ಕೊಂಡೆವೂರು ಮಠದಲ್ಲಿ ನಿಧಿ ಸಮರ್ಪಣೆ ಕಾರ್ಯಕ್ರಮ ನಡೆಯಿತು. ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ, ರಘುರಾಮ.ಕೆ.ಶೆಟ್ಟಿ, ಬಿ.ನಾಗರಾಜ, ಮೋಹನ ಶೆಟ್ಟಿ, ಶಶಿಧರ ಶೆಟ್ಟಿ ಮತ್ತಿತರಿದ್ದರು.
ಉಪ್ಪಳ: ಅನಾಥಾಶ್ರಮವಾಗಿ ಆರಂಭವಾದ ಆಶ್ರಮ ಇಂದು ದೀನ ದುಃಖಿತರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದೆ. ಆಶ್ರಮದ ಆಶ್ರಯ ಯೋಜನೆ ಮೂಲಕ 47 ಮಂದಿಗೆ ಈಗಾಗಲೇ ಗೃಹ ನಿರ್ಮಾಣ ಮಾಡಿ ಹಸ್ತಾಂತರಿಸಲಾಗಿದೆ. 5 ಮಂದಿ ಅರ್ಹ ಫಲಾನುಭವಿಗಳಿಗೆ ದಾನಿಗಳ ಸಹಕಾರದಿಂದ ಮನೆಗಳನ್ನು ನಿರ್ಮಿಸಿ ಕೊಡುವ ಕಾರ್ಯವಾಗುತ್ತಿದೆ ಎಂದು ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಪ್ರಧಾನ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಆಚಾರ್ಯತ್ವದಲ್ಲಿ ಇತ್ತೀಚೆಗೆ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದಲ್ಲಿ ಶ್ರೀ ಗಾಯತ್ರೀ ದೇವಿ, ಭಗವಾನ್ ಶ್ರೀ ನಿತ್ಯಾನಂದ ಗುರುದೇವರ ಪ್ರತಿಷ್ಠಾಪನಾ ವರ್ಧಂತಿ, ನವಚಂಡಿಕಾಯಾಗ, ವೇದಮಾತೆ ಶ್ರೀ ಗಾಯತ್ರೀ ದೇವಿಯ ಗರ್ಭಗೃಹದ ಜೀರ್ಣೋದ್ಧ್ದಾರಕ್ಕೆ ನಿಧಿ ಸಮರ್ಪಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ರಾಜ್ಯಸಭೆ ಮಾಜಿ ಸದಸ್ಯ ಕೆ.ಸಿ.ರಾಮಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಡಾ.ಎಸ್.ಎನ್.ವಿ.ಎಲ್. ನರಸಿಂಹರಾಜು ಬೆಂಗಳೂರು ನಿಧಿ ಸಮರ್ಪಣೆಯ ಕೂಪನ್ ಬಿಡುಗಡೆಗೊಳಿಸಿದರು.
ರಘುರಾಮ ಕೆ.ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ನಾರಾಯಣ ಬೆಂಗಳೂರು, ಕಟೀಲಿನ ಪ್ರಧಾನ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಬಿ.ನಾಗರಾಜ, ಮೋಹನ ಶೆಟ್ಟಿ, ಶಶಿಧರ ಶೆಟ್ಟಿ, ರಾಜೇಶ್ ಕೆ.ರೈ, ಬಾಲಕೃಷ್ಣ ಬೆಂಗಳೂರು, ಅನುಜ್ ವೀರೇಂದ್ರ ಸಿಂಗ್ ಕಾರ್ಡಿಯಾನ್, ಪುಷ್ಪ ಕುಮಾರ್ ಕೊಚ್ಚಿ, ಮಧ್ಯಪ್ರದೇಶದ ಯತಿ ವಿನಯಸಾಗರ್ ಸ್ವಾಮೀಜಿ, ತಸ್ಮಯ್ ಆಚಾರ್ಯ ಉಪಸ್ಥಿತರಿದ್ದರು.
ಪುರುಷೋತ್ತಮ ಅಡ್ಯಾರ್ ಸ್ವಾಗತಿಸಿದರು. ಕೆ.ಎಂ.ಗಂಗಾಧರ್ ಕೊಂಡೆವೂರು ನಿರೂಪಿಸಿದರು.
ಗೌರವಾರ್ಪಣೆ, ಮನೆ ಹಸ್ತಾಂತರ
ಬೆಂಗಳೂರು ಸುಮಂಗಲಿ ಸೇವಾಶ್ರಮದ ಸಂಸ್ಥಾಪಕಿ ಎಸ್.ಜಿ.ಸುಶೀಲಮ್ಮ ಅವರನ್ನು ಸನ್ಮಾನಿಸಲಾಯಿತು. ಆಶ್ರಮದ ಆಶ್ರಯ ಯೋಜನೆಯಡಿಯಲ್ಲಿ ನವೀಕರಣಗೊಳಿಸಿದ ಮನೆಯನ್ನು ಚಂದ್ರಶೇಖರ ಶೆಟ್ಟಿ ಹಸ್ತಾಂತರಿಸಿದರು. ಕೇಪ್ಸ್ ಫೌಂಡೇಶನ್ ಸಹಕಾರದೊಂದಿಗೆ ನಿರ್ಮಾಣಗೊಳ್ಳಲಿರುವ 3 ಮನೆಗಳ ಫಲಾನುಭವಿಗಳಿಗೆ ಆಯ್ಕೆ ಪತ್ರ ವಿತರಿಸಲಾಯಿತು.