ಉಡುಪಿಯ ಕಂಡೀರಾ ಸಾಮಾಜಿಕ ಜಾಲತಾಣ ಪುಟದ ರೂವಾರಿ ಮಂಜುನಾಥ ಕಾಮತ್ ಮಾತನಾಡಿದರು. 
ಉಡುಪಿ

ವಿದ್ಯಾರ್ಥಿ ಹಂತದಲ್ಲೇ ಕೌಶಲ ರೂಢಿಸಿಕೊಳ್ಳಬೇಕು

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಶಿಕ್ಷಣ ಪಡೆಯಲು ಇಂದು ವಿಪುಲ ಅವಕಾಶಗಳಿವೆ. ಯಾವುದೇ ಪದವಿ ಅಥವಾ ಕೋರ್ಸ್ ಆಯ್ಕೆ ಮಾಡಿದರೂ ಅದನ್ನು ಪ್ರೀತಿಸಬೇಕು. ಯಾರದೋ ಒತ್ತಾಯಕ್ಕೆ ಮಣಿದು ಏನನ್ನೂ ಮಾಡಬಾರದು. ಆಸಕ್ತಿಯ ಕ್ಷೇತ್ರವನ್ನು ಆರಿಸಿಕೊಂಡು ಅದರಲ್ಲೇ ಸಾಧನೆ ಮಾಡಬೇಕು ಎಂದು ಉಡುಪಿಯ ಕಂಡೀರಾ ಸಾಮಾಜಿಕ ಜಾಲತಾಣ ಪುಟದ ರೂವಾರಿ ಮಂಜುನಾಥ ಕಾಮತ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಬಿ.ವೋಕ್ ಡಿಜಿಟಲ್ ಮೀಡಿಯಾ ಮತ್ತು ಫಿಲ್ಮ್ ಮೇಕಿಂಗ್ ವಿಭಾಗದ ‘ಲೂಮೋಸ್’ ವಿದ್ಯಾರ್ಥಿ ಸಂಘದ ಶೈಕ್ಷಣಿಕ ವರ್ಷದ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದರು.
ಡಿಜಿಟಲ್ ಜಗತ್ತಿನಲ್ಲಿ ಎಲ್ಲರಿಗೂ ವೃತ್ತಿಪರರಾಗಲು ಸಾಧ್ಯವಿದೆ. ಆದರೆ ಕೌಶಲಗಳಿದ್ದರೆ ಮಾತ್ರವೇ ಉಳಿಯಲು ಸಾಧ್ಯ. ಅಂತಹ ಕೌಶಲಗಳನ್ನು ವಿದ್ಯಾರ್ಥಿ ಜೀವನದಲ್ಲೇ ರೂಢಿಸಿಕೊಂಡರೆ ವೃತ್ತಿ ಜೀವನಕ್ಕೆ ಕಾಲಿಡುವಾಗ ಸುಲಭವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಭಾಗದ ಮುಖ್ಯಸ್ಥ ಮಾಧವ ಹೊಳ್ಳ, ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಕೊಂಡಷ್ಟು ಅವರ ವ್ಯಕ್ತಿತ್ವ ವಿಕಸನ ಸಾಧ್ಯ. ಇದಕ್ಕೆ ಬೇಕಾದಂತೆ ವಿದ್ಯಾರ್ಥಿ ಸಂಘಗಳು ರೂಪುಗೊಳ್ಳಬೇಕು. ಕೌಶಲಗಳನ್ನು ಪ್ರದರ್ಶಿಶಿಸಲು ಇಂತಹ ವೇದಿಕೆಗಳನ್ನು ವಿದ್ಯಾರ್ಥಿಗಳು ಸದುಪಯೋಗಿಸಿಕೊಳ್ಳಬೇಕು ಎಂದರು. ವಿದ್ಯಾರ್ಥಿನಿ ಅಂಕಿತಾ ನಿರೂಪಿಸಿದರು. ಸ್ಪರ್ಧಾ ಅತಿಥಿ ಪರಿಚಯಿಸಿದರು. ಅದ್ವಿತಿ ವಂದಿಸಿದರು.

ಪ್ರಮಾಣ ವಚನ ಸ್ವೀಕಾರ

ಸಹಾಯಕ ಪ್ರಾಧ್ಯಾಪಕ ಇಂದುಧರ ಕಿಣಿ ಲೂಮೋಸ್ ವಿದ್ಯಾರ್ಥಿ ಸಂಘದ 2025-26ನೇ ಸಾಲಿನ ವಾರ್ಷಿಕ ವರದಿ ವಾಚಿಸಿ, ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ವಿದ್ಯಾರ್ಥಿ ಸಂಘದ 2026-27ನೇ ಸಾಲಿನ ಅಧ್ಯಕ್ಷರಾಗಿ ಸಿಂಚನಾ, ಕಾರ್ಯದರ್ಶಿಯಾಗಿ ಆದಿತ್ಯ ಮಾಡಳ್ಳಿ, ದ್ವಿತೀಯ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿ ಪ್ರತಿನಿಧಿಯಾಗಿ ಹೇಮಲತಾ ಮತ್ತು ಸಿಂಧು ಪ್ರಮಾಣವಚನ ಸ್ವೀಕರಿಸಿದರು.