ಕಡಿಞಿಮೂಲ-ಮಟ್ಟುಮಲ್ ಸೇತುವೆ ಉದ್ಘಾಟನಾ ಶಿಲಾಫಲಕವನ್ನು ಶಾಸಕ ಎಂ.ರಾಜಗೋಪಾಲನ್ ಅನಾವರಣಗೊಳಿಸಿದರು. ರಾಜಮೋಹನ್ ಉಣ್ಣಿತಾನ್, ಪಿ.ಪಿ.ಮೊಹಮದ್ ರಫಿ ಮೊದಲಾದವರಿದ್ದರು.
ಕಾಸರಗೋಡು: ಕೇರಳದಲ್ಲಿ ರಸ್ತೆ ಮತ್ತು ಸೇತುವೆ ವಲಯದಲ್ಲಿ ಮಹತ್ವದ ಅಭಿವೃದ್ಧಿ ಸಾಧಿಸಲಾಗಿದೆ. ಮಲೆನಾಡು ಹೆದ್ದಾರಿ, ಕರಾವಳಿ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿ ಜತೆಗೆ, ಕೇರಳದಲ್ಲಿ ಸುರಂಗ ಮಾರ್ಗಗಳನ್ನೂ ಪರಿಚಯಿಸಲಾಗುತ್ತಿದೆ. ಇದರಿಂದ ಜನರಿಗೆ ಸಾಕಷ್ಟು ಸಮಯ ಮತ್ತು ಇಂಧನ ಉಳಿತಾಯವಾಗಲಿದೆ ಎಂದು ಲೋಕೋಪಯೋಗಿ ಮತ್ತು ಪ್ರವಾಸೋದ್ಯಮ ಸಚಿವ ಪಿ.ಎ.ಮುಹಮ್ಮದ್ ರಿಯಾಸ್ ಹೇಳಿದರು.
ಕಡಿಞಿಮೂಲೆ-ಮಟ್ಟುಮಲ್‌ನಲ್ಲಿ ನೀಲೇಶ್ವರ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆಯನ್ನು ಆನ್‌ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದರು.
ಶಾಸಕ ಎಂ.ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ರಾಜಮೋಹನ್ ಉಣ್ಣಿತಾನ್ ಮುಖ್ಯ ಅತಿಥಿಯಾಗಿದ್ದರು. ನೀಲೇಶ್ವರ ನಗರಸಭಾ ಅಧ್ಯಕ್ಷ ಪಿ.ಪಿ.ಮೊಹಮದ್ ರಫಿ, ಉಪಾಧ್ಯಕ್ಷೆ ಪಿ.ಎಂ.ಸಂಧ್ಯಾ, ಲೋಕೋಪಯೋಗಿ ಸ್ಥಾಯಿ ಸಮಿತಿ ಅಧ್ಯಕ್ಷೆ ಇ.ಚಂದ್ರಮತಿ, ವಾರ್ಡ್ ಕೌನ್ಸಿಲರ್‌ಗಳಾದ ವಿ.ವಿ.ಸೀಮಾ, ಸೌದಾ ಅಂಚಿಲತ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಸ್ಥಳೀಯರು ಭಾಗವಹಿಸಿದ್ದರು. ಕಾಸರಗೋಡು ಲೋಕೋಪಯೋಗಿ ಸೇತುವೆಗಳ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಕೆ.ರಾಜೀವನ್ ಯೋಜನಾ ವರದಿ ಮಂಡಿಸಿದರು.
ಕಣ್ಣೂರು ಲೋಕೋಪಯೋಗಿ ಸೇತುವೆಗಳ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಎಂ.ಸಜಿತ್ ಸ್ವಾಗತಿಸಿದರು. ಕಾಂಞಂಗಾಡ್ ಸೇತುವೆಗಳ ವಿಭಾಗದ ಸಹಾಯಕ ಇಂಜಿನಿಯರ್ ಕೆ.ಶಬಿನ್‌ಚಂದ್ ವಂದಿಸಿದರು.