ಉಡುಪಿಯ ಗೀತಾ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಂಜುನಾಥ್​ ಕುಡವ ಮಾತನಾಡಿದರು. ಕೆ. ರಮಣ್​ ಆಚಾರ್ಯ ಇದ್ದರು. 
ಉಡುಪಿ

ಏ.14ರಂದು ಶ್ರೀರಾಮ ಟಂಕ ಜಪ ಅಭಿಯಾನ

* ಮಂಜುನಾಥ್​ ಕುಡವ ಮಂಗಳೂರು ಮಾಹಿತಿ

* ಗೀತಾ ಮಂದಿರದಲ್ಲಿ ಸುಗುಣೇಂದ್ರ ಶ್ರೀ ಉದ್ಘಾಟನೆ

ಉಡುಪಿ: ಶ್ರೀಕೃಷ್ಣ ಮಠದ ಸಮೀಪದಲ್ಲಿರುವ ಗೀತಾ ಮಂದಿರದಲ್ಲಿ ಏ.14ರಂದು 'ಶ್ರೀರಾಮ ಟಂಕ ಜಪ ಅಭಿಯಾನ' ಆಯೋಜಿಸಲಾಗಿದ್ದು, ಅಂದು ಬೆಳಗ್ಗೆ 7 ಗಂಟೆಗೆ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ. ಭಕ್ತ ಜನರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಅಭಿಯಾನದ ಪ್ರವರ್ತಕ ಮಂಜುನಾಥ್​ ಕುಡವ ಮಂಗಳೂರು ತಿಳಿಸಿದರು.
ಉಡುಪಿಯ ಗೀತಾ ಮಂದಿರದಲ್ಲಿ ಶುಕ್ರವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಮ ಟಂಕ ಜಪದಿಂದ ಉಗ್ರ ನರಸಿಂಹ, ಆಂಜನೇಯ, ಧನ್ವಂತರಿ ಹಾಗೂ ಸರಸ್ವತಿಯ ಅನುಗ್ರಹವೂ ಲಭಿಸುತ್ತದೆ ಎಂದರು.

ಧನಾತ್ಮಕ ಶಕ್ತಿ ವೃದ್ಧಿ

ಶ್ರೀರಾಮ ಟಂಕ ಎನ್ನುವುದು ಪುರಾಣ ಕಾಲದ ನಾಣ್ಯ. ಈಗಿನ ಕಾಲದಲ್ಲಿ ನೋಟುಗಳ ಚಲಾವಣೆ ಇರುವಂತೆ ಅಂದಿನ ಯುಗಗಳಲ್ಲಿ ಟಂಕಗಳೇ ನಾಣ್ಯಗಳ ರೂಪದಲ್ಲಿ ಚಲಾವಣೆ ಇದ್ದವು. ಪುರಾಣ ಕಾಲದ ಅಂತಹ ಶ್ರೀರಾಮ ಟಂಕಗಳಿಗೆ ಧಾರ್ಮಿಕ ಸ್ಪರ್ಶವೂ ಇದೆ. ಅದನ್ನು ನಾವು ಸ್ಪರ್ಶಿಸಿ 'ಶ್ರೀರಾಮ ಜಯ ರಾಮ ಜಯ ಜಯ ರಾಮ' ಎಂದು ಜಪಿಸಿದರೆ ದೇಹದಲ್ಲಿರುವ ನಕಾರಾತ್ಮಕ ಗುಣ ಕಳೆದು, ಧನಾತ್ಮಕ ಶಕ್ತಿ ಉಂಟಾಗುತ್ತದೆ. ಇದರಿಂದ ದೈಹಿಕ ಸಮಸ್ಯೆ, ಅನೇಕ ರೀತಿಯ ಅನಾರೋಗ್ಯ ನಿವಾರಣೆಯೂ ಸಾಧ್ಯವಿದೆ ಎಂದರು.

16 ನಿಮಿಷದ ಜಪ

ಶ್ರೀರಾಮ ಟಂಕವನ್ನು ಒಂದು ಕೈಯಲ್ಲಿ ಇಟ್ಟುಕೊಂಡು, ಇನ್ನೊಂದು ಕೈ ಮುಚ್ಚಿ 16 ನಿಮಿಷಗಳ ಕಾಲ ರಾಮ ತಾರಕ ಮಂತ್ರ ಜಪಿಸುವುದಾಗಿದೆ. ಇದರಿಂದ ಸಕಾರಾತ್ಮಕ ಭಾವ ಮೂಡುತ್ತದೆ. ದೇವರನ್ನು ಧ್ಯಾನಿಸುವ, ಆರಾಧಿಸುವ ಹೊಸ ಉಪಕ್ರಮವಾಗಿದೆ. ಏ.14ರ ನಂತರ ಪ್ರತಿ ಭಾನುವಾರವೂ ಬೆಳಗ್ಗೆ 10 ಗಂಟೆಗೆ ಶ್ರೀರಾಮ ಟಂಕ ಜಪ ಅಭಿಯಾನ ಇರಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗೀತಾ ಮಂದಿರದ ಪ್ರಭಾರಿ ಕೆ. ರಮಣ್​ ಆಚಾರ್ಯ ಇದ್ದರು.