ಉಡುಪಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನಾಗೇಶ್​ ಬಿಲ್ಲವ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ರವಿ, ಖಜಾಂಚಿ ಗೋವಿಂದ್​ ಎಂ. ಪಟಗಾರ, ಜತೆ ಕಾರ್ಯದರ್ಶಿ ನಾಗರಾಜ್​, ಸಂಘಟನಾ ಕಾರ್ಯದರ್ಶಿ ಕೃಷ್ಣಪ್ಪ ಇದ್ದರು. 
ಉಡುಪಿ

ಜ.4ರಂದು ಜಿಲ್ಲಾ ಉಪವಲಯ ಅರಣ್ಯಾಧಿಕಾರಿಗಳ ಸಂಘದ ರಜತ ಮಹೋತ್ಸವ

* ಸಂಘದ ಜಿಲ್ಲಾಧ್ಯಕ್ಷ ನಾಗೇಶ್​ ಬಿಲ್ಲವ ಮಾಹಿತಿ

* ಡೈರಿ ಬಿಡುಗಡೆ, ವಿಶೇಷ ಸಾಧಕರಿಗೆ ಸನ್ಮಾನ

ಉಡುಪಿ: ಉಪವಲಯ ಅರಣ್ಯಾಧಿಕಾರಿಗಳ ಸಂಘ ಉಡುಪಿ ಜಿಲ್ಲೆ ಇದರ ರಜತ ಸಂಭ್ರಮದ ನಿಮಿತ್ತ ಕಿದಿಯೂರು ಹೋಟಲ್​ನ ಶೇಷ ಶಯನ ಹಾಲ್​ನಲ್ಲಿ ಜ.4ರಂದು ಬೆಳಗ್ಗೆ 9:30ಕ್ಕೆ ನೂತನ ವರ್ಷದ ಡೈರಿ ಬಿಡುಗಡೆ, ನಿವೃತ್ತ ಉಪವಲಯ ಅರಣ್ಯಾಧಿಕಾರಿಗಳಿಗೆ ಸನ್ಮಾನ, ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ, ರಕ್ತದಾನಿಗಳಿಗೆ ಸನ್ಮಾನ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ವಿಶೇಷ ಪ್ರತಿಭಾ ಪುರಸ್ಕಾರ ಸಮಾರಂಭ ಏರ್ಪಡಿಸಲಾಗಿದೆ ಎಂದು ಸಂಘಟನೆಯ ಅಧ್ಯಕ್ಷ ನಾಗೇಶ್​ ಬಿಲ್ಲವ ತಿಳಿಸಿದರು.
ಉಡುಪಿಯ ಪತ್ರಿಕಾ ಭವನದಲ್ಲಿ ಶುಕ್ರವಾರ (ಡಿ.26) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅದಾನಿ ಪವರ್​ ಲಿ.ನ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್​ ಆಳ್ವ ಕಾರ್ಯಕ್ರಮ ಉದ್ಘಾಟಿಸಲಿದ್ದು, ನಾಗೇಶ್​ ಬಿಲ್ಲವ ಅಧ್ಯಕ್ಷತೆ ವಹಿಸಲಿದ್ದಾರೆ. ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ, ಮುಲ್ಕಿ ಶಾಸಕ ಉಮಾನಾಥ್​ ಕೋಟ್ಯಾನ್​, ಮಾಜಿ ಸಚಿವ ವಿನಯಕುಮಾರ್​ ಸೊರಕೆ, ಮಾಜಿ ಶಾಸಕ ಕೆ.ರಘುಪತಿ ಭಟ್​, ಮಂಗಳೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಡಾ. ವಿ.ಕರಿಕಲನ್​, ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ.  ಇನ್ನಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಸಂಘದ ವತಿಯಿಂದ ಅರಣ್ಯ ಹುತಾತ್ಮ ದಿನದ ಅಂಗವಾಗಿ ಉಡುಪಿ ಜಿಲ್ಲೆಯ ರಕ್ತನಿಧಿ ಕೇಂದ್ರಕ್ಕೆ 155 ಯೂನಿಟ್​ ರಕ್ತದಾನ ಮಾಡುವ ಮೂಲಕ ಸಾಮಾಜಿಕ ಬದ್ಧತೆ ತೋರಿದ್ದೇವೆ. ಅದಲ್ಲದೆ ನಮ್ಮ ಸಂಘವು ಸಮಾಜಮುಖಿ ಕೆಲಸ ಮಾಡಿರುವ ಸಮಾಜಸೇವಕರನ್ನು, ಪ್ರತಿಭಾವಂತ ವಿದ್ಯಾರ್ಥಿಗಳು, ಸಾಹಿತಿಗಳನ್ನು ಗುರುತಿಸಿ ಗೌರವಾರ್ಪಣೆ ಮಾಡಿದ್ದೇವೆ. ಸಂಘದ ರಜತ ಮಹೋತ್ಸವದ ನಿಮಿತ್ತ ಅನಾರೋಗ್ಯ ಪೀಡಿತರಿಗೆ ಮತ್ತು ಅನಾಥಾಶ್ರಮದವರಿಗೆ ಧನ ಸಹಾಯ ನೀಡಲಾಗುತ್ತಿದೆ. ಅರಣ್ಯ ಇಲಾಖೆಯ ಕುಟುಂಬ ಸದಸ್ಯರು ಸಾರ್ವಜನಿಕ ಬಂಧುಗಳೊಂದಿಗೆ ಬೆರೆಯುವಂತಾಗಲು ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನೂ ಜ.4ರಂದು ಆಯೋಜಿಸಿದ್ದೇವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ರವಿ, ಖಜಾಂಚಿ ಗೋವಿಂದ್​ ಎಂ. ಪಟಗಾರ, ಜತೆ ಕಾರ್ಯದರ್ಶಿ ನಾಗರಾಜ್​, ಸಂಘಟನಾ ಕಾರ್ಯದರ್ಶಿ ಕೃಷ್ಣಪ್ಪ ಇದ್ದರು.