ಕೃಷಿಗೆ ಅಪಾಯವನ್ನುಂಟುಮಾಡುತ್ತಿರುವ ದೈತ್ಯ ಆಫ್ರಿಕನ್ ಬಸವನ ಹುಳ.
ವಿಜಯವಾಣಿ ಸುದ್ದಿಜಾಲ ಬದಿಯಡ್ಕ
ಮಳೆಗಾಲ ಆರಂಭವಾಗುತ್ತಿದ್ದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಫ್ರಿಕನ್ ಬಸವನ ಹುಳುಗಳ ಉಪಟಳ ಹೆಚ್ಚಾಗುತ್ತಿದೆ. ಕಾಸರಗೋಡು ಜಿಲ್ಲೆಯ ಉದುಮ ಮತ್ತು ಬದಿಯಡ್ಕ ಪಂಚಾಯಿತಿಗಳಿಂದ ಹಿಡಿದು ಕೊಟ್ಟಾಯಂ ಜಿಲ್ಲೆಯ ಕಡುತ್ತುರುತಿ ಗ್ರಾಪಂವರೆಗೆ ಮತ್ತು ತ್ರಿಶೂರ್ ನಗರದ ಪೂಂಕುನ್ನಂವರೆಗೆ ರಾಜ್ಯದ ಹಲವು ಭಾಗಗಳಲ್ಲಿ ಆಫ್ರಿಕನ್ ಬಸವನ ಹುಳುಗಳ ಹಾವಳಿ ತೀವ್ರಗೊಂಡಿದೆ.
ಈ ಬಸವನ ಹುಳುಗಳು ಮನೆಗಳ ಗೋಡೆಗಳ ಮೇಲೆ, ರಸ್ತೆಬದಿಗಳಲ್ಲಿ ಮತ್ತು ಬಾವಿಗಳಲ್ಲಿ ಗೂಡುಕಟ್ಟಿ ಸಂತಾನೋತ್ಪತ್ತಿ ಹೆಚ್ಚಿಸುತ್ತವೆ. ಮಳೆಗಾಲದಲ್ಲಿ ಆರ್ದ್ರ ವಾತಾವರಣದಲ್ಲಿ ವೇಗವಾಗಿ ಬೆಳೆಯುವ ಇವುಗಳು ಕೃಷಿ ಬೆಳೆ, ಸಸ್ಯ, ತರಕಾರಿ ಬೆಳೆಗಳನ್ನು ತಿಂದು ಸಂಪೂರ್ಣ ನಾಶ ಮಾಡುತ್ತವೆ.
ಕಾಸರಗೋಡು ಜಿಲ್ಲೆಯ ಉದುಮ ಗ್ರಾಪಂ ಮತ್ತು ಬದಿಯಡ್ಕ ಪಂಚಾಯಿತಿಯಲ್ಲಿ ಆಫ್ರಿಕನ್ ಬಸವನ ಹುಳುಗಳ ಉಪದ್ರವ ವ್ಯಾಪಕವಾಗಿದೆ ಎಂದು ಸಾರ್ವಜನಿಕ ಕಾರ್ಯಕರ್ತ ಮೂಸಾ ಪಾಲಕುನ್ನು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ದೂರಿನ ಮೇರೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ಆದರೆ ಆಫ್ರಿಕನ್ ಬಸವನ ಹುಳುಗಳ ನಿಯಂತ್ರಣ ಕೃಷಿ ಇಲಾಖೆಯ ವ್ಯಾಪ್ತಿಗೆ ಬರುವುದರಿಂದ ದೂರನ್ನು ಮುಂದಿನ ಕ್ರಮಕ್ಕಾಗಿ ಉದುಮ ಕೃಷಿ ಕಚೇರಿಗೆ ರವಾನಿಸಲಾಗಿದೆ. ಬಸವನ ಹುಳವನ್ನು ನಿರ್ಮೂಲನೆ ಮಾಡಲು ತುರ್ತು ಕ್ರಮ ಪ್ರಾರಂಭಿಸಲಾಗಿದೆ ಎಂದು ಗ್ರಾಪಂ ಕಾರ್ಯದರ್ಶಿ ಮಾಹಿತಿ ನೀಡಿದರು.
ಬದಿಯಡ್ಕ ಗ್ರಾಪಂ ವ್ಯಾಪ್ತಿಯ ಕೆಲವೆಡೆ ಆಫ್ರಿಕನ್ ಬಸವನ ಹುಳ ಕಂಡುಬಂದಿದೆ. ಆದರೆ ಕಳೆದ ವರ್ಷ ವ್ಯಾಪಕವಾಗಿದ್ದಷ್ಟು ಈ ಬಾರಿ ಈವರೆಗೆ ವರದಿಯಾಗಿಲ್ಲ. ಕೃಷಿಕರಿಗೆ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ನೈರ್ಮಲ್ಯ ಕಾಪಾಡುವುದು, ನೀರು ನಿಲ್ಲದಂತೆ ಜಾಗರೂಕತೆ ವಹಿಸುವುದು ಅಗತ್ಯ. ತಾಮ್ರದ ಸಲ್ಫೇಟ್ ಸಿಂಪಡಣೆ ಮಾಡಿದರೆ ನಿಯಂತ್ರಣ ಸಾಧ್ಯವಿದ್ದು, ಈ ಬಗ್ಗೆ ಗ್ರಾಪಂಗೆ ಮಾಹಿತಿ ನೀಡಲಾಗಿದೆ.
— ಮೋಹನನ್, ಸಹಾಯಕ ಕೃಷಿ ಅಧಿಕಾರಿ, ಬದಿಯಡ್ಕ