ಮಲ್ಪೆಯಲ್ಲಿ ನಡೆದ ಪರ್ಸೀನ್ ಮೀನುಗಾರರ ಸಂಘದ ರಜತ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಕೋಟ ಶ್ರೀನಿವಾಸ ಪೂಜಾರಿ, ಯಶ್ಪಾಲ್ ಸುವರ್ಣ, ರಮೇಶ್ ಕಾಂಚನ್, ಜಯ ಸಿ. ಕೋಟ್ಯಾನ್, ನಾಗರಾಜ್ ಸುವರ್ಣ, ಆನಂದ್ ಸುವರ್ಣ, ರತ್ನಾಕರ್ ಸಾಲ್ಯಾನ್, ಕೃಷ್ಣ ಎಸ್. ಸುವರ್ಣ ಇತರರಿದ್ದರು.
* ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅನಿಸಿಕೆ
* ಪರ್ಸೀನ್ ಮೀನುಗಾರರ ಸಂಘದ ರಜತ ಮಹೋತ್ಸವ ಸಮಾರೋಪ
ಉಡುಪಿ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಮತ್ಸ್ಯ ಸಂಪದ ಯೋಜನೆ ಜಾರಿ ಮಾಡಿದ ಬಳಿಕ ಮೀನುಗಾರಿಕಾ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ, ಅಭಿವೃದ್ಧಿ ಕಂಡಿದೆ. ಇತ್ತೀಚೆಗೆ ಮೀನುಗಾರರೂ ಸಹ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿದ್ದಾರೆ. ಈ ಮೊದಲು ರಾಜ್ಯದಲ್ಲಿ ವರ್ಷಕ್ಕೆ 4 ಲಕ್ಷ ಟನ್ ಮೀನು ಹಿಡಿಯುತ್ತಿದ್ದು, ಇದೀಗ ಸುಮಾರು 9 ಲಕ್ಷ ಟನ್ಗೆ ಏರಿಕೆ ಕಂಡಿದೆ. ಆದರೆ, ಈ ಬೆಳವಣಿಗೆ ಮರಿಮೀನುಗಳು ನಾಶವಾಗುತ್ತಿದೆ ಎಂಬ ಅಪಾಯವೂ ಎದುರಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅನಿಸಿಕೆ ವ್ಯಕ್ತಪಡಿಸಿದರು.
ಮಲ್ಪೆ ಬೀಚ್ನಲ್ಲಿ 3 ದಿನಗಳ ಕಾಲ ನಡೆದ ಪರ್ಸೀನ್ ಮೀನುಗಾರರ ಸಂಘದ ರಜತ ಮಹೋತ್ಸವದ ನಿಮಿತ್ತ ಭಾನುವಾರ (ಏ.26) ಸಂಜೆ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಮಾತನಾಡಿ, ಇಲ್ಲಿನ ಮೀನುಗಾರರ ಯಾವುದೇ ಬೇಡಿಕೆ ಇದ್ದಲ್ಲಿ ಅದನ್ನು ಈಡೇರಿಸಲು ಸಿಎಂ ಬಳಿ ನಿಯೋಗ ಕರೆದುಕೊಂಡು ಹೋಗುವುದಾಗಿ ಭರವಸೆ ನೀಡಿದರು.
ವಿವಿಧ ಸಾಧಕರಿಗೆ ಸನ್ಮಾನ
ರಜತ ಸಂಭ್ರಮದ ನಿಮಿತ್ತ ಆಯೋಜಿಸಿದ್ದ ಕ್ರೀಡೋತ್ಸವದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕೊಳಲಗಿರಿಯ ಸ್ಪಂದನಾ ಮತ್ತು ಮಲ್ಪೆ ಪಡುಕರೆಯ ಕಾರುಣ್ಯ ವಿಕಲಚೇತನರ ಶಾಲೆಗೆ ಸಮವಸ್ತ್ರ ನೀಡಲಾಯಿತು. ಮುಳುಗುತಜ್ಞರಾದ ಈಶ್ವರ್ ಮಲ್ಪೆ, ರವಿ ಅಂಚನ್, ರಾಣಿ ಅಬ್ಬಕ್ಕ ಪ್ರಶಸ್ತಿ ಪುರಸತೆ ಯಶೋದಾ ಕೇಶವ, ಮೀನುಗಾರ ಮುಖಂಡ ವಾಸು ಕಾಂಚನ್, ಗೋಪಾಲ್ ಮೊಗೇರ ಭಟ್ಕಳ ಅವರನ್ನು ಸನ್ಮಾನಿಸಲಾಯಿತು. ಪರ್ಸೀನ್ ಮೀನುಗಾರಿಕೆಯ ನಿವೃತ್ತ ತಾಂಡೇಲರು, ಸಂದ ಸ್ಥಾಪಕರು ಹಾಗೂ ಪ್ರಮುಖ ಗಣ್ಯರನ್ನು ಗೌರವಿಸಲಾಯಿತು.
ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಪರ್ಸೀನ್ ಮೀನುಗಾರರ ಸಂಘದ ಅಧ್ಯಕ್ಷ ನಾಗರಾಜ್ ಸುವರ್ಣ, ಪ್ರಮುಖರಾದ ಆನಂದ್ ಸುವರ್ಣ, ರತ್ನಾಕರ್ ಸಾಲ್ಯಾನ್ ರಮೇಶ್ ಕಾಂಚನ್, ಎಂ.ಕೆ. ಬಾಲರಾಜ್, ಕರುಣಾಕರ್ ಸಾಲಿಯಾನ್, ಸುಭಾಶ್ ಎಸ್. ಮೆಂಡನ್, ಗೋಪಾಲ್ ಸಿ. ಬಂಗೇರ, ರಮೇಶ್ ಮೆಂಡನ್, ಶಿವಪ್ಪ ಟಿ. ಕಾಂಚನ್, ವಿನಯ್ ಕರ್ಕೇರ, ಕೃಷ್ಣ ಜಿ. ಕೋಟ್ಯಾನ್, ಹರೀಶ್ಚಂದ್ರ ಕಾಂಚನ್, ದಯಾಕರ್ ವಿ. ಸುವರ್ಣ, ಕೃಷ್ಣಕುಮಾರ್ ಬಂಗೇರ, ನಾಗರಾಜ್ ಕುಂದರ್, ರವಿರಾಜ್ ಸುವರ್ಣ, ಆನಂದ್ ಸುವರ್ಣ, ಜಯಕರ್ ವಿ. ಸುವರ್ಣ ಉಪಸ್ಥಿತರಿದ್ದರು.
ರಜತ ಸಂಭ್ರಮ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೃಷ್ಣ ಎಸ್. ಸುವರ್ಣ ಸ್ವಾಗತಿಸಿದರು. ಚಂದ್ರೇಶ್ ಪಿತ್ರೋಡಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕರ್ನಾಟಕದ ಆಯ್ದ ತಂಡಗಳಿಂದ ಗುಂಪು ನೃತ್ಯ ಸ್ಪರ್ಧೆ 'ಕರಾವಳಿ ನೃತ್ಯೋತ್ಸವ-2026 ನಡೆಯಿತು.
ದೇಶದ ಕರಾವಳಿಯ ಮೀನುಗಾರಿಕೆಗೆ ನಾವು ಶಕ್ತಿ ಕೊಟ್ಟರೆ ಅವರ ಶ್ರಮದಿಂದ ಆರ್ಥಿಕ ಬಲ, ಆಹಾರ ಭದ್ರತೆಯೂ ಲಭಿಸುತ್ತದೆ. ಕಡಲಲ್ಲಿ ಮೀನುಗಾರಿಕೆ ಮಾಡುವುದು ಅವರ ವೃತ್ತಿ ಜೀವನವಷ್ಟೇ ಅಲ್ಲ. ಸೈನ್ಯದ ರೀತಿಯಲ್ಲಿ ದೇಶದ ಗಡಿ ಕಾಯುವ ರಕ್ಷಣಾ ಕೆಲಸವೂ ಅವರಿಂದಾಗುತ್ತಿದೆ. ಹೀಗಾಗಿ ನಾವೆಲ್ಲ ಒಟ್ಟಾಗಿ ಮೀನುಗಾರರಿಗೆ ಬೇಕಾದ ಯೋಜನೆ ರೂಪಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಇಂಗಿತ ವ್ಯಕ್ತಪಡಿಸಿದ್ದಾರೆ.