ಬೆಳ್ತಂಗಡಿ: ಸ್ಕ್ರಿಬಲ್ ಆರ್ಟ್ ತಂತ್ರದ ಮೂಲಕ ಚಾರ್ಲಿ ಚಾಪ್ಲಿನ್ ಅವರ ಕಪ್ಪು-ಬಿಳಿ ಸ್ಟೆನ್ಸಿಲ್ ಕಲಾಕೃತಿ ರಚಿಸುವ ಮೂಲಕ ನಡ ಗ್ರಾಮದ ಕೆಲ್ತಾಜೆ ಸಿಂಧೂರ ಶೆಟ್ಟಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮನ್ನಣೆಗೆ ಪಾತ್ರರಾಗಿದ್ದಾರೆ. ಈ ಸಾಧನೆಯನ್ನು ಅವರು 18 ವರ್ಷ 1 ತಿಂಗಳ ವಯಸ್ಸಿನಲ್ಲಿ ಸಾಧಿಸಿದ್ದು ಅಧಿಕೃತವಾಗಿ ದೃಢೀಕರಿಸಲಾಗಿದೆ.
ನಡ ಗ್ರಾಮದ ಕೆಲ್ತಾಜೆ ಸಾಯಿ ಪ್ರಸಾದ ಮನೆ ನಿವಾಸಿ ಕೃಷ್ಣ ಶೆಟ್ಟಿ ಮತ್ತು ಭಾರತಿ ಶೆಟ್ಟಿ ದಂಪತಿ ಪುತ್ರಿ. ನಡ ಸರ್ಕಾರಿ ಶಾಲೆಯಲ್ಲಿ ಪ್ರೌಢ ಶಿಕ್ಷಣ ಮತ್ತು ಉಜಿರೆ ಎಸ್‌ಡಿಎಂ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಪೂರೈಸಿದ್ದು, ಪ್ರಸ್ತುತ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿನಿಯಾಗಿದ್ದಾರೆ. ಸಿಂಧೂರ ಶೆಟ್ಟಿ ಈ ಹಿಂದೆ ಸರೋಜಿನಿ ನಾಯ್ಡು ಅವರ ಟೈಪೋಗ್ರಾಫಿಕ್ ಆರ್ಟ್ ಅನ್ನು ಅವರ ಕವನಗಳನ್ನು ಬಳಸಿ ಮಾಡಿ ಗಮನ ಸೆಳೆದಿದ್ದರು.