ಬ್ರಹ್ಮಾವರ ಭಾಗದಲ್ಲಿ ಭತ್ತ ಕಟಾವು ಕಾರ್ಯ ಆರಂಭವಾಗಿರುವುದು. 
ಉಡುಪಿ

ಕಟಾವು ಯಂತ್ರಕ್ಕೆ ಕೆಸರು ತೊಡಕು

ಇಂದಿರಾ ಎನ್ ಕೆ
ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ
ಕರಾವಳಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ಕಟಾವಿಗೆ ಬಂದಿರುವ ಭತ್ತವನ್ನು ಕೊಯ್ಲು ಮಾಡಲು ರೈತರಿಗೆ ಸಮಸ್ಯೆಯಾಗಿತ್ತು. ಕಟಾವಿಗೆ ಯಂತ್ರಗಳನ್ನು ತರಿಸಲಾಗಿದ್ದರೂ ಮಳೆ ಬಿಡದ ಕಾರಣ ಯಂತ್ರಗಳು ಗದ್ದೆಗೆ ಇಳಿದಿರಲಿಲ್ಲ. ಇದೀಗ ಮಳೆ ಕೊಂಚ ಬಿಡುವು ನೀಡಿದ್ದು ಭತ್ತ ಕಟಾವು ಕಾರ್ಯ ಆರಂಭವಾಗಿದೆ. ಆದರೆ ಗದ್ದೆಗಳಲ್ಲಿ ನೀರು ತುಂಬಿಕೊಂಡಿರುವುದರಿಂದ ಯಂತ್ರಗಳು ಗದ್ದೆಯ ಕೆಸರಲ್ಲಿ ಹೂತುಹೋಗುತ್ತಿದ್ದು ರೈತರಿಗೆ ಹೊಸ ಸಮಸ್ಯೆ ಎದುರಾಗಿದೆ.
ಈಗಾಗಲೇ ಕಟಾವು ಕಾರ್ಯ ವಿಳಂಬವಾಗಿ ನಿರೀಕ್ಷಿತ ಫಸಲು ಕೈತಪ್ಪಿ ಹೋಗುವ ಭೀತಿಯಲ್ಲಿರುವ ರೈತರಿಗೆ ಕಟಾವು ಯಂತ್ರಗಳು ಹೂತುಹೋಗುತ್ತಿರುವುದರಿಂದ ಅವುಗಳ ವೆಚ್ಚ ಭರಿಸಲಾಗದೆ ಕಂಗಾಲಾಗಿದ್ದಾರೆ.
ಬ್ರಹ್ಮಾವರ ಸಹಿತ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರಸಕ್ತ ವರ್ಷ ಗದ್ದೆ, ಹಡಿಲುಬಿದ್ದ ಭೂಮಿಯಲ್ಲೂ ಭತ್ತ ಕೃಷಿ ಮಾಡಲಾಗಿದೆ. ಹಲವೆಡೆ ಉತ್ತಮ ಫಸಲಿನ ನಿರೀಕ್ಷೆ ಇತ್ತು. ಆದರೆ ಮಳೆಯ ಕಾರಣದಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ ರೈತರ ಬದುಕು.

ದುಬಾರಿ ದರ

ಸೂಕ್ತ ರಸ್ತೆ ಇಲ್ಲದ ಕಾರಣ ಉಳುಮೆ ಯಂತ್ರ, ಕಟಾವು ಯಂತ್ರಗಳು ಗದ್ದೆಗೆ ಇಳಿಯುವುದೇ ಸಾಹಸವಾಗಿದೆ. ಏರುಪೇರು, ಹೊಂಡಗುಂಡಿಗಳನ್ನು ಹಾಗೂ ಹೊಳೆಗಳನ್ನು ದಾಟಿ ಕಟಾವು ಯಂತ್ರಗಳು ಹಲವೆಡೆ ಗದ್ದ್ದೆಗಿಳಿದು ಕಟಾವು ಪೂರ್ತಿಗೊಳಿಸಿವೆ. ಕಟಾವು ಯಂತ್ರದ ದರ ಗಂಟೆಗೆ 2,500 ರೂ. ಇದ್ದು, ರೈತರಿಗೆ ಇದು ದುಬಾರಿಯಾಗಿದೆ. ಯಂತ್ರಗಳು ಗದ್ದೆಯ ಕೆಸರಿನಲ್ಲಿ ಹೂತು ಹೋಗುವುದರಿಂದ ಕಟಾವು ಕಾರ್ಯ ವಿಳಂಬವಾಗಿ ಖರ್ಚು ಹೆಚ್ಚಾಗುತ್ತಿದೆ. ಕೆಲವೆಡೆ ಕಾರ್ಮಿಕರನ್ನು ಬಳಸಿಕೊಂಡು ಕಟಾವು ಮಾಡಲಾಗುತ್ತಿದೆ.
ತಾಲೂಕಿನ ಬಹುತೇಕ ರೈತರು ಭತ್ತ ಕೃಷಿಯೊಂದಿಗೆ ಉಪಬೆಳೆಗಳನ್ನು ಬೆಳೆಯುತ್ತಿದ್ದಾರೆ. ಆದರೆ ಮಳೆಯ ಕಾರಣದಿಂದ ಇವುಗಳೂ ನಾಶವಾಗುತ್ತಿವೆ. ಜತೆಗೆ ಪ್ರಾಣಿ, ಪಕ್ಷಿಗಳಿಂದ ಬೆಳೆ ರಕ್ಷಿಸಿಕೊಳ್ಳುವುದೂ ರೈತರಿಗೆ ಸವಾಲಾಗಿದೆ. ಬೆಂಬಲ ಬೆಲೆಯೂ ಸಿಗದೆ ರೈತರು ಕಂಗಾಲಾಗಿದ್ದು, ಭತ್ತ ಬೆಳೆಯಿಂದ ವಿಮುಖರಾಗುವಂತಹ ಪರಿಸ್ಥಿತಿ ಇದೆ.

ಕಟಾವು ಯಂತ್ರಗಳು ಬಂದಾಗಲೇ ಕಟಾವು ಮಾಡಿದ್ದರೆ ಬೆಳೆ ಸ್ವಲ್ಪವಾದರೂ ಸಿಗುತ್ತಿತ್ತು. ಇಷ್ಟು ದಿನದ ತನಕ ಮಳೆ ಬಿಡಲಿ ಎಂದು ಕಾಯುತ್ತಿದ್ದೆವು. ಗದ್ದೆಯಲ್ಲಿ ನೀರು ಇದ್ದರೂ ಕಟಾವು ಮಾಡಿಸಿದ್ದೇನೆ. ಫಸಲು, ಒಣಹುಲ್ಲು ನಿರೀಕ್ಷಿತ ಪ್ರಮಾಣದಲ್ಲಿ ಸಿಗುವುದೇ ಅನುಮಾನವಾಗಿದೆ.

ಗದ್ದೆಗಳಲ್ಲಿ ನೀರು ಇರುವುದು ಕಟಾವು ಯಂತ್ರಗಳಿಗೆ ಭಾರಿ ಸಮಸ್ಯೆಯಾಗುತ್ತದೆ. ಆದರೂ ಜನರ ಒತ್ತಾಯಕ್ಕೆ ಕಟಾವು ವಾಡುತ್ತೇವೆ. ಚಕ್ರಕ್ಕೆ ಹುಲ್ಲು ಇನ್ನಿತರ ವಸ್ತುಗಳು ಸಿಕ್ಕಿ ಬಿದ್ದು ಕಟಾವು ಯಂತ್ರಗಳಿಗೆ ತುಂಬಾ ಹಾನಿಯಾಗುತ್ತದೆ. ಗಂಟೆಗೆ 2,500 ರೂ. ಹಣ ತೆಗೆದುಕೊಳ್ಳುತ್ತೇವೆ. ಲಕ್ಷಾಂತರ ರೂ. ವೆಚ್ಚದ ಯಂತ್ರದೊಂದಿಗೆ 4 ಮಂದಿ ಸಹಾಯಕರು ಜತೆಗೆ ಇರಬೇಕಾಗುತ್ತದೆ.