ಪುತ್ತಿಗೆ ಶ್ರೀಪಾದರು ಸರ್ವಜ್ಞಪಿಠದಲ್ಲಿ ಶೀರೂರು ಶ್ರೀಗಳನ್ನು ಕುಳ್ಳಿರಿಸಿ ಆಶೀರ್ವದಿಸಿದರು.  
ಉಡುಪಿ

ಕೃಷ್ಣ ಮಠದಲ್ಲಿ ಶೀರೂರು ಪರ್ಯಾಯ ಪರ್ವ ಪ್ರಾರಂಭ

ಉಡುಪಿ: ಕೃಷ್ಣ ಮಠದಲ್ಲಿ ಭಾನುವಾರದಿಂದ ಶೀರೂರು ಮಠದ ಪರ್ಯಾಯ ಪರ್ವ ಪ್ರಾರಂಭವಾಗಿದ್ದು, ಪ್ರಾತಕಾಲ 5.45ಕ್ಕೆ ಶುಭ ಮುಹೂರ್ತದಲ್ಲಿ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಪ್ರಥಮ ಬಾರಿಗೆ ಸರ್ವಜ್ಞ ಪೀಠಾರೋಹಣಗೈದರು.

ಮಾಲಿಕಾ ಮಂಗಳಾರತಿ
ಪರ್ಯಾಯೋತ್ಸವ ಹಿನ್ನೆಲೆಯಲ್ಲಿ ಅನ್ನಬ್ರಹ್ಮ ಉಡುಪಿ ಕೃಷ್ಣನ ಸನ್ನಿಧಿಯಲ್ಲಿ ಲಕ್ಷಕ್ಕೂ ಅಧಿಕ ಮಂದಿ ಮಧ್ಯಾಹ್ನ ಭೋಜನ ಪ್ರಸಾದ ಸ್ವೀಕರಿಸಿದರು. ಮಹಾಪೂಜೆ ಬಳಿಕ ಶೀರೂರು ಶ್ರೀಗಳು ಪಲ್ಲಪೂಜೆ ನೆರವೇರಿಸಿ, ಅನ್ನಸಂತರ್ಪಣೆಗೆ ಚಾಲನೆ ನೀಡಿದರು. ಪಲ್ಯ, ಅನ್ನ ಸಾರು, ಮಟ್ಟುಗುಳ್ಳ ಸಾಂಬಾರು, ಮೈಸೂರ್​ ಪಾಕ್​, ಬೂಂದಿ ಲಾಡು, ಸಜ್ಜಿಗೆ ವಡೆ, ಗೋಧಿಪಾಯಸ ನೀಡಲಾಯಿತು. ಮಧ್ವಾಂಗಣ, ರಾಜಾಂಗಣ, ಅನ್ನಬ್ರಹ್ಮ, ಅನಂತೇಶ್ವರ, ಭೋಜನಶಾಲೆ, ಬೈಲಕೆರೆ ಪಾರ್ಕಿಂಗ್​ ಪ್ರದೇಶದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು.

ನಗರದಲ್ಲಿ ಪೊಲೀಸ್​ ಕಣ್ಗಾವಲು
ಪರ್ಯಾಯ ಭದ್ರತೆಗಾಗಿ ಉಡುಪಿ, ದ.ಕ., ಚಿಕ್ಕಮಗಳೂರು, ಉತ್ತರ ಕನ್ನಡ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದ್ದು, ಶನಿವಾರ ಸಾಯಂಕಾಲದಿಂದಲೇ ಕರ್ತವ್ಯ ನಿರತರಾಗಿದ್ದ ಪೊಲೀಸರು ಯಾವುದೇ ಅವಡಕ್ಕೆ ಆಸ್ಪದವಿಲ್ಲದಂತೆ ವ್ಯವಸ್ಥಿತವಾಗಿ ಬಂದೋಬಸ್ತ್​ ನಿರ್ವಹಿಸಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.