ಪರ್ಕಳದ ಪ್ರೌಢಶಾಲೆಯಲ್ಲಿ ನಡೆದ ಸಭೆಯಲ್ಲಿ ಮನೋಜ್ ಕಡಬ ರಚಿತ ಮಾರ್ಗದರ್ಶಿ ಪುಸ್ತಕವನ್ನು ಡಾ.ಅಶೋಕ್ ಕಾಮತ್ ಬಿಡುಗಡೆ ಮಾಡಿದರು. ಕಿರಣ್ ಹೆಗ್ಡೆ, ಡಾ. ಯಲ್ಲಮ್ಮ, ನಾಗೇಶ್, ಉಮಾ, ಅರುಣಾಚಲ ಹೆಗ್ಡೆ, ಆನಂದ್ ನಾಯಕ್, ವಿಶ್ವನಾಥ ನಾಯಕ್, ಡಾ. ರಶ್ಮಿ ಅಮ್ಮೆಂಬಳ, ರಾಜೇಂದ್ರ ಭಟ್, ಶೆರ್ಲಿ ಮನೋಜ್ ಇದ್ದರು.
* ಡಾ.ಅಶೋಕ್ ಕಾಮತ್ ಅಭಿಪ್ರಾಯ
* 'ಶೆಫಿನ್ಸ್ ಕೆರಿಯರ್ ಅಪೆಕ್ಸ್' ಪುಸ್ತಕ ಬಿಡುಗಡೆ
ಉಡುಪಿ: ಶಾಲಾ ಹಂತದಲ್ಲಿಯೇ ಪಠ್ಯಾಧ್ಯಯನಕ್ಕೆ ಪೂರಕವಾಗಿ ವಿದ್ಯಾರ್ಥಿಗಳಿಗೆ ವೈಜ್ಞಾನಿಕ, ವ್ಯವಸ್ಥಿತ ಹಾಗೂ ಪ್ರಾಯೋಗಿಕ ವೃತ್ತಿ ಮಾರ್ಗದರ್ಶನ ಅತ್ಯವಶ್ಯಕ. ಇದು ಸರ್ಕಾರದ ಆಶಯವೂ ಆಗಿದೆ. ಆ ನಿಟ್ಟಿನಲ್ಲಿ ಮನೋಜ್ ಕಡಬ ರಚಿತ 'ಶೆಫಿನ್ಸ್ ಕೆರಿಯರ್ ಅಪೆಕ್ಸ್' ಪುಸ್ತಕವು ವಿದ್ಯಾರ್ಥಿಗಳ ವೃತ್ತಿ ಜೀವನಕ್ಕೆ ಸ್ಪಷ್ಟತೆ ಮತ್ತು ದಿಕ್ಕು ತೋರುವ ಮಹತ್ವದ ಹೆಜ್ಜೆಯಾಗಿದೆ ಎಂದು ಉಡುಪಿ ಜಿಲ್ಲಾ ಡಯಟ್ ಪ್ರಾಂಶುಪಾಲ ಡಾ. ಅಶೋಕ್ ಕಾಮತ್ ಅಭಿಪ್ರಾಯಪಟ್ಟರು.
ಉಡುಪಿಯ ಪರ್ಕಳದ ಪ್ರೌಢಶಾಲೆಯಲ್ಲಿ ನಡೆದ ಉಡುಪಿ ಜಿಲ್ಲಾ ಹೈಸ್ಕೂಲ್ಗಳ ಮುಖ್ಯೋಪಾಧ್ಯಾಯರ ಸಭೆಯಲ್ಲಿ ಪ್ರಸಿದ್ಧ ವೃತ್ತಿ ಮಾರ್ಗದರ್ಶಕ ಮತ್ತು ಸಾಫ್ಟ್ ಸ್ಕಿಲ್ಸ್ ತರಬೇತುದಾರ ಮನೋಜ್ ಕಡಬ ಅವರು 8ನೇ ತರಗತಿಯಿಂದ ಪದವಿ ವರೆಗಿನ ವೃತ್ತಿ ಶಿಕ್ಷಣ ಮಾಗದರ್ಶಿಯಾದ 'ಶೆಫಿನ್ಸ್ ಕೆರಿಯರ್ ಅಪೆಕ್ಸ್' ಎಂಬ ಕನ್ನಡ-ಇಂಗ್ಲಿಷ್ ದ್ವಿಭಾಷಾ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಮಿತ್ರ
ಲೇಖಕರಾದ ಮನೋಜ್ ಕಡಬ ಮಾತನಾಡಿ, ಈ ಪುಸ್ತಕವು ಹೈಸ್ಕೂಲ್ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಯೋಜನಕಾರಿ. ಸ್ಪರ್ಧಾತ್ಮಕ ಪರೀಕ್ಷೆ, ವಿದೇಶದಲ್ಲಿ ಅಧ್ಯಯನ ಹಾಗೂ ಪೂರ್ವ ತಯಾರಿ, ಜಾಗತಿಕ ಅವಕಾಶಗಳ ಮಾಹಿತಿ, ಭಾರತೀಯ ಪಾಸ್ಪೋರ್ಟ್ ಅರ್ಜಿ ವಿಧಾನ, ವಿದ್ಯಾರ್ಥಿ ವೀಸಾ ಪ್ರಕ್ರಿಯೆ ಕುರಿತಂತೆ ಹಂತ ಹಂತದ ಮಾಹಿತಿಯಿದೆ. ರೆಸ್ಯೂಮ್ ತಯಾರಿ, ಮೊದಲ ಅಭಿಪ್ರಾಯ, ಅತ್ಯುತ್ತಮ ವೃತ್ತಿ ಸಂಪನ್ಮೂಲ ವೆಬ್ಸೈಟ್ಗಳ ಪಟ್ಟಿಯೂ ಇದ್ದು, ಇದು ವಿದ್ಯಾರ್ಥಿಗಳ ಮಿತ್ರ ಎಂದರು.
ಉಡುಪಿ ಜಿಲ್ಲಾ ಹೈಸ್ಕೂಲ್ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಕಿರಣ್ ಹೆಗ್ಡೆ ಮಾತನಾಡಿ, ಮುಖ್ಯೋಪಾಧ್ಯಾಯರು, ಶಿಕ್ಷಕರು, ಪಾಲಕರು ಮತ್ತು ವಿದ್ಯಾರ್ಥಿಗಳಿಗೆ ಇದು ವಿಶ್ವಾಸಾರ್ಹ ಮಾರ್ಗದರ್ಶಕ ಪುಸ್ತಕವಾಗಿದೆ ಎಂದರು.
ಉಡುಪಿ ಬಿಇಒ ಡಾ.ಯಲ್ಲಮ್ಮ, ಬೈಂದೂರು ಬಿಇಒ ನಾಗೇಶ್, ಬ್ರಹ್ಮಾವರ ಬಿಇಒ ಉಮಾ, ಪರ್ಕಳ ಹೈಸ್ಕೂಲ್ ಆಡಳಿತ ಮಂಡಳಿ ಅಧ್ಯಕ್ಷ ಅರುಣಾಚಲ ಹೆಗ್ಡೆ, ಪರ್ಕಳ ಹೈಸ್ಕೂಲ್ ಮುಖ್ಯೋಪಾಧ್ಯಾಯ ಆನಂದ್ ನಾಯಕ್, ರೋಟರಿ ಪರ್ಕಳದ ಕಾರ್ಯದರ್ಶಿ ವಿಶ್ವನಾಥ ನಾಯಕ್, ರೇಡಿಯೋ ಮಣಿಪಾಲ್ ಸಮುದಾಯದ ನಿರ್ದೇಶಕಿ ಡಾ. ರಶ್ಮಿ ಅಮ್ಮೆಂಬಳ, ಜೆಸಿಐ ವಲಯ 15ರ ಪೂರ್ವ ವಲಯಾಧ್ಯಕ್ಷ ರಾಜೇಂದ್ರ ಭಟ್, ಶೆಫಿನ್ಸ್ ಸಂಸ್ಥೆಯ ಸಹ ಸ್ಥಾಪಕಿ ಶೆರ್ಲಿ ಮನೋಜ್ ಉಪಸ್ಥಿತರಿದ್ದರು.
'ಶೆಫಿನ್ಸ್ ಕೆರಿಯರ್ ಅಪೆಕ್ಸ್' ಈ ಪುಸ್ತಕವು ಹೈಸ್ಕೂಲ್ ಹಾಗೂ ಕಾಲೇಜ್ ವಿದ್ಯಾರ್ಥಿಗಳ ಎಲ್ಲ ಅವಶ್ಯಕತೆಯನ್ನು ಸಮರ್ಥವಾಗಿ ನಿಭಾಯಿಸಲಿದೆ. 2,500ಕ್ಕೂ ಹೆಚ್ಚು ವೃತ್ತಿ ಅವಕಾಶಗಳ ವಿವರ, 31 ಪ್ರೇರಣಾದಾಯಕ ಹಾಗೂ ಪಾಠಾಧಾರಿತ ನೈಜ ಜೀವನ ಕಥೆಗಳು, ಸ್ವಯಂ ಮೌಲ್ಯಮಾಪನ, ಮಾರ್ಗದರ್ಶನ ಮತ್ತು ಗುರಿ ನಿಗದಿಯ ಮಾಹಿತಿಯಿದೆ. ಎಲ್ಲ ಶಾಲೆಗಳು ತಮ್ಮ ಲೈಬ್ರ್ರರಿಯಲ್ಲಿ ಇಟ್ಟುಕೊಂಡಲ್ಲಿ ಬಹಳ ಉಪಯುಕ್ತವಾಗಲಿದೆ.