ಶಿರೂರು ಮಠದ ಪರ್ಯಾಯ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಕಬ್ಬಿನಾಲೆ ವಸಂತ ಭಾರದ್ವಾಜ್ ಬಿಡುಗಡೆ ಮಾಡಿದರು. ಡಾ. ಉದಯಕುಮಾರ್ ಸರಳತ್ತಾಯ, ಮಟ್ಟಾರು ರತ್ನಾಕರ್ ಹೆಗಡೆ, ಸುಪ್ರಸಾದ್ ಶೆಟ್ಟಿ ಬೈಕಾಡಿ, ಜಯಪ್ರಕಾಶ ಕೆದ್ಲಾಯ, ಕಿಶನ್ಹೆಗ್ಡೆ ಕೊಳ್ಕೆಬೈಲು, ಉದಯಕುಮಾರ್ ಶೆಟ್ಟಿ, ವೀಣಾ ಶೆಟ್ಟಿ, ನಯನಾ ಗಣೇಶ್, ಸಂಧ್ಯಾ ರಮೇಶ್ ಇತರರಿದ್ದರು.
* ಮನೆಮನೆಗೆ ಆಮಂತ್ರಣ ಪತ್ರಿಕೆ ಬಿಡುಗಡೆ
* ಜ.9ರಂದು ವೇದವರ್ಧನ ಶ್ರೀಗಳ ಪುರ ಪ್ರವೇಶ
ಉಡುಪಿ: ಶ್ರೀಮಧ್ವ-ವಾದಿರಾಜ ಯತಿವರ್ಯರು ರೂಪಿಸಿದ ಸತ್ಸಂಪ್ರದಾಯದಂತೆ ಶಿರೂರು ಮಠದ ಪೀಠಾಧಿಪತಿ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ 2026ರ ಜ.18ರಿಂದ ಆರಂಭಗೊಳ್ಳಲಿದೆ. ತನ್ನಿಮಿತ್ತ ಶಿರೂರು ಮಠದಿಂದ ಎಲ್ಲ ಪೂರ್ವ ಸಂಪ್ರದಾಯ ಮುಗಿದಿದ್ದು, ಕೃಷ್ಣನ ಸೇವಾ ಕಾರ್ಯದ ಇನ್ನಿತರ ಸಿದ್ಧತೆ ಭರದಿಂದ ಸಾಗಿದೆ.
ಶಿರೂರು ಮಠದ ಪರ್ಯಾಯ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ಮನೆ ಮನೆಗೂ ಆಮಂತ್ರಣ ನೀಡಲು ಶ್ರೀಗಳು ಮಾರ್ಗದರ್ಶನ ನೀಡಿದ ಹಿನ್ನೆಲೆಯಲ್ಲಿ ಶಿರೂರು ಪರ್ಯಾಯ ಮಹೋತ್ಸವದ ಸ್ವಾಗತ ಸಮಿತಿ ವತಿಯಿಂದ ಕನಕಗೋಪುರದ ಬಳಿ ಅಷ್ಟಾವಧಾನಿ ಕಬ್ಬಿನಾಲೆ ವಸಂತ ಭಾರದ್ವಾಜ್ ಭಾನುವಾರ (ಡಿ.21) ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.
ಶ್ರೀಗಳಿಗೆ ಪೌರ ಸನ್ಮಾನ
ಶಿರೂರು ಮಠದ ದಿವಾನ ಡಾ. ಉದಯಕುಮಾರ್ ಸರಳತ್ತಾಯ ಮಾತನಾಡಿ, ಶಿರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರು ಪರ್ಯಾಯ ಪೂರ್ವಭಾವಿ ಹಿನ್ನೆಲೆಯಲ್ಲಿ ಧಾರ್ಮಿಕ ಸಂಚಾರದಲ್ಲಿದ್ದಾರೆ. ನಾಡಿನ ಪುಣ್ಯಕ್ಷೇತ್ರಗಳನ್ನೆಲ್ಲ ಸಂದರ್ಶಿಸಿ ಶ್ರೀ ಮಠದ ಪಟ್ಟದ ದೇವರೊಂದಿಗೆ 2026ರ ಜ.9ರಂದು ಪುರಪ್ರವೇಶ ಮಾಡಲಿದ್ದಾರೆ. ಅಂದು ಮಧ್ಯಾಹ್ನ 3 ಗಂಟೆಗೆ ಶಿರೂರು ಮೂಲಮಠದಿಂದ ಹೊರಟು ಹಿರಿಯಡ್ಕ, ಪರ್ಕಳ, ಮಣಿಪಾಲ, ಕಡಿಯಾಳಿ ಮಾರ್ಗವಾಗಿ ಸಾಯಂಕಾಲ 5:45ಕ್ಕೆ ಉಡುಪಿಯಲ್ಲಿರುವ ತಮ್ಮ ಮಠ ಪ್ರವೇಶಿಸಲಿದ್ದಾರೆ. ಅದೇ ದಿನ ಸಂಜೆ 6:30ಕ್ಕೆ ಉಡುಪಿಯ ರಥಬೀದಿಯಲ್ಲಿ ಭಾವೀ ಪರ್ಯಾಯ ಶ್ರೀಪಾದರಿಗೆ ಪೌರ- ಸನ್ಮಾನ ನಡೆಯಲಿದೆ ಎಂದು ತಿಳಿಸಿದರು.
ಭಕ್ತರ ಪರ್ಯಾಯ
ಜ.18ರಂದು ಉಡುಪಿಯ ಅಷ್ಟಮಠಾಧೀಶರ ಸಾನ್ನಿಧ್ಯದಲ್ಲಿ ನಸುಕಿನ 3 ಗಂಟೆಗೆ ಭವ್ಯವಾದ ಪರ್ಯಾಯ ಮೆರವಣಿಗೆ ನಡೆಯಲಿದೆ. ಜೋಡುಕಟ್ಟೆಯಿಂದ ಶಿರೂರು ಶ್ರೀಗಳು ಮೆರವಣಿಗೆ ಮೂಲಕ ಉಡುಪಿ ಮಠಕ್ಕೆ ಆಗಮಿಸಿ, ಬೆಳಗ್ಗೆ 5:45ಕ್ಕೆ ಪ್ರಥಮ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ. ಮುಂದಿನ ಎರಡು ವರ್ಷ (2026-2028)ದ ಅವಧಿಗೆ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ನಿತ್ಯಪೂಜಾ ಕೈಂಕರ್ಯ ನಡೆಸಲಿದ್ದಾರೆ. ಶಿರೂರು ಪರ್ಯಾಯ ಭಕ್ತರ ಪರ್ಯಾಯ. ಹೀಗಾಗಿ ಶ್ರೀಗಳ ಪುರಪ್ರವೇಶ ಹಾಗೂ ಪರ್ಯಾಯ ಮಹೋತ್ಸವಕ್ಕೆ ಎಲ್ಲ ಸದ್ಭಕ್ತರೂ ಆಗಮಿಸಬೇಕೆಂದು ಮಠದ ವತಿಯಿಂದ ಆಹ್ವಾನಿಸುತ್ತಿದ್ದೇನೆ ಎಂದು ಡಾ. ಸರಳತ್ತಾಯ ತಿಳಿಸಿದರು.
ಸ್ವಾಗತ ಸಮಿತಿಯ ಸಂಚಾಲಕ ಸುಪ್ರಸಾದ್ ಶೆಟ್ಟಿ ಬೈಕಾಡಿ, ಕೋಶಾಧಿಕಾರಿ ಜಯಪ್ರಕಾಶ ಕೆದ್ಲಾಯ, ಸಮಿತಿಯ ಪ್ರಮುಖರಾದ ಶ್ರೀಕಾಂತ ಉಪಾಧ್ಯಾಯ, ಕಿಶನ್ಹೆಗ್ಡೆ ಕೊಳ್ಕೆಬೈಲು, ಉದಯಕುಮಾರ್ ಶೆಟ್ಟಿ, ವೀಣಾ ಶೆಟ್ಟಿ, ನಯನಾ ಗಣೇಶ್, ಸಂಧ್ಯಾ ರಮೇಶ್, ನೀತಾ ಪ್ರಭು, ಪದ್ಮಾ ರತ್ನಾಕರ್, ಶ್ರೀಕಾಂತ್ ನಾಯಕ್, ಸಂದೀಪ್ ಮಂಜ, ಅಶ್ವತ್ಥ ಭಾರದ್ವಾಜ್ ಇತರರಿದ್ದರು.
ಜಗದ್ಗುರು ಶ್ರೀ ಮಧ್ವಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಉಡುಪಿಯ ಶ್ರೀಕೃಷ್ಣ ದೇವರ ನಿತ್ಯಪೂಜಾ ಕೈಂಕರ್ಯಗಳು ಅಷ್ಟಮಠದ ಯತಿಗಳಿಂದ ಪರ್ಯಾಯ ಸಂಪ್ರದಾಯದಂತೆ ಪ್ರತಿದಿನವೂ ಸಾಂಪ್ರದಾಯಿಕ ಚೌಕಟ್ಟಿನಲ್ಲಿ ನಡೆಯುತ್ತಿದೆ. ಶಿರೂರು ಶ್ರೀಗಳ ಪ್ರಥಮ ಪರ್ಯಾಯವನ್ನು 'ಶಿರೂರು ಪರ್ಯಾಯ ನಮ್ಮ ಪರ್ಯಾಯ' ಎಂಬ ಶೀರ್ಷಿಕೆಯಡಿ ಆಯೋಜಿಸಿದ್ದೇವೆ. ಜ.10ರಿಂದ ಹೊರೆಗಾಣಿಕೆ ಆರಂಭವಾಗಲಿದ್ದು, ಶ್ರೀಕೃಷ್ಣನ ಸೇವೆ ಮಾಡಲು ಎಲ್ಲ ಸದ್ಭಕ್ತರಿಗೆ ಇದು ಸದವಕಾಶ.