ಶಿವಪಾಡಿ ವೈಭವೋತ್ಸವದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.  
ಉಡುಪಿ

ರುದ್ರ ದೇವರ ಅನುಗ್ರಹದಿಂದ ಜೀವನದಲ್ಲಿ ಶ್ರೇಯಸ್ಸು: ಪೇಜಾವರ ಶ್ರೀ

ಉಡುಪಿ: ಒಳಿತು ಕೆಡುಕಿಗೆ ಮನಸ್ಸೇ ಮೂಲ ಕಾರಣವಾಗಿದೆ. ಮನೋ ನಿಯಾಮಕ ರುದ್ರ ದೇವರ ಪ್ರೇರಣೆಯಿಂದ ಮನಸ್ಸು ಕಟ್ಟದಾರಿಗೆ ಹೋಗುವುದನ್ನು ತಡೆಯಲು ಸಾಧ್ಯ. ಅವರ ಅನುಗ್ರಹದಿಂದ ಜೀವನದಲ್ಲಿ ಸರ್ವತೋಮುಖ ಅಭಿವೃದ್ಧಿ ಸಾಧಿಸಬಹುದು ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.
ಮಣಿಪಾಲ ಸಮೀಪದ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್​ ಹಾಗೂ ಶಿವಪಾಡಿ ವೈಭವ ಆಚರಣ ಸಮಿತಿಯ ಆಶ್ರಯದಲ್ಲಿ ನಡೆದ ಶಿವಪಾಡಿ ವೈಭವೋತ್ಸವದಲ್ಲಿ ಅವರು ಆಶೀರ್ವಚನ ನೀಡಿದರು.
ಮಾಹೆ ಉಪಕುಲಪತಿ ಡಾ. ಎಂ.ಡಿ. ವೆಂಕಟೇಶ್​ ಮಾತನಾಡಿ, ಪ್ರಕೃತಿಯೊಂದಿಗೆ ದೇವರ ಆರಾಧನೆ ನಡೆಯುವ ಶಿವಪಾಡಿ ಅಲೌಕಿಕ ಅನುಭವ ನೀಡುತ್ತದೆ. ಮಾಹೆ ಸಂಸ್ಥೆಯ ಸಹಸ್ರಾರು ವಿದ್ಯಾರ್ಥಿಗಳು ದೇವಸ್ಥಾನಕ್ಕೆ ಭೇಟಿ ನೀಡಿ ಜೀವನದಲ್ಲಿ ಶ್ರೇಯಸ್ಸನ್ನು ಪಡೆದಿದ್ದಾರೆ. ದೇವಸ್ಥಾನಗಳು ಕೇವಲ ಧಾರ್ಮಿಕತೆಗೆ ಮಾತ್ರ ಸೀಮಿತವಾಗಿರದೆ ಶಿವಪಾಡಿ ವೈಭವದ ಮೂಲಕ ಸಮಾಜಮುಖಿ ಕೆಲಸದಲ್ಲೂ ತೊಡಗಿಸಿಕೊಳ್ಳುತ್ತಿರುವುದು ಅಭಿನಂದನೀಯ ಎಂದರು.
ಸಮಿತಿ ಅಧ್ಯಕ್ಷ ಕೆ. ರಘುಪತಿ ಭಟ್​ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಮುನಿಯಾಲು ಉದಯ್​ ಶೆಟ್ಟಿ, ಪ್ರಸಾದ್​ ರಾಜ್​ ಕಾಂಚನ್​, ಭರತ್​ ಶೆಟ್ಟಿ, ಸುಧಾಕರ ಶೆಟ್ಟಿ, ದಯಾನಂದ ಪ್ರಭು, ಮಾಜಿ ವಿಪ ಸದಸ್ಯ ದಯಾನಂದ ರೆಡ್ಡಿ, ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್​ ಅಧ್ಯಕ್ಷ ದಿನೇಶ್​ ಪ್ರಭು, ದೇವಸ್ಥಾನದ ಆಡಳಿತ ಮೊಕ್ತೇಸರ ಮಹೇಶ್​ ಠಾಕೂರ್​ ಸ್ವಾಗತಿಸಿ, ಟ್ರಸ್ಟಿ ದಿನೇಶ್​ ಸಾಮಂತ್​, ಪ್ರಮುಖರಾದ ಗೋಪಾಲಕೃಷ್ಣ ಪ್ರಭು, ಸಂಜಯ್​ ಪ್ರಭು, ಪ್ರಕಾಶ್​ ಕುಕ್ಕೆಹಳ್ಳಿ, ಸತೀಶ್​ ಪಾಟೀಲ್​, ಶಿವಾನಂದ ಪ್ರಭು, ಶ್ರೀಕಾಂತ್​ ಪ್ರಭು, ಅಶೋಕ್​ ಸಾಮಂತ್​, ಪ್ರಕಾಶ್​ ಪ್ರಭು ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪ್ರಸಾದ್​ ನೇತ್ರಾಲಯ ಮುಖ್ಯಸ್ಥ ಡಾ. ಕೃಷ್ಣಪ್ರಸಾದ್​, ವಿದ್ಯಾವಂತ ಆಚಾರ್ಯ, ಬಿ. ರಂಜಿತ್​ ಶೆಟ್ಟಿ , ಸರಸು ಅವರನ್ನು ಗೌರವಿಸಲಾಯಿತು.