ಕಾಪು ತಾಲೂಕು ಆಡಳಿತ ಸೌಧದಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಯೊಂದಿಗೆ ಜನಸ್ಪಂದನ ಸಭೆ ನಡೆಯಿತು. 
ಉಡುಪಿ

ನಿವೇಶನ ಸಮಸ್ಯೆ ಅಧಿವೇಶನದಲ್ಲಿ ಪ್ರಸ್ತಾಪ

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಯೋಜನಾ ಪ್ರಾಧಿಕಾರದ ಸಮಸ್ಯೆಯಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ನಿವೇಶನ ಹಾಗೂ ದಾರಿ ಸಮಸ್ಯೆ ನಿವಾರಣೆಗೆ ಕಾನೂನಿನ ತೊಡಕುಗಳು ಆಗುತ್ತಿದೆ. ಈ ಕುರಿತು ರಾಜ್ಯಮಟ್ಟದಲ್ಲಿ ಗಮನ ಸೆಳೆಯಲು ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭರವಸೆ ನೀಡಿದರು.
ಕಾಪು ತಾಲೂಕು ಆಡಳಿತ ಸೌಧದಲ್ಲಿ ಬುಧವಾರ ನಡೆದ ತಾಲೂಕುಮಟ್ಟದ ಜನಸ್ಪಂದನಾ ಸಭೆ ಉದ್ಘಾಟಿಸಿದ ಬಳಿಕ ವಾತನಾಡಿ, ಒಟ್ಟು 43 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ ಯೋಜನಾ ಪ್ರಾಧಿಕಾರಕ್ಕೆ ಸಂಬಂಧಿಸಿ ಹೆಚ್ಚಿನ ದೂರುಗಳು ಸ್ವೀಕಾರವಾಗಿವೆ ಎಂದು ಮಾಹಿತಿ ನೀಡಿದರು.

ಸಮಸ್ಯೆಗಳ ಬಗ್ಗೆ ದೂರು

ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ, ತೆಂಕ, ಪಡುಬಿದ್ರಿ, ಕಟಪಾಡಿ, ಕಾಪುವಿನ ಸಮಸ್ಯೆಗಳ ಬಗ್ಗೆ ಜನರು ದೂರಿದರು. ಪ್ರತಿಕ್ರಿಯಿಸಿದ ಶಾಸಕರು, ಹೆದ್ದಾರಿ ಇಲಾಖಾಧಿಕಾರಿ ಹಾಗೂ ಸಂಸದರ ಸಮಕ್ಷಮದಲ್ಲಿ ಶೀಘ್ರವೇ ಸಭೆ ಕರೆಯಲಾಗುವುದು ಎಂದು ಭರವಸೆ ನೀಡಿದರು. ಇದೇ ವೇಳೆ ಜಲಜೀವನ್ ಯೋಜನೆಯಲ್ಲಿರುವ ಲೋಪಗಳನ್ನು ಸರಿಪಡಿಸುವಂತೆ ಶಾಸಕರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕುಡಿಯುವ ನೀರಿಗೆ ಅಡ್ಡಿ

ತೆಂಕ ಗ್ರಾಮದ ಯುಪಿಸಿಎಲ್ ಪಂಪ್‌ಹೌಸ್ ಪ್ರದೇಶದಲ್ಲಿ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಡಿತಗೊಳಿಸಿ ರೆಸಾರ್ಟ್‌ಗಳಿಗೆ ಅಕ್ರಮವಾಗಿ ಸಂಪರ್ಕ ಕಲ್ಪಿಸಿರುವ ಬಗ್ಗೆ ಸ್ಥಳೀಯರು ಆರೋಪಿಸಿದರು. ಈ ಕುರಿತು ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ಪಿಡಿಒ ಹಾಗೂ ಜೆಜೆಎಂ ಇಂಜಿನಿಯರ್‌ಗಳಿಗೆ ಸೂಚಿಸಲಾಯಿತು.
ನಂದಿಕೂರಿನಲ್ಲಿ ಕಾರ್ಯಾಚರಿಸುತ್ತಿರುವ ಬಯೋಡಿಸೇಲ್ ಟಕದಿಂದ ಪರಿಸರ ವಾಲಿನ್ಯಗೊಂಡು ಸಮಸ್ಯೆಯಾಗುತ್ತಿವೆ ಎಂದು ಸಾರ್ವಜನಿಕರು ದೂರಿದರು. ಉತ್ತರಿಸಿದ ಶಾಸಕರು, ಈ ಬಗ್ಗೆ ಸ್ಥಳೀಯರ ನಿಯೋಗದೊಂದಿಗೆ ಬೆಳಗಾವಿ ಅಧಿವೇಶನಕ್ಕೆ ತೆರಳಿ ಪರಿಸರ ನಿಯಂತ್ರಣ ಮಂಡಳಿ ಅಧ್ಯಕ್ಷರೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ತಹಸೀಲ್ದಾರ್ ಅನಂತಶಂಕರ ಬಿ., ತಾಪಂ ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವ, ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಮುಖ್ಯಾಧಿಕಾರಿ ಶಶಿಕಲಾ ಉಪಸ್ಥಿತರಿದ್ದರು. ಗ್ರಾವಾಡಳಿತಾಧಿಕಾರಿ ಶ್ರೀನಿವಾಸ ಆರ್.ಟಿ. ಸಭೆ ನಿರ್ವಹಿಸಿದರು.

ಬಸ್ ನಿಲುಗಡೆಗೆ ಮನವಿ

ಉಡುಪಿಯಿಂದ ಕಾಪುವಿಗೆ ಆಗಮಿಸುವವರ ಅನುಕೂಲಕ್ಕೆ ಕಾಪು ಆಡಳಿತ ಸೌಧದ ಮುಂಭಾಗದಲ್ಲಿ ಖಾಸಗಿ ಬಸ್‌ಗೆ ನಿಲುಗಡೆಗೆ ಅವಕಾಶ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದರು. ಈ ಕುರಿತು ಆರ್‌ಟಿಒ ವಿಭಾಗದ ಗಮನಕ್ಕೆ ತಂದು ಕ್ರಮ ಕೈಗೊಳ್ಳುವುದಾಗಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭರವಸೆ ನೀಡಿದರು.
ಒಟಿಪಿ ಸಮಸ್ಯೆ ಸರಿಪಡಿಸಲು ಒತ್ತಾಯ
ಖಾತೆ ಬದಲಾವಣೆ ವೇಳೆ ವೃಂಶವೃಕ್ಷದಲ್ಲಿರುವ ಖಾತೆದಾರರೆಲ್ಲರಿಗೂ ಒಟಿಪಿ ಸಂದೇಶ ರವಾನೆಯಿಂದ ಸಮಸ್ಯೆಗಳಾಗುತ್ತಿವೆ. ಈ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದರು. ಪ್ರತಿಕ್ರಿಯಿಸಿದ ತಹಸೀಲ್ದಾರರು, ಈ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದರು. ಕಂದಾಯ ಅಧಿಕಾರಿಗಳ ಜತೆಗೆ ಸಭೆ ನಡೆಸಿ ಈ ಕುರಿತು ಚರ್ಚಿಸಲಾಗುವುದು ಎಂದು ಶಾಸಕರೂ ತಿಳಿಸಿದರು. ಬಳಿಕ ಫಲಾನುಭವಿಗಳಿಗೆ ಹಕ್ಕುಪತ್ರ ಹಾಗೂ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.