ಬಾಲಕನ ಸಾವಿನ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸಿ ಜನರಲ್ ಆಸ್ಪತ್ರೆಗೆ ಮುತ್ತಿಗೆ ಹಾಕಿದ ಡಿವೈಎಫ್‌ಐ ಕಾರ್ಯಕರ್ತರನ್ನು ಲಾಠಿಪ್ರಹಾರ ನಡೆಸಿ ಪೊಲೀಸರು ಚದುರಿಸಿದರು.
ಕಾಸರಗೋಡು: ಉದರ ಸಂಬಂಧಿ ಕಾಯಿಲೆಗೆ ಸಂಬಂಧಿಸಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ನಾಲ್ಕನೇ ತರಗತಿ ವಿದ್ಯಾರ್ಥಿ ಮೃತಪಟ್ಟ ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಡಿವೈಎಫ್‌ಐ ಕಾಸರಗೋಡು ಬ್ಲಾಕ್ ಸಮಿತಿಯಿಂದ ಜನರಲ್ ಆಸ್ಪತ್ರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.
ಪ್ರತಿಭಟನಾಕಾರರನ್ನು ಪೊಲೀಸರು ತಡೆಯುತ್ತಿದ್ದಂತೆ ಆಸ್ಪತ್ರೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದು, ಲಾಠಿಪ್ರಹಾರ ನಡೆಸಿ ಚದುರಿಸಿದ್ದಾರೆ. ಬಾಲಕನ ಸಾವಿಗೆ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷೃ ಕಾರಣವೆಂದು ಡಿವೈಎಫ್‌ಐ ಪ್ರತಿಭಟನೆ ಹಮ್ಮಿಕೊಂಡಿತ್ತು.
ಡಿವೈಎಫ್‌ಐ ರಾಜ್ಯ ಸಹ ಕಾರ್ಯದರ್ಶಿ ರಜೀಶ್ ವೆಳ್ಳಾಟ್ ಪ್ರತಿಭಟನೆ ಉದ್ಘಾಟಿಸಿದರು. ಮುಖಂಡರಾದ ಎಂ.ವಿ.ರತೀಶ್, ಸುಭಾಷ್ ಪಾಡಿ, ಸಾದಿಕ್ ಚೆರುಗೋಳಿ, ಎನ್.ಗಿರೀಶ್ ನೇತೃತ್ವ ನೀಡಿದ್ದರು. ಉದರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಬೇಡಡ್ಕ ನಿವಾಸಿ ಅಶ್ರಫ್-ಬುಷ್ರಾ ದಂಪತಿ ಪುತ್ರ ಒಂಬತ್ತರ ಹರೆಯದ ಬಾಲಕ ಮಹಮ್ಮದ್ ಇಯಾಸ್ ಶಸ್ತ್ರಚಿಕಿತ್ಸೆ ನಂತರ ಮೃತಪಟ್ಟಿದ್ದನು.