ಉಡುಪಿ-ಚಿಕ್ಕಮಗಳೂರು ಕೋಟ ಶ್ರೀನಿವಾಸ ಪೂಜಾರಿ. 
ಉಡುಪಿ

ಸಮಾಜ-ಶೈಕ್ಷಣಿಕ ಕ್ಷೇತ್ರದಲ್ಲಿ ಹಿಜಾಬ್​ ಗೊಂದಲ

* ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯ

* ಸಿದ್ದರಾಮಯ್ಯ ಸರ್ಕಾರದಿಂದ ಹೈಕೋರ್ಟ್​ ಆದೇಶ ಉಲ್ಲಂಘನೆ

ಉಡುಪಿ: ಶಾಲಾ-ಕಾಲೇಜುಗಳಲ್ಲಿ ಯಾವುದೇ ಧಾರ್ಮಿಕ ಧಿರಿಸು ಹಾಕಿಕೊಳ್ಳಲು ಅವಕಾಶ ಇಲ್ಲವೆಂದು ಈಗಾಗಲೇ ಹೈಕೋರ್ಟ್​ ಆದೇಶ ನೀಡಿದ್ದು, ಸಮವಸ್ತ್ರಕ್ಕೆ ಮಾತ್ರ ಅವಕಾಶ ಇದೆ ಎಂದು ಹೇಳಿದೆ. ಆದರೂ ರಾಜ್ಯ ಕಾಂಗ್ರೆಸ್​ ಮತ್ತೆ ಶಾಲಾ-ಕಾಲೇಜುಗಳಲ್ಲಿ ಹಿಜಾಬ್​ ಧರಿಸಲು ಅವಕಾಶ ನೀಡಿ ಆದೇಶ ನೀಡಿದೆ. ಇದು ಸಮಾಜ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಗೊಂದಲ ಉಂಟಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.
ಉಡುಪಿಯಲ್ಲಿ ಗುರುವಾರ (ಮೇ 14) ಮಾಧ್ಯಮದವರೊಂದಿಗೆ ಮಾತನಾಡಿ, ಹಿಜಾಬ್​ ವಿಚಾರವಾಗಿ ಕೈಕೋರ್ಟ್​ ಆದೇಶ ವಿರೋಧಿಸಿ ಸುಪ್ರೀಂ ಕೋರ್ಟ್​ಗೆ ಹೋಗಿದ್ದಾರೆ. ಆದರೆ, ಹೈಕೋರ್ಟ್​ ಆದೇಶಕ್ಕೆ ಸುಪ್ರೀಂ ಕೋರ್ಟ್​ ತಡೆಯಾಜ್ಞೆ ನೀಡಿಲ್ಲ. ಹೀಗಾಗಿ ಹೈಕೋರ್ಟ್​ ನೀಡಿದ್ದ ಆದೇಶವೇ ಅನುಷ್ಠಾನದಲ್ಲಿದೆ. ಆದರೂ ಸಿದ್ದರಾಮಯ್ಯ ಸರ್ಕಾರ ಹೊಸ ಆದೇಶ ಮಾಡಿದೆ ಎಂದರು.

ಸಚಿವರು ಉತ್ತರಿಸಲಿ

ಈ ವಿಚಾರವಾಗಿ ಶಿಕ್ಷಣ ಇಲಾಖೆ ಸುತ್ತೋಲೆಯನ್ನೂ ಹೊರಡಿಸಿದೆ. ನ್ಯಾಯಾಲಯದ ಆದೇಶವನ್ನೂ ಮೀರಿ ರಾಜ್ಯ ಸರ್ಕಾರ ವರ್ತಿಸಿದೆ. ನ್ಯಾಯಾಲಯಕ್ಕೆ ಮನವರಿಕೆ ಮಾಡುವುದನ್ನು ಬಿಟ್ಟು, ಮತ್ತೆ ಹಿಜಾಬ್​ಗೆ ಅವಕಾಶ ಮಾಡಿಕೊಟ್ಟಿರುವ ಮಾನದಂಡ ಏನೆಂದು ಶಿಕ್ಷಣ ಸಚಿವರೇ ಉತ್ತರಿಸಬೇಕು. ಮತ್ತೆ ಹಿಜಾಬ್​-ಕೇಸರಿ ಶಾಲು ವಿವಾದ ಉಂಟಾದರೆ ಸರ್ಕಾರವೇ ಹೊಣೆ ಎಂದರು.

ಅಲ್ಪ ಸಂಖ್ಯಾತರ ಓಲೈಕೆ

ದಾವಣಗೆರೆ ಉಪಚುನಾವಣೆ ಫಲಿತಾಂಶದ ಬಳಿಕ ಅಲ್ಪಸಂಖ್ಯಾತರ ಓಲೈಕೆಗೆ ಕಾಂಗ್ರೆಸ್​ ಸರ್ಕಾರ ಮುಂದಾಗಿದೆ. ಕಾನೂನನ್ನೂ ಮೀರಿ ಸುತ್ತೋಲೆ ಹೊರಡಿಸುವುದು ಬೇಜವಾಬ್ದಾರಿ ನಡವಳಿಕೆ. ಕಾನೂನು ಪಂಡಿತರಾಗಿರುವ ಸಿದ್ದರಾಮಯ್ಯ ಯಾಕೆ ಇದನ್ನು ಒಪ್ಪಿದರೋ ಗೊತ್ತಿಲ್ಲ. ಅವರ ಸರ್ಕಾರವೇ ಜನಿವಾರ ಕಟ್​ ಮಾಡಿದೆ. ಈಗ ಓಲೈಕೆಗಾಗಿ ಜನಿವಾರ ಉಲ್ಲೇಖ ಮಾಡಿದ್ದಾರೆ. ರಾಜ್ಯ ಸರ್ಕಾರದ ನಿಲುವು ಖಂಡನೀಯ ಎಂದರು.

ಸನಾತನ ಧರ್ಮ ಉದಯನಿಧಿಯದ್ದಲ್ಲ 

ಸನಾತನ ಧರ್ಮ ನಾಶ ಮಾಡಬೇಕು ಎಂಬ ಉದಯನಿಧಿ ಸ್ಟಾಲಿನ್​ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಸದ ಕೋಟ, ಉದಯನಿಧಿ ಕೇಳಿಕೊಂಡು ಸನಾತನ ಧರ್ಮ ಇಲ್ಲ. ಅವರ ತಂದೆ, ಅಜ್ಜನಂಥವರು ಸನಾತನ ಧರ್ಮ ನಿರ್ನಾಮ ಮಾಡುತ್ತೇವೆ ಅಂದರೂ ಏನು ಆಗಿಲ್ಲ. ಅವರೇ ನಿರ್ನಾಮ ಆಗಿದ್ದು ಬಿಟ್ಟರೆ ಧರ್ಮ ನಿರ್ನಾಮ ಆಗಿಲ್ಲ. ಉದಯನಿಧಿ ಮಾತಿನಿಂದ ಸನಾತನ ನಿರ್ನಾಮ ಆಗದು. ಆ ಧರ್ಮ ನಿರ್ನಾಮ ಮಾಡಲು ಹೋದವರು ಯಾರೂ ಉಳಿದಿಲ್ಲ. ಅವರಷ್ಟಕ್ಕೆ ಅವರು ಮಾತನಾಡಲಿ. ಅದಕ್ಕೆ ಮಹತ್ವ ಬೇಡ ಎಂದರು.

ನೀಟ್​ ಗೊಂದಲ ಸಿಬಿಐ ತನಿಖೆಗೆ 

ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರ ಗೊಂದಲ&ಲೋಪ ಆಗಿರುವುದು ಸತ್ಯ. ಆ ಬಗ್ಗೆ ನೋವಿದೆ. ಇಂಥ ಪ್ರಕರಣಗಳಾದಾಗ ತಪ್ಪಿತಸ್ಥರ ಪರವಾಗಿ ನಿಂತ ಉದಾಹರಣೆಗಳಿವೆ. ಆದರೆ, ಕೇಂದ್ರ ಸರ್ಕಾರ ಕಟ್ಟುನಿಟಿನ ಕ್ರಮ ಕೈಗೊಂಡಿದೆ. ಸೋರಿಕೆ ವಿಚಾರ ಬಹಿರಂಗವಾದ ತಕ್ಷಣ ಸಿಬಿಐ ತನಿಖೆ ಮಾಡಿಸಿದ್ದು ಆರೋಪಿಗಳ ಬಂಧನವಾಗಿದೆ. ಯಾವುದೇ ಶುಲ್ಕ ಇಲ್ಲದೆ ಮರು ಪರೀಕ್ಷೆ ನಡೆಯಲಿದೆ ಎಂದು ಸಂಸದ ಕೋಟ ತಿಳಿಸಿದರು. ಈ ವಿಷಯದಲ್ಲಿ ಕೇಂದ್ರ ಸರ್ಕಾರವನ್ನು ದೂರಲು ಸಾಧ್ಯವಿಲ್ಲ. ಲೋಕ ಸೇವಾ ಆಯೋಗದಲ್ಲಿ ಕರ್ನಾಟಕ ಸರ್ಕಾರ ದೋಷಿಗಳ ಪರ ನಿಂತಿದೆ. ಅವರ ಬಂಧನವೂ ಆಗಲಿದೆ ಎಂದರು.

ಮೋದಿ ಹೇಳಿಕೆಯಲ್ಲಿದೆ ದೇಶದ ಹಿತಾಸಕ್ತಿ

ದೇಶವಾಸಿಗರೆಲ್ಲರಿಗೆ ಮಿತವ್ಯಯಕ್ಕೆ ಕರೆಕೊಟ್ಟ ಪ್ರಧಾನಿ ನರೇಂದ್ರ ಮೋದಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಂಸದ ಪೂಜಾರಿ, ಮಾಜಿ ಪ್ರಧಾನಿಗಳಾದ ನೆಹರು, ಶಾಸ್ತ್ರಿ, ಇಂದಿರಾ ಕಾಲದಿಂದಲೂ ದೇಶಕ್ಕಾಗಿ ಅನೇಕ ನಿರ್ಧಾರ ಕೈಗೊಳ್ಳಲಾಗಿದೆ. ಒಂದು ಹೊತ್ತಿನ ಊಟ ಬಿಡುವಂತೆಯೂ, ಚಿನ್ನ ಖರೀದಿ ಮಾಡದಂತೆಯೂ ಕರೆ ನೀಡಿದ್ದಾರೆ. ಮಧ್ಯಪ್ರಾಚ್ಯ ರಾಷ್ಟ್ರಗಳ ಯುದ್ಧದಿಂದಾಗಿ ಭಾರತಕ್ಕೂ ಬಿಸಿ ತಟ್ಟಿದೆ. ವಿದೇಶದಿಂದ ಚಿನ್ನ ಆಮದು ಮಾಡಬೇಕಿದ್ದರಿಂದ ಪ್ರಧಾನಿ ಮೋದಿ ಅವರು ಚಿನ್ನ ಖರೀದಿಸಬೇಡಿ ಎಂದಿದ್ದಾರೆ. ಮದುವೆ ಆಗುವವರು ಚಿನ್ನ ಖರೀದಿಸಬೇಡಿ ಎಂದಿಲ್ಲ. ಅವರ ಹೇಳಿಕೆಯಿಂದ ಚಿನ್ನದ ಅಂಗಡಿ ಮಾಲೀಕರಿಗೆ, ಕೆಲಸಗಾರರಿಗೆ ತೊಂದರೆ ಆಗದು. ದೇಶದ ಹಿತದೃಷ್ಟಿಯಿಂದ ಕೈಗೊಂಡ ನಿಸ್ವಾರ್ಥ ನಿರ್ಧಾರವದು. ವಿಪಕ್ಷಗಳು ಸರ್ಕಾರದ ಆಶಯ ಅರ್ಥ ಮಾಡಿಕೊಳ್ಳಬೇಕು. ಮೋದಿ ತಮ್ಮ ಬೆಂಗಾವಲು ಪಡೆಯಲ್ಲಿ ಶೇ.50 ಕಡಿತ ಮಾಡಿದ್ದಾರೆ. ರಾಜ್ಯದ ವಿಪಕ್ಷ ನಾಯಕರು ಅದನ್ನು ಅನುಸರಿಸಿದ್ದಾರೆ. ಕಾಂಗ್ರೆಸ್​ನವರೂ ಸಹ ದೇಶದ ಹಿತಾಸಕ್ತಿಗಾಗಿ ಪ್ರಧಾನಿ ಕರೆಗೆ ಸ್ಪಂದಿಸಬೇಕು ಎಂದರು.