ಸಾನಿಧ್ಯ ಸಂಸ್ಥೆಗೆ ನೀಡಲಾದ 7 ಲಕ್ಷ ರೂ. ಮೊತ್ತದ ಚೆಕ್ ಅನ್ನು ಬೆಂಗಳೂರು ಇಂದಿರಾನಗರ ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ನರಸಿಂಹ ಕಣ್ಣನ್ ಹಸ್ತಾಂತರಿಸಿದರು. ಹರೀಶ್ ಪೂಂಜ, ಶ್ರೀಧರ್ ಕೆ.ವಿ., ಡಾ.ಶಶಿಧರ್ ಡೊಂಗ್ರೆ ಮೊದಲಾದವರು ಇದ್ದರು.  
ಉಡುಪಿ

ರೋಟರಿ ಕ್ಲಬ್‌ನಿಂದ ಸಮಾಜಮುಖಿ ಸೇವೆ

ಬೆಳ್ತಂಗಡಿ: ಸರ್ಕಾರ ಮಾಡಲಾಗದ ಸೇವಾ ಕಾರ್ಯವನ್ನು ರೋಟರಿ ಕ್ಲಬ್ ಮಾಡುತ್ತಿರುವುದು ಶ್ಲಾಘನೀಯ. ಮಂಗಳೂರಿನ ಶ್ರೀ ಗಣೇಶ ಸೇವಾ ಟ್ರಸ್ಟ್ ಸಂಸ್ಥೆ ಜೋಡೆತ್ತಿನಂತೆ ಸಾನಿಧ್ಯ ಕೌಶಲ ತರಬೇತಿ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. ಸಂಸ್ಥೆಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ. ಬೆಂಗಳೂರಿನ ಇಂದಿರಾನಗರ ರೋಟರಿ ಕ್ಲಬ್ ಬೆಳ್ತಂಗಡಿ ತಾಲೂಕಿನ ಇತರ ಸಂಸ್ಥೆಗಳ ಸಮಾಜಸೇವೆಯಲ್ಲಿ ಸದಾ ಕೈಜೋಡಿಸಲಿ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಎಂಡೋಸಲ್ಫಾನ್ ಪೀಡಿತ ಮಕ್ಕಳಿಗಾಗಿ ಉಜಿರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಸಾನಿಧ್ಯ’ ಕೌಶಲ ತರಬೇತಿ ಕೇಂದ್ರದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಹಾಗೂ ಬೆಂಗಳೂರು ಇಂದಿರಾನಗರ ರೋಟರಿ ಕ್ಲಬ್ ಸಹಯೋಗದಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸಾನಿಧ್ಯ ರೋಟರಿ ಸಭಾಭವನವನ್ನು ಶನಿವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಬೆಂಗಳೂರು ಇಂದಿರಾನಗರ ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ನರಸಿಂಹ ಕಣ್ಣನ್ ಸ್ವರಸ್ವತಿ ಸಂಸ್ಥೆ ವತಿಯಿಂದ ನೀಡಲಾದ 7 ಲಕ್ಷ ರೂ. ಮೊತ್ತದ ಚೆಕ್ ಅನ್ನು ಸಂಸ್ಥೆಗೆ ಹಸ್ತಾಂತರಿಸಿದರು. ನರಸಿಂಹನ್ ಕಣ್ಣನ್ ಮತ್ತು ದಿವ್ಯಾ ರಾಘವನ್ ದಂಪತಿ, ರೋಟರಿ ಜಿಲ್ಲೆ 3192ರ ಲೆಫ್ಟಿನೆಂಟ್ ಗವರ್ನರ್ ಜಗದೀಶ್ ಮುಗುಳಿ ಮತ್ತು ಮಾಲತಿ ಮುಗುಳಿ ದಂಪತಿಯನ್ನು ಗೌರವಿಸಲಾಯಿತು.
ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಶ್ರೀಧರ್ ಕೆ.ವಿ. ಅಧ್ಯಕ್ಷತೆ ವಹಿಸಿದ್ದರು. ರೋಟರಿ 3181ರ ಸಹಾಯಕ ರಾಜ್ಯಪಾಲ ಡಾ.ಶಶಿಧರ್ ಡೊಂಗ್ರೆ, ಇಂದಿರಾನಗರ ರೋಟರಿ ಕ್ಲಬ್ ಅಧ್ಯಕ್ಷ ಗೋಪಿನಾಥ್ ಎನ್., ಮಾಜಿ ಎಂಎಲ್‌ಸಿ ಪ್ರತಾಪಸಿಂಹ ನಾಯಕ್, ಪ್ರಮುಖರಾದ ಮಹಾಬಲ ಮಾರ್ಲ, ಡಾ.ಮಂಜು, ಸುಪ್ರಿಯಾ ಕಂದಾರಿ, ಡಾ.ರಾಘವೇಂದ್ರ ಪಿದಮಲೆ, ಪ್ರೇಮರಾಜ್ ರೋಷನ್ ಸಿಕ್ವೇರಾ, ಮಲ್ಲಿಕಾ ಇತರರು ಇದ್ದರು. ಸಾನಿಧ್ಯ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಡಾ.ವಸಂತ್ ಕುಮಾರ್ ಶೆಟ್ಟಿ ಸ್ವಾಗತಿಸಿದರು.