ಉಡುಪಿ: ಜಿಲ್ಲೆಯಲ್ಲಿ ಇತ್ತೀಚೆಗೆ ಎಸ್ಐಆರ್ ಪ್ರಕ್ರಿಯೆಗಳು ಆರಂಭಗೊಂಡ ಬೆನ್ನಲ್ಲೇ ಸಾರ್ವಜನಿಕ ವಲಯದಲ್ಲಿ ಜನನ ಪ್ರಮಾಣಪತ್ರ ಹಾಗೂ ತಿದ್ದುಪಡಿಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಕಚೇರಿಗಳಿಗೆ ಹರಿದುಬರುತ್ತಿರುವ ಅರ್ಜಿಗಳ ಸಂಖ್ಯೆಯೇ ಇದಕ್ಕೆ ಸಾಕ್ಷಿಯಾಗಿದ್ದು, ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಈ ಗ್ರಾಫ್ ಗಣನೀಯವಾಗಿ ಏರಿಕೆಯಾಗುತ್ತಿದೆ.
ಜನನ-ಮರಣ ನೋಂದಣಿ ಹಾಗೂ ತಿದ್ದುಪಡಿ ವಿಭಾಗದಲ್ಲಿ ವರ್ಷದ ಆರಂಭಕ್ಕೆ ಹೋಲಿಸಿದರೆ ಮೇ ಮತ್ತು ಜೂನ್ ತಿಂಗಳಿನಲ್ಲಿ ದಾಖಲೆ ಪ್ರಮಾಣದ ಅರ್ಜಿಗಳು ಸಲ್ಲಿಕೆಯಾಗಿವೆ.
ವಿವಿಧ ಅಧಿಕೃತ ದಾಖಲಾತಿಗಳು, ಶಾಲಾ-ಕಾಲೇಜು ಪ್ರವೇಶಾತಿ ಎಸ್ಐಆರ್ ಪ್ರಕ್ರಿಯೆಗಳಿಗೆ ಜನನ ಪ್ರಮಾಣಪತ್ರ ಕಡ್ಡಾಯವಾಗುತ್ತಿರುವುದರಿಂದ ಸಾರ್ವಜನಿಕರು ತಮ್ಮ ದಾಖಲೆಗಳನ್ನು ಅಪ್ಡೇಟ್ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ. ಇದೇ ಕಾರಣಕ್ಕೆ ಸ್ಥಳಿಯ ಆಡಳಿತ ಕಚೇರಿಗಳಲ್ಲಿ ಸಾರ್ವಜನಿಕರ ದಟ್ಟಣೆ ಹೆಚ್ಚಾಗಿದೆ.
ಹೆಚ್ಚುತ್ತಿರುವ ತಿದ್ದುಪಡಿ ಅರ್ಜಿಗಳು
ವಿವಿಧ ದಾಖಲೆಗಳು ಮತ್ತು ಮತದಾರರ ಗುರುತಿನ ಚೀಟಿಯಲ್ಲಿ ಹೆಸರು, ಜನ್ಮದಿನಾಂಕ ಒಂದೇ ರೀತಿ ಇರಬೇಕು. ಇದರಲ್ಲಿ ವ್ಯತ್ಯಾಸಗಳಿದ್ದರೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಹೆಸರು, ಜನ್ಮದಿನಾಂಕ ಅಥವಾ ಪೋಷಕರ ಹೆಸರಿನಲ್ಲಿರುವ ತಪ್ಪುಗಳನ್ನು ಸರಿಪಡಿಸಲು ಸಾರ್ವಜನಿಕರು ಮುಗಿಬೀಳುತ್ತಿದ್ದಾರೆ. ಮಾರ್ಚ್ ತಿಂಗಳಿನಲ್ಲಿ ಕೇವಲ 327 ಅರ್ಜಿಗಳು ಸ್ವೀಕೃತವಾಗಿದ್ದರೆ, ಜೂನ್ ವೇಳೆಗೆ ಈ ಸಂಖ್ಯೆ 565ಕ್ಕೆ ಏರಿಕೆಯಾಗಿದೆ. ಜನವರಿಯಲ್ಲಿ 371 ಅರ್ಜಿ ಸ್ವೀಕೃತವಾಗಿದ್ದು, 344 ಅರ್ಜಿ ವಿಲೇವಾರಿ ಮಾಡಲಾಗಿದೆ. ಅದೇ ರೀತಿ ಫೆಬ್ರವರಿಯಲ್ಲಿ 392 ಅರ್ಜಿಗಳಲ್ಲಿ 368 ವಿಲೇವಾರಿಯಾಗಿದೆ. ಮಾರ್ಚ್ನಲ್ಲಿ 327ರಲ್ಲಿ 297 ವಿಲೇವಾರಿ, ಏಪ್ರಿಲ್ನಲ್ಲಿ 397ರಲ್ಲಿ 371 ವಿಲೇವಾರಿ, ಮೇನಲ್ಲಿ 486ರಲ್ಲಿ 456 ವಿಲೇವಾರಿ, ಜೂನ್ನಲ್ಲಿ 565 ಅರ್ಜಿಗಳು ಬಂದಿದ್ದು, 537 ಅರ್ಜಿ ವಿಲೇವಾರಿಯಾಗಿದೆ.
ಹೊಸ ಜನನ ಮತ್ತು ಮರಣ ಪ್ರಮಾಣ ಪತ್ರಕ್ಕೂ ಬೇಡಿಕೆ
ಹೊಸದಾಗಿ ಜನನ ಮತ್ತು ಮರಣ ಪ್ರಮಾಣಪತ್ರಕ್ಕಾಗಿ ಸಲ್ಲಿಕೆಯಾಗುವ ಅರ್ಜಿಗಳ ಸಂಖ್ಯೆಯೂ ಜೂನ್ ತಿಂಗಳಿನಲ್ಲಿ ಗರಿಷ್ಠ ಮಟ್ಟ ತಲುಪಿದೆ. ಮಾರ್ಚ್ನಲ್ಲಿ 986 ಇದ್ದ ಅರ್ಜಿಗಳ ಸಂಖ್ಯೆ, ಜೂನ್ನಲ್ಲಿ 1,471ಕ್ಕೆ ಜಿಗಿದಿದೆ. ಏಪ್ರಿಲ್ನಲ್ಲಿ 1240 ಅರ್ಜಿಗಳು ಸಲ್ಲಿಕೆಯಾಗಿದ್ದು, 1200 ಅರ್ಜಿ ವಿಲೇವಾರಿಯಾಗಿದೆ. ಮೇನಲ್ಲಿ 1422 ಅರ್ಜಿ ಸ್ವೀಕೃತವಾಗಿದ್ದು, 1385 ವಿಲೇವಾರಿಯಾಗಿದೆ.