ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಉಡುಪಿಯಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪ್ರೊ. ಫಣಿರಾಜ್​ ಮಾತನಾಡಿದರು. ನಿಹಾಲ್​ ಕಿದಿಯೂರು, ಡಾ.ನಸುಹಾ, ಆಯಾನ್​ ಮಲ್ಪೆ, ರೆಹಾನ್​ ಉಡುಪಿ, ಸಾಕೀಬ್​ ಹೂಡೆ, ನಿಫಾಲ್​ ಕಿದಿಯೂರು ಇತರರಿದ್ದರು. 
ಉಡುಪಿ

ವಿದ್ಯಾರ್ಥಿಗಳ ಕನಸುಗಳ ಮೇಲೆ ಕೇಂದ್ರ ಸರ್ಕಾರ ದಾಳಿ

* ಚಿಂತಕ ಪ್ರೊ. ಫಣಿರಾಜ್​ ಆಕ್ರೋಶ

* ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಪ್ರತಿಭಟನೆ

ಉಡುಪಿ: ನೀಟ್​ ವ್ಯವಸ್ಥೆಯ ಮೂಲಕ ಭಾರತದಲ್ಲಿ ವೈದ್ಯಕೀಯ ಶಿಕ್ಷಣವನ್ನು ವ್ಯಾಪಾರವನ್ನಾಗಿ ಮಾಡಿದ್ದು, ನೈತಿಕ ಮತ್ತು ಸಮಾಜಿಕ ಬದ್ಧತೆ ನಾಶ ಮಾಡಲಾಗುತ್ತಿದೆ. ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆಯು ವಿದ್ಯಾರ್ಥಿಗಳ ಕನಸುಗಳ ಮೇಲಿನ ದಾಳಿಯಾಗಿದೆ. ಇದಕ್ಕೆ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ನೇರ ಹೊಣೆಯಾಗಿದ್ದು, ಕೇಂದ್ರ ಮಾನವ ಸಂಪನ್ಮೂಲ ಸಚಿವ ರಾಜೀನಾಮೆ ಕೊಡಬೇಕು ಎಂದು ಚಿಂತಕ ಪ್ರೊ.ಫಣಿರಾಜ್​ ಅಭಿಪ್ರಾಯಪಟ್ಟರು.
ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಉಡುಪಿ ನಗರದ ಜಟ್ಕಾ ಸ್ಟ್ಯಾಂಡ್​ ಬಳಿ ಎಸ್​ಐಒ ಮತ್ತು ಜಿಐಒ ಉಡುಪಿ ಜಿಲ್ಲೆ ಸೋಮವಾರ (ಮೇ 25) ಸಂಜೆ ಜಂಟಿಯಾಗಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಎಸ್​ಐಒ ರಾಷ್ಟ್ರೀಯ ಮಾಜಿ ಕಾರ್ಯದರ್ಶಿ ನಿಹಾಲ್​ ಕಿದಿಯೂರು, ಡಾ.ನಸುಹಾ, ಎಸ್​ಐಒ ಜಿಲ್ಲಾಧ್ಯಕ್ಷ ಆಯಾನ್​ ಮಲ್ಪೆ ಮಾತನಾಡಿದರು.
ಎಸ್​ಐಒ ಇದರ ರೆಹಾನ್​ ಉಡುಪಿ, ಸಾಕೀಬ್​ ಹೂಡೆ, ನಿಫಾಲ್​ ಕಿದಿಯೂರು, ಮುಝೈನ್​ ಆದಿ ಉಡುಪಿ, ಹಂಝಾ ಹಸನ್​ ಹೂಡೆ, ಹುಸೇನ್​ ಕೋಡಿಬೆಂಗ್ರೆ, ನಿಸಾರ್​ ಉಡುಪಿ, ಜಿಐಒ ಇದರ ಝೀಫಾ ನಾಝ್​,ಅಸ್ಮಾ ಬಾನು ಇತರರು ಉಪಸ್ಥಿತರಿದ್ದರು. ಸಮೀರ್​ ತೀರ್ಥಹಳ್ಳಿ ನಿರೂಪಿಸಿದರು.

ವಾಸ್ತವಿಕವಾಗಿ ನೀಟ್​ ಪರೀಕ್ಷೆಯು ಕೇಂದ್ರೀಕೃತವಾಗಿದ್ದು ಸರ್ವಾಧಿಕಾರಿ ವ್ಯವಸ್ಥೆಯ ಭಾಗವಾಗಿದೆ. ಅದನ್ನು ದಕ್ಷಿಣದ ರಾಜ್ಯಗಳು ವಿರೋಧಿಸುತ್ತ ಬಂದಿದೆ. ಉತ್ತರದ ರಾಜ್ಯಗಳ ಕೋಚಿಂಗ್​ ಮಾಫಿಯಾಗಳಿಗೆ ಮಣಿದು ನೀಟ್​ ಪರೀಕ್ಷೆ ನಡೆಸಲಾಗುತ್ತಿದೆ. ಕೋಚಿಂಗ್​ ಸೆಂಟರ್​ ಮಾಫಿಯಾಕ್ಕೂ, ಈ ಹಗರಣಕ್ಕೂ ನೇರ ಸಂಬಂಧವಿದೆ. ಈ ಪರೀಕ್ಷಾ ವ್ಯವಸ್ಥೆಯನ್ನು ವಿಕೇಂದ್ರೀಕೃತ ಮಾಡಬೇಕು.

— ಪ್ರೊ. ಫಣಿರಾಜ್​. ಚಿಂತಕ.