ಕಾಪು ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿರುವುದು
ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕುವತ್ತ ಕಾಪು ತಾಲೂಕು ಆಡಳಿತ ದಿಟ್ಟ ಹೆಜ್ಜೆಯಿಟ್ಟಿದ್ದು, ಪುರಸಭೆ ಹಾಗೂ ಗ್ರಾಮಾಡಳಿತ ವ್ಯಾಪ್ತಿಯಲ್ಲಿ ನಾಯಿಗಳಿಗೆ ಆಶ್ರಯ ತಾಣಕ್ಕಾಗಿ ಸ್ಥಳ ಗುರುತಿಸುವಿಕೆ ಹಾಗೂ ಇತರ ಯೋಜನೆಗಳ ಜಾರಿಗೆ ಮುಂದಾಗಿದೆ.
ಪುರಸಭೆ ಹಾಗೂ ಗ್ರಾಮಾಡಳಿತಗಳ ಜತೆಗೂಡಿ ತಾಲೂಕು ಆಡಳಿತ ಈ ಕುರಿತು ಸಭೆ ನಡೆಸಿದ್ದು, ಕಂದಾಯ ಇಲಾಖೆಯಿಂದ ಶಿರ್ವದಲ್ಲಿ 2 ಎಕರೆ ಸರ್ಕಾರಿ ಜಮೀನು ಗುರುತಿಸಲಾಗಿದೆ. ಸಾಕುನಾಯಿ ಹಾಗೂ ಬೀದಿನಾಯಿಗಳಿಗೆ ರೇಬಿಸ್ ಲಸಿಕೆ ನೀಡಲು ಪಶುಸಂಗೋಪನಾ ಇಲಾಖೆ ಕ್ರಮವಹಿಸಿದೆ.
ಕಾಪು ತಾಲೂಕಾದ್ಯಂತ ಬೀದಿನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು, ಮಕ್ಕಳು ಮತ್ತು ಹಿರಿಯರ ಸಹಿತ ದ್ವಿಚಕ್ರ ವಾಹನ ಸವಾರರಿಗೆ ಸಂಕಷ್ಟ ತಂದೊಡ್ಡುತ್ತಿವೆೆ. ಪ್ರತಿ ಬಾರಿಯೂ ಪುರಸಭೆ ಸಾವಾನ್ಯ ಸಭೆ, ಗ್ರಾಮ ಪಂಚಾಯಿತಿ ಗ್ರಾಮಸಭೆಗಳಲ್ಲಿ ಇದು ಚರ್ಚೆಯ ವಿಷಯವಾಗಿತ್ತೇ ಹೊರತು ಪರಿಹಾರ ಮಾತ್ರ ಸಿಕ್ಕಿರಲಿಲ್ಲ.
2,127 ನಾಯಿ ಕಡಿತ: ಕಾಪು ತಾಲೂಕಿನಲ್ಲಿ ವರ್ಷವೊಂದರಲ್ಲೇ 2,127 ನಾಯಿ ಕಡಿತ ಪ್ರಕರಣಗಳಾಗಿವೆ. ಈ ಪೈಕಿ ಶಿರ್ವದಲ್ಲಿ ಗರಿಷ್ಠ 778 ಪ್ರಕರಣ ದಾಖಲಾಗಿದೆ. ಮುದರಂಗಡಿ ವ್ಯಾಪ್ತಿಯಲ್ಲಿ 175 ಪ್ರಕರಣ, ಕಾಪುವಿನಲ್ಲಿ 627, ಮೂಡಬೆಟ್ಟುವಿನಲ್ಲಿ 287, ಪಡುಬಿದ್ರಿಯಲ್ಲಿ 260 ಪ್ರಕರಣಗಳು ದಾಖಲಾಗಿವೆ. ದಿನೇದಿನೇ ನಾಯಿಕಡಿತ ಪ್ರಕರಣಗಳು ಹೆಚ್ಚುತ್ತಿರುವುದು ಸಾರ್ವಜನಿಕರ ಆತಂಕಕ್ಕೂ ಕಾರಣವಾಗಿದೆ.
ದುಬಾರಿ ಶಸ್ತ್ರಚಿಕಿತ್ಸೆ
ರಾಜ್ಯದಲ್ಲಿ ಬೆರಳೆಣಿಕೆಯಲ್ಲಿರುವ ನಾಯಿಗಳ ಸಂತಾನಶಕ್ತಿ ಹರಣ ಏಜೆನ್ಸಿಗಳು ತಲಾ ಶಸಚಿಕಿತ್ಸೆಯೊಂದಕ್ಕೆ 2,500 ರೂ. ದರ ನಿಗದಿಪಡಿಸಿವೆ. ಸ್ಥಳೀಯಾಡಳಿತ ಗೊತ್ತುಪಡಿಸುವ ಟೆಂಡರ್‌ಗಳಿಗೆ ಏಜೆನ್ಸಿಗಳು ಹಿಂದೇಟು ಹಾಕುತ್ತಿವೆ. ಕಾಪು ಪುರಸಭೆ ಈ ಬಾರಿ ಕರೆಯುತ್ತಿರುವ ಟೆಂಡರ್ ನಾಲ್ಕನೆಯದ್ದಾಗಿದ್ದು, ಪ್ರತಿ ಬಾರಿಯೂ ಮೀಸಲಿಡುವ ಅನುದಾನವೂ ವ್ಯರ್ಥವಾಗುತ್ತಿದೆ.
600 ನಾಯಿಗಳಿಗೆ ಲಸಿಕೆ
ಪಶುಸಂಗೋಪಾನೆ ಇಲಾಖೆ ಅಂದಾಜು ಪ್ರಕಾರ ತಾಲೂಕಿನಲ್ಲಿ 800 ಬೀದಿ ನಾಯಿಗಳಿದ್ದು, ಎಲ್ಲ ನಾಯಿಗಳಿಗೆ ರೇಬೀಸ್ ಲಸಿಕೆ ನೀಡಲಾಗುತ್ತಿದೆ. ಇದುವರೆಗೆ ಆಯೋಜಿಸಿರುವ 12 ಶಿಬಿರಗಳಿಂದ 600 ನಾಯಿಗಳಿಗೆ ಲಸಿಕೆ ನೀಡಲಾಗಿದೆ. ಜತೆಗೆ ಇಲಾಖೆಯಿಂದ ಸಾಕುನಾಯಿ ಹಾಗೂ ಬೀದಿನಾಯಿಗಳ ಗುರುತಿಸುವಿಕೆ ಚುರುಕುಗೊಂಡಿದ್ದು, ಸಾಕು ನಾಯಿಗಳಿಗೆ ನಿಗದಿತ ಪಟ್ಟಿ ಹಾಕುವ ಕಾರ್ಯವೂ ನಡೆಯಲಿದೆ.
ನಾಯಿಗಳಿಗೆ ಆಶ್ರಯ ತಾಣ ಕಲ್ಪಿಸುವ ನಿಟ್ಟಿನಲ್ಲಿ ತಾಲೂಕಿನ ಗ್ರಾವಾಂತರ ಪ್ರದೇಶವಾದ ಶಿರ್ವದಲ್ಲಿ ಎರಡು ಎಕರೆ ಜಮೀನು ಗುರುತಿಸಲಾಗಿದೆ. ಜಮೀನಿನ ಅಳತೆ ಕಾರ್ಯ ನಡೆಸಿ ಜಿಲ್ಲಾಡಳಿತಕ್ಕೆ ವರದಿ ನೀಡಲಾಗುವುದು. ಕಾಪು ಪುರಸಭೆ ವ್ಯಾಪ್ತಿಗೂ ಸೂಕ್ತ ಜಮೀನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಕಾಪು ತಾಲೂಕಿನಲ್ಲಿ ನಾಯಿ ಕಡಿತ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ. ಆರೋಗ್ಯ ಇಲಾಖೆಯಿಂದ ರೇಬಿಸ್ ಚುಚ್ಚುಮದ್ದು ಉಚಿತವಾಗಿ ನೀಡಲು ಕ್ರಮವಹಿಸಲಾಗುತ್ತಿದೆ. ಸರ್ಕಾರಿ ಉಗ್ರಾಣದಲ್ಲಿ ಬೇಡಿಕೆಯ ಚುಚ್ಚುಮದ್ದು ಪೂರೈಕೆಯಾಗದಿದ್ದರೂ, ಖಾಸಗಿಯಾಗಿ ಖರೀದಿಸಿ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ಬೀದಿನಾಯಿಗಳ ಹಾವಳಿ ತಡೆಯುವ ನಿಟ್ಟಿನಲ್ಲಿ ಪಶುಸಂಗೋಪನಾ ಇಲಾಖೆಯಿಂದ ಕಟ್ಟುನಿಟ್ಟಿನ ಪ್ರಯತ್ನ ನಡೆಯುತ್ತಿದೆ. ತಹಸೀಲ್ದಾರ್ ಅವರಿಂದ ಶಿರ್ವ ಗ್ರಾಮದಲ್ಲಿ ಜಾಗ ಗುರುತಿಸಲಾಗಿದ್ದು, ಇಲಾಖೆ ಹೆಸರಿನಲ್ಲಿ ಪಹಣಿ ಆದ ಕೂಡಲೇ ನಾಯಿಗಳ ಆಶ್ರಯ ತಾಣ ನಿರ್ವಾಣಕ್ಕೆ ಯೋಜನೆ ರೂಪಿಸಲಾಗುವುದು. ಪಶು ಸಖಿಯರಿಂದ ತಾಲೂಕಿನ ಎಲ್ಲ ಗ್ರಾಮಗಳ ಮನೆಗಳಿಗೆ ಭೇಟಿ ನೀಡಿ ಸರ್ವೇ ಕಾರ್ಯ ಆರಂಭಿಸಲಾಗಿದೆ.