ಎಸ್‌ಕೆಎಫ್ ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್ ಲೋಗೋ 
ಉಡುಪಿ

ಎಸ್‌ಕೆಎಫ್ ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್ ಆರಂಭ

Avinash R

ಪ್ರಮುಖ ಮುಖ್ಯಾಂಶಗಳು

  • ಎಸ್‌ಕೆಎಫ್
  • ಡಾ.ಜಿ.ರಾಮಕೃಷ್ಣ ಆಚಾರ್ ಚಾರಿಟೆಬಲ್ ಟ್ರಸ್ಟ್
  • ತಾಂತ್ರಿಕ ಕೌಶಲ
  • ಕೋರ್ಸ್‌
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಡಾ.ಜಿ.ರಾಮಕೃಷ್ಣ ಆಚಾರ್ ಚಾರಿಟೆಬಲ್ ಟ್ರಸ್ಟ್ ಹಾಗೂ ಎಸ್‌ಕೆಎಫ್ ಎಲಿಕ್ಸರ್ ಇಂಡಿಯಾ ಪ್ರೈ.ಲಿ. ಮೂಡುಬಿದಿರೆ ಸಂಸ್ಥೆಯ ಎಸ್‌ಕೆಎಫ್ ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್ ಮೇ 25ರಂದು ಕುಂದಾಪುರ ತಾಲೂಕಿನ ಗುಡ್ಡೆಯಂಗಡಿಯಲ್ಲಿ ಆರಂಭಗೊಳ್ಳಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಡಾ.ಜಿ.ರಾಮಕೃಷ್ಣ ಆಚಾರ್ ತಿಳಿಸಿದರು.
ನನ್ನ ಹುಟ್ಟೂರು ಗುಡ್ಡೆಯಂಗಡಿ. ಇಲ್ಲಿಂದ ಉದ್ಯೋಗಕ್ಕಾಗಿ ಹೊರಗೆ ಹೋಗಿ ಎಸ್‌ಕೆಎಫ್ ಉದ್ಯಮ ಸ್ಥಾಪಿಸಿದೆ. ಪ್ರಸ್ತುತ 23 ದೇಶಗಳಿಗೆ ನಮ್ಮ ತಾಂತ್ರಿಕತೆ ಮತ್ತು ಯಂತ್ರಗಳನ್ನು ಒದಗಿಸುತ್ತಿದ್ದೇವೆ. ಮುಂದಿನ 10 ವರ್ಷಗಳಿಗೆ ನಮ್ಮ ದೇಶಕ್ಕೆ ಏನು ಬೇಕು, ದೇಶ ಮತ್ತು ಸರ್ಕಾರ ಯಾವ ದಿಕ್ಕಿನಲ್ಲಿ ಯೋಚನೆ ಮಾಡುತ್ತಿವೆ ಎಂದು ಯೋಚಿಸಿಕೊಂಡು, ಈ ಊರಿಗೊಂದು ಏನಾದರೂ ಬದಲಾವಣೆ ತರಬೇಕು ಎನ್ನುವ ನಿಟ್ಟಿನಿಂದ ಗ್ರಾಮೀಣ ಪ್ರದೇಶದ ಯುವಕ- ಯುವತಿಯರಿಗೆ ತಾಂತ್ರಿಕ ಕೌಶಲ ಅಭಿವೃದ್ಧಿಪಡಿಸಿ ಉದ್ಯೋಗಾವಕಾಶ ಹೆಚ್ಚಿಸುವ ಉದ್ದೇಶದಿಂದ ಈ ತರಬೇತಿ ಕೇಂದ್ರ ಆರಂಭಿಸುತ್ತಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾವು ನೀಡುವ ತರಬೇತಿ ಸಂಪೂರ್ಣ ಕೌಶಲಾಧಾರಿತವಾಗಿದೆ. ಇಂಟರ್ನ್‌ಶಿಪ್ ಮೂಲಕ ವಿದ್ಯಾರ್ಥಿಗಳಿಗೆ ನೈಜ ಕೈಗಾರಿಕಾ ಅನುಭವ ಸಿಗುತ್ತದೆ. ಇದು ಅವರ ಆತ್ಮವಿಶ್ವಾಸ ಹೆಚ್ಚಿಸಿ ಉದ್ಯೋಗಾವಕಾಶಗಳನ್ನು ಸುಲಭಗೊಳಿಸುತ್ತದೆ. ಅವಕಾಶಗಳಿಗಾಗಿ ಕಾಯದೆ, ಅವಕಾಶಗಳನ್ನು ಸೃಷ್ಟಿಸುವ ಕೌಶಲಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ವಿವಿಧ ಕೋರ್ಸ್‌ಗಳ ತಾಂತ್ರಿಕ ಸಲಹೆಗಾರ ಬಾಲಕೃಷ್ಣ ಮಾತನಾಡಿ, ಇಂದಿನ ಕ್ಷೇತ್ರದ ಅಗತ್ಯಗಳನ್ನು ಮನಗಂಡು, ಕೈಗಾರಿಕಾ ಕೌಶಲಯುತ ಮಾನವ ಸಂಪನ್ಮೂಲವನ್ನು ರೂಪಿಸುವುದು ನಮ್ಮ ಪ್ರಮುಖ ಗುರಿ. ಕೈಗಾರಿಕಾ ತರಬೇತಿ ಜತೆಗೆ ಸೃಜನಾತ್ಮಕ ವೃತ್ತಿ ಜೀವನಕ್ಕೆ ಅವಕಾಶ, ಕೃತಕ ಬುದ್ಧಿಮತ್ತೆ ಮತ್ತು ಆಟೋಮೇಶನ್ ಯುಗಕ್ಕೆ ಕೌಶಲಾಧಾರಿತ ತರಬೇತಿ ಹಾಗೂ ತಾಂತ್ರಿಕ ಕೋರ್ಸ್‌ಗಳಾದ ಇಲೆಕ್ಟ್ರಿಕಲ್ ಇಲೆಕ್ಟ್ರಾನಿಕ್ಸ್, ಫಿಟ್ಟಿಂಗ್- ವೆಲ್ಡಿಂಗ್, ಮೆಕ್ಯಾನಿಕ್- ರೆಫ್ರಿಜರೇಶನ್, ಏರ್ ಕಂಡೀಷನಿಂಗ್ ಹಾಗೂ ಪ್ಲಂಬಿಂಗ್, ಫ್ಯಾಶನ್ ಡಿಸೈನ್ ಕೋರ್ಸ್ ಮತ್ತು ಮಹಿಳೆಯರಿಗಾಗಿ ಫ್ಯಾಶನ್ ಡಿಸೈನಿಂಗ್ ತರಬೇತಿ ನೀಡಲಾಗುವುದು ಎಂದರು.
ಮೂರು ವರ್ಷಗಳ ಕೋರ್ಸ್‌ಗಳನ್ನು ಸರಳಗೊಳಿಸಿ ಒಂದು ವರ್ಷದ ಉದ್ಯೋಗಾಧಾರಿತ ಪ್ರಮಾಣಪತ್ರ ಕೋರ್ಸ್‌ಗಳನ್ನು ಪ್ರಾರಂಭಿಸುತ್ತಿದ್ದು, ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಎಲ್ಲ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಪಾಸ್ ಅಥವಾ ಫೇಲ್ ಎಂಬ ವ್ಯತ್ಯಾಸವಿಲ್ಲದೆ ಭದ್ರತಾ ಹಾಜರಾದ ಠೇವಣಿಯೊಂದಿಗೆ ಉಚಿತವಾಗಿ ಯಾವುದೇ ಪ್ರದೇಶದಿಂದ ಬಂದಿರುವ ವಿದ್ಯಾರ್ಥಿಗಳಿಗೆ ಪ್ರವೇಶಾತಿಗೆ ಅವಕಾಶ ನೀಡಲಾಗುವುದು. ಪ್ರತಿ ಬ್ಯಾಚ್‌ಗೆ 20 ವಿದ್ಯಾರ್ಥಿಗಳ ಮಿತಿ ಇದೆ ಎಂದು ವಿವರಿಸಿದರು.
ಆಡಳಿತ ಸಲಹೆಗಾರ ಪ್ರೊ.ಬಾಲಕೃಷ್ಣ ಶೆಟ್ಟಿ ಮಾತನಾಡಿ, ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಮೂಡುಬಿದಿರೆಯ ಎಕೆಎಫ್ ಎಲಿಕ್ಸರ್ ಇಂಡಿಯಾ ಸಂಸ್ಥೆಯಲ್ಲಿ 3 ತಿಂಗಳ ಇಂಟರ್ನ್‌ಶಿಪ್ ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.