ಶಿರೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕಸ ರಾಶಿ ಬಿದ್ದಿರುವುದು. 
ಉಡುಪಿ

ಸ್ವಚ್ಛ ಗ್ರಾಮಕ್ಕೆ ‘ಶಿರೂರು’ ಸವಾಲು!

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಬೈಂದೂರು
ಜಿಲ್ಲೆಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎನ್ನುವ ಹೆಗ್ಗಳಿಕೆ ಇರುವ ಶಿರೂರು ಗ್ರಾಮದಲ್ಲಿ ಕಸ ವಿಲೇವಾರಿಯಿಂದ ಸಮಸ್ಯೆಯಾಗಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಸ ವಿಲೇವಾರಿ ಮತ್ತು ಸಂಗ್ರಹ ಕೊರತೆ ಕಾರಣ ಸ್ವಚ್ಛತೆ ಸವಾಲಾಗಿದೆ. ಜಿಲ್ಲಾಡಳಿತ, ತಾಲೂಕು ಹಾಗೂ ಸ್ಥಳೀಯಾಡಳಿತ ಕಸ ವಿಲೇವಾರಿ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವ್ಯಯ ವಾಡುತ್ತಿರುವುದು ಲೆಕ್ಕಕ್ಕೆ ಸೀಮಿತವಾಗಿದ್ದು, ಊರಿನ ಸ್ವಚ್ಛತೆ ವಾತ್ರ ಕನಸಾಗಿಯೇ ಉಳಿದಿದೆ.
ಶಿರೂರು ಗ್ರಾಮದ ವ್ಯಾಪ್ತಿ ಅತ್ಯಂತ ವಿಶಾಲವಾಗಿದ್ದು, ಸ್ವಚ್ಛ ಭಾರತ್ ಅಭಿಯಾನದ ಮನೆ ಮನೆ ಕಸ ಸಂಗ್ರಹ ಯೋಜನೆ ಇದ್ದರೂ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಇದುವರೆಗೆ ಕಸದ ವಿಲೇವಾರಿಗೆ ಜಾಗದ ಸಮಸ್ಯೆ ಕಾರಣ ಗ್ರಾಪಂ ಎದುರು ಕಸದ ರಾಶಿ ಒಂದೆಡೆಯಾದರೆ ತೂದಳ್ಳಿ ರಸ್ತೆ ಸಮೀಪದಲ್ಲಿ ತಾತ್ಕಾಲಿಕ ಕಸ ವಿಲೇವಾರಿ ಟಕ ಇದೆ. ಈ ಜಾಗದ ಸುತ್ತ ಒಂದು ಕಿ.ಮೀ.ವರೆಗೆ ಹತ್ತಿರ ಹೋಗುವಂತಿಲ್ಲ. ದಾರಿಯುದ್ದಕ್ಕೂ ಬಿದ್ದಿರುವ ಕಸದ ರಾಶಿ, ನಿರ್ವಹಣೆ ಕೊರತೆ, ಅಸಮರ್ಪಕ ವಿಲೇವಾರಿಯಿಂದಾಗಿ ಕಿ.ಮೀ. ದೂರದವರೆಗೆ ಮೂಗುಮುಚ್ಚಿ ಹೋಗಬೇಕಾಗಿದೆ. ಜತೆಗೆ ಸಾಂಕ್ರಾಮಿಕ ಕಾಯಿಲೆ ಹರಡುವ ಭೀತಿ ಇದೆ.
ಮೇಲಧಿಕಾರಿಗಳು ನೆಪ ವಾತ್ರಕ್ಕೆ ಕಸ ವಿಲೇವಾರಿ ಸ್ಥಳಕ್ಕೆ ಭೇಟಿ ನೀಡಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಶುಚಿತ್ವದ ವಿಷಯವನ್ನು ಗಂಭೀರವಾಗಿ ಪರಿಗಣಿಸಿದರೂ ಶಿರೂರಿನ ಮಟ್ಟಿಗೆ ಶಾಶ್ವತ ಸಮಸ್ಯೆಯಾಗಿ ಕಾಡುತ್ತಿದೆ. ವರ್ಷದ ಹಿಂದೆ ಕಾರ್ಯಕ್ರಮಕ್ಕೆ ಬಂದ ಸಂಸದರು ಇದೇ ವಾರ್ಗವಾಗಿ ತೆರಳುವಾಗ ಕಸದ ವಿಲೇವಾರಿ ವೈಫಲ್ಯ ನೋಡಿ ಜಿಲ್ಲಾಧಿಕಾರಿ ಗಮನಕ್ಕೆ ತಂದು ಆಗ್ರಹ ವಾಡಿದ್ದರೂ ಇದುವರೆಗೆ ಕಸದ ಸಮಸ್ಯೆ ಕೊನೆಯಾಗಿಲ್ಲ.

ಕಸ ವಿಲೇವಾರಿಗೆ ದಾನಿಗಳ ಕೊಡುಗೆ

ಸ್ವಚ್ಛ ಶಿರೂರು ಪರಿಕಲ್ಪನೆಯಡಿ ಶಿರೂರಿನ ದಾನಿಗಳು ಹಾಗೂ ಶಿರೂರು ಅಸೋಸಿಯೇಷನ್ ವತಿಯಿಂದ ಉಡುಪಿ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಎರಡು ಕಸದ ವಾಹನಗಳ ಕೊಡುಗೆ ನೀಡಿದ್ದಾರೆ. ಆದರೆ ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ. ಹಡವಿನಕೋಣೆ ರಸ್ತೆ, ಅಳ್ವೆಗದ್ದೆ ರಸ್ತೆ, ಸಂಕದಗುಂಡಿ, ಮುಸ್ಲಿಂ ಕೇರಿ ರಸ್ತೆ, ಕಳಿಹಿತ್ಲು ರಸ್ತೆ ಮುಂತಾದ ಕಡೆ ಸಾರ್ವಜನಿಕರ ನಿರ್ಲಕ್ಷ ಎದ್ದು ಕಾಣುತ್ತಿದೆ. ಹಲವು ಬಾರಿ ಎಚ್ಚರಿಕೆ ನೀಡಿದರೂ ರಸ್ತೆ ಬದಿಯಲ್ಲಿ ಕಸ ಎಸೆಯುತ್ತಿರುವುದು ಸಮಸ್ಯೆಯಾಗಿ ಕಾಡುತ್ತಿದೆ ಹಾಗೂ ಕೆಲವು ಕಡೆಗಳಲ್ಲಿ ಗ್ರಾ.ಪಂ.ನಿಂದ ಸಿ.ಸಿ. ಕ್ಯಾಮರಾ ಅಳವಡಿಸಿದರೂ ರಸ್ತೆ ಮೇಲೆ ಕಸ ಎಸೆದು ಕಿಡಿಗೇಡಿಗಳು ಊರಿನ ಶುಚಿತ್ವ ಹಾಳು ವಾಡುತ್ತಿದ್ದಾರೆ.

ಕಸಕ್ಕೆ ಬೆಂಕಿ ಹಾಕುತ್ತಿರುವ ಗ್ರಾ.ಪಂ.!

ಕೇಂದ್ರ ಸರ್ಕಾರದ ನಿಯಮದ ಪ್ರಕಾರ ಕಸವನ್ನು ಬೆಂಕಿ ಹಾಕಿ ಸುಡುವಂತಿಲ್ಲ. ಆದರೆ ಶಿರೂರು ಗ್ರಾಪಂ ಕಸದ ರಾಶಿಗೆ ಬೆಂಕಿ ಹಚ್ಚಿ ಸುಡುತ್ತಿದೆ. ಇದರಿಂದಾಗಿ ಅರಮನೆಹಕ್ಲು ಭಾಗದಲ್ಲಿ ಪ್ರತಿದಿನ ದಟ್ಟ ಹೊಗೆ ಆವರಿಸುತ್ತಿದ್ದು, ಉಸಿರಾಡಲು ಕಷ್ಟವಾಗುತ್ತಿದೆ ಎಂದು ಜನರು ಆಕ್ಷೇಪಿಸುತ್ತಿದ್ದಾರೆ. ಬೆಂಕಿ ಇಡುವ ಕಾರಣ ವಿವಿಧ ರೀತಿಯ ವಾಸನೆಯಿಂದ ಮಕ್ಕಳು, ಹಿರಿಯರು ಕಾಯಿಲೆಯಿಂದ ಬಳಲುವಂತಾಗಿದೆ. ಹೀಗಾಗಿ ಗ್ರಾಪಂ ಕಸ ಸುಡುವುದನ್ನು ತಕ್ಷಣ ನಿಲ್ಲಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಗ್ರಾ.ಪಂ. ಜತೆಗೆ ಸಾರ್ವಜನಿಕರ ಜವಾಬ್ದಾರಿಯೂ ಮುಖ್ಯವಾಗಿದೆ. ಹೀಗಾಗಿ ಜಿಲ್ಲಾಡಳಿತ ಶಿರೂರಿನ ಕಸ ವಿಲೇವಾರಿ ಕುರಿತು ವಿಶೇಷ ಸಭೆ ಕರೆದು ಶಾಶ್ವತ ಪರಿಹಾರದ ಚಿಂತನೆ ವಾಡುವ ಮೂಲಕ ಸ್ವಚ್ಛ ಶಿರೂರು ಪರಿಕಲ್ಪನೆ ಸಾಕಾರಗೊಳ್ಳಬೇಕಾಗಿದೆ.

ಶಿರೂರು ಗ್ರಾಮದ ಸರ್ವೇ ನಂ.81ರಲ್ಲಿ 2.37 ಎಕರೆ ಸ್ಥಳ ಕಸ ವಿಲೇವಾರಿಗಾಗಿ ಗ್ರಾ.ಪಂ. ಹೆಸರಿನಲ್ಲಿದೆ. ಜಾಗಕ್ಕೆ ಗಡಿ ಗುರುತು ವಾಡಿ ಕಸ ವಿಲೇವಾರಿ ಶಾಶ್ವತ ಪರಿಹಾರದ ಬಗ್ಗೆ ಕ್ರಮಕೈಗೊಳ್ಳಲಾಗುವುದು. ಈ ಜಾಗದಲ್ಲಿ ಕಸದ ಸಮರ್ಪಕ ವಿಲೇವಾರಿ ಕುರಿತು ತಕ್ಷಣ ಕ್ರಮ ಕೈಗೊಳ್ಳಲಾಗುವುದು.