಕಾಧ್ಯಕ್ಷ ರಾಕೇಶ್ ಕುಮಾರ್ ಸ್ವಾಗತಿಸಿ, ಮಾಜಿ ಅಧ್ಯಕ್ಷ ಅಶ್ವತ್ ಕುಮಾರ್ ಪ್ರಸ್ತಾವಿಸಿದರು. ಕಾರ್ಯದರ್ಶಿ ಮಧುರಾ ರಾಘವ್ ವಾರ್ಷಿಕ ವರದಿ ವಾಚಿಸಿದರು. ಸದಾಶಿವ ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು. ಸುಧಾಮಣಿ ರಮಾನಂದ್, ಆಕಾಶ್ ನಿರೂಪಿಸಿದರು. ನೂತನ ಕಾರ್ಯದರ್ಶಿ ಅಶ್ವಿನ್ ಕುಮಾರ್ ಬಳಂಜ ವಂದಿಸಿದರು.
ಸಂಘಟನೆಯಲ್ಲಿರುವ ಹುದ್ದೆ ಗುರುತಿನ ಚೀಟಿಯಾಗದೆ ಜವಾಬ್ದಾರಿಯ ವಿಚಾರವಾಗಿರಬೇಕು. ಸಂಘಟನೆಗೆ ನ್ಯಾಯವನ್ನು ಕೊಡಬೇಕು. ನಾವು ಅಬ್ಬರಗಳ ಹಿಂದೆ ಹೋಗದೆ ಸಣ್ಣ ಸಣ್ಣ ಸಾಹಸಗಳಿಗೆ ಮನಸ್ಸು ಮಾಡಬೇಕು. ಪ್ರಯತ್ನಗಳು ಸೋಲಬಹುದು ಜೀವನ ಸೋಲಬಾರದು.
— ಸಂಪತ್ ಬಿ.ಸುವರ್ಣ, ಜಿಲ್ಲಾಧ್ಯಕ್ಷ ಕ್ರಾಂತಿವೀರ ಮಂಜ ಬೈದ್ಯ ಸಂಸ್ಕರಣಾ ಸಮಿತಿ