ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜನಾಥ ಪೂಜಾರಿ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದರು.  
ಉಡುಪಿ

ಹಡಪದ ಅಪ್ಪಣ್ಣ ಚಿಂತನೆಗಳು ಮನುಕುಲದ ಉದ್ಧಾರಕ್ಕೆ ದಾರಿದೀಪ

ಗೋಪಾಲಕೃಷ್ಣ ಪಾದೂರ್
ಉಡುಪಿ: ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ಅನುಯಾಯಿಯಾಗಿದ್ದ ಶಿವಶರಣ ಹಡಪದ ಅಪ್ಪಣ್ಣ ಸಮಾಜವು ಎದುರಿಸುತ್ತಿದ್ದ ಮೌಢ್ಯತೆಗಳನ್ನು ಧಿಕ್ಕರಿಸಿ ವಚನಗಳ ಮೂಲಕ ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ ಮಹಾನ್​ ಶರಣ ಅವರ ವಚನಗಳು ಹಾಗೂ ಚಿಂತನೆಗಳು ಇಂದಿಗೂ ಮನುಕುಲದ ಉದ್ಧಾರಕ್ಕೆ ದಾರಿದೀಪವಾಗಿದೆ ಎಂದು ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜನಾಥ ಪೂಜಾರಿ ಹೇಳಿದರು.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿಯ ಕೋರ್ಟ್​ ಹಾಲ್​ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾಲಕಾಲಕ್ಕೆ ಹಲವಾರು ನಾಯಕರು, ಸಂತರು, ದಾಸರು, ದಾರ್ಶನಿಕರು ಜನ್ಮತಾಳಿ ಸಮಾಜದ ಸುಧಾರಣೆಗಾಗಿ ಹೆಜ್ಜೆ ಇಟ್ಟಿದ್ದಾರೆ. 12ನೇ ಶತಮಾನದಲ್ಲಿ ಬಸವಣ್ಣನವರು ಅಂದಿನ ಕಾಲಘಟ್ಟದಲ್ಲಿದ್ದ ಮೇಲು-ಕೀಳು, ಅನಾಚಾರ, ಕಂದಾಚಾರ ಸೇರಿದಂತೆ ಮತ್ತಿತರ ಸಾಮಾಜಿಕ ಶೋಷಣೆಯ ವಿರುದ್ಧ ಹೋರಾಡಲು ಜನರಿಗೆ ವಚನಗಳ ಮೂಲಕ ಮನಮುಟ್ಟುವ ಹಾಗೆ ತಿಳಿಹೇಳುತ್ತಿದ್ದರು. ಅನುಭವ ಮಂಟಪದಲ್ಲಿ ಬಸವಣ್ಣನವರಿಗೆ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಹಡಪದ ಅಪ್ಪಣ್ಣನವರು ಜಾತಿ ಪದ್ಧತಿ, ಮೂಢನಂಬಿಕೆ ಮತ್ತು ಅಸಮಾನತೆಯ ವಿರುದ್ಧ ತಮ್ಮ ವಚನಗಳ ಮೂಲಕ ಸಾಮಾಜಿಕ ಸುಧಾರಣೆಗೆ ಧ್ವನಿ ಎತ್ತಿದ್ದರು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿದರು. ಶಿಕ್ಷಕರಾದ ಜಿ.ಪಿ ಪ್ರಭಾಕರ ತುಮರಿ ಉಪನ್ಯಾಸ ನೀಡಿ, ಹಡಪದ ಅಪ್ಪಣ್ಣರು ಸುಮಾರು 240 ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದು, ಅವುಗಳಲ್ಲಿ ಕಾಯಕ, ಆತ್ಮಶುದ್ಧಿ, ಶಿವಭಕ್ತಿ, ಸತ್ಯ, ನಿಷ್ಠೆ, ಪ್ರಾಮಾಣಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಅತ್ಯಂತ ಸರಳ ಹಾಗೂ ಪರಿಣಾಮಕಾರಿಯಾಗಿ ಅಭಿವ್ಯಕ್ತಪಡಿಸಿದ್ದಾರೆ ಎಂದರು. ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಇಲಾಖೆಯ ಸಿಬ್ಬಂದಿ ವರ್ಷಾ ಬಿ. ಕೋಟ್ಯಾನ್​ ನಿರೂಪಿಸಿ ವಂದಿಸಿದರು.