ಉಡುಪಿಯಲ್ಲಿ ಎನ್.ಎಸ್. ಸೇತುರಾಂ ಅವರಿಗೆ 'ಶಾರದಾ ಕೃಷ್ಣ' ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ.ಗಣನಾಥ ಶೆಟ್ಟಿ ಎಕ್ಕಾರು, ಯು.ವಿಶ್ವನಾಥ್ ಶೆಣೈ, ಪೂರ್ಣಿಮಾ, ಡಾ.ರಾಜಲಕ್ಷ್ಮೀ, ರಾಜೇಶ್ ಭಟ್ ಫಣಿಯಾಡಿ, ವಾಸುದೇವ ಅಡಿಗ, ರವಿರಾಜ್ ಎಚ್.ಪಿ., ಪ್ರೊ.ಶಂಕರ್ ಇತರರಿದ್ದರು.
* ಖ್ಯಾತ ರಂಗನಿರ್ದೇಶಕ ಎನ್.ಎಸ್. ಸೇತುರಾಂ ಅಭಿಮತ
* ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉತ್ಸವದಲ್ಲಿ 'ಶಾರದಾ ಕೃಷ್ಣ' ಪ್ರಶಸ್ತಿ ಸ್ವೀಕಾರ
ಉಡುಪಿ: ನಾವೆಲ್ಲ ಎಷ್ಟು ಚೆನ್ನಾಗಿ ಬದುಕುತ್ತಿದ್ದೇವೆ ಎಂದು ತಿಳಿಸಲು ಸಂಸ್ಕೃತಿ ಹಾಗೂ ಅದರ ಆಚರಣೆ ಬೇಕು. ದ.ಕ. ಜಿಲ್ಲೆಯು ದೇವಿಯರ-ದೈವದ ನಾಡು. ಇಲ್ಲಿಯ ಧರ್ಮ ಸಂಸ್ಕೃತಿಯ ಬಗ್ಗೆ ಅರಿವಿಲ್ಲದವರು ಏನೇನೋ ಮಾತನಾಡುತ್ತಾರೆ. ಅದಕ್ಕೆ ಕಿವಿಗೊಡಬೇಕಿಲ್ಲ. ದೇವಸ್ಥಾನಗಳು ನಂಬಿಕೆಯ ತಾಣ. ಎಲ್ಲವೂ ಭ್ರಮೆಯೇ ಆಗಿದ್ದು, ಲಿಖಿತ ಸಂವಿಧಾನವೂ ಸಹ ಭ್ರಮೆಯೇ. ಅವುಗಳನ್ನೆಲ್ಲ ಒಪ್ಪಿಕೊಂಡು, ಅಪ್ಪಿಕೊಂಡಾಗಲೇ ಸಮಾಜದ ವ್ಯವಸ್ಥೆ ಸಾಗುತ್ತದೆ. ಎಲ್ಲ ನಂಬಿಕೆಗಳನ್ನೂ ಒಡೆದು ಹಾಕಿದರೆ ಬದುಕು ಸಾಗದು. ಗಂಡ-ಹೆಂಡತಿ ನಡುವೆ ನಂಬಿಕೆ ಮುಖ್ಯ ಎಂದು ಖ್ಯಾತ ರಂಗನಿರ್ದೇಶಕ ಎನ್.ಎಸ್. ಸೇತುರಾಂ ಅಭಿಮತ ವ್ಯಕ್ತಪಡಿಸಿದರು.
ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ವತಿಯಿಂದ 'ಸಂಸ್ಕೃತಿ ಉತ್ಸವ'ದ ನಿಮಿತ್ತ ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಶನಿವಾರ (ಜ.24) ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ (ರಿ.) ಹೆಬ್ರಿ ಪ್ರಾಯೋಜಿತ 'ಶಾರದಾ ಕೃಷ್ಣ ಪುರಸ್ಕಾರ' ಸ್ವೀಕರಿಸಿ ಮಾತನಾಡಿದರು.
ತರಬೇತಿಯ ಕೊರತೆ
ಕಾರ್ಯಕ್ರಮ ಉದ್ಘಾಟಿಸಿದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿಯ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ, ಸಂಸ್ಕೃತಿಯೆಂದರೆ ಬದುಕು. ಅದು ಎಲ್ಲವನ್ನೂ ಒಳಗೊಂಡಿದೆ. ಯುವ ಸಮುದಾಯವನ್ನು ಶಿಕ್ಷಣಕ್ಕೆ ಸಿದ್ಧಪಡಿಸುವ ರೀತಿಯಲ್ಲೇ ಸಂಸ್ಕೃತಿಯ ರಕ್ಷಣೆಗೂ ಅವರನ್ನು ಸಿದ್ಧಪಡಿಸಬೇಕಾದ ಅಗತ್ಯತೆಯಿದೆ. ಅವರಿಗೆ ನಮ್ಮ ಸಂಸ್ಕೃತಿಯನ್ನು ಮುಟ್ಟಿಸುವಲ್ಲಿ ರಂಗಭೂಮಿ, ರಂಭೂಮಿ, ಸಾಂಸ್ಕೃತಿಕ ಹಾಗೂ ಜಾನಪದ ಕಾರ್ಯಕ್ರಮಗಳು ಮಹತ್ವದ ಪಾತ್ರ ನಿಭಾಯಿಸುತ್ತವೆ. ಆದರೆ, ಇವುಗಳ ತರಬೇತಿಯ ಕೊರತೆ ಕಂಡುಬರುತ್ತಿದೆ. ಹೀಗಾಗಿ ಸಂಘ-ಸಂಸ್ಥೆಗಳು ಈ ಕಾರ್ಯ ಮಾಡುವಂತಾಗಬೇಕು ಎಂದರು.
ಬೆಂಗಳೂರಿನ ಸವ್ಯಸಾಚಿ ಗ್ರೂಪ್ನ ಚೇರ್ಮನ್ ವಿಜಯನಾಥ್ ಹೆಗಡೆ ಅಭಿನಂದನಾ ಮಾತುಗಳನ್ನಾಡಿದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ವಿಶ್ವಸ್ಥ ವಿಘೇಶ್ವರ್ ಅಡಿಗ ಪ್ರಶಸ್ತಿ ಪತ್ರ ವಾಚಿಸಿದರು. ಇದೇ ಸಂದರ್ಭದಲ್ಲಿ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ನ ವೆಬ್ಸೈಟ್ ಉದ್ಘಾಟಿಸಲಾಯಿತು.
ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಯು.ವಿಶ್ವನಾಥ್ ಶೆಣೈ, ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ನ ವಿಶ್ವಸ್ಥ ವಾಸುದೇವ ಅಡಿಗ, ಐಎಂಎ ಉಡುಪಿ-ಕರಾವಳಿಯ ಮಾಜಿ ಅಧ್ಯಕ್ಷೆ ಡಾ. ರಾಜಲಕ್ಷ್ಮೀ, ಪ್ರೊ. ಶಂಕರ್ ಉಪಸ್ಥಿತರಿದ್ದರು.
ಪ್ರತಿಷ್ಠಾನದ ಕೋಶಾಧಿಕಾರಿ ರಾಜೇಶ್ ಭಟ್ ಫಣಿಯಾಡಿ ಸ್ವಾಗತಿಸಿದರು. ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾರದಾ ಕೃಷ್ಣ ಪುರಸ್ಕಾರ ಸಮಿತಿಯ ಸಂಯೋಜಕ ರಾಘವೇಂದ್ರ ಪ್ರಭು ಕರ್ವಾಲು ವಂದಿಸಿದರು. ಡಾ. ಭಾರ್ಗವಿ ಐತಾಳ್ ಕಾರ್ಯಕ್ರಮ ನಿರೂಪಿಸಿದರು.
ಸಭಾರಂಭದ ಬಳಿಕ ಎಸ್.ಎನ್. ಸೇತುರಾಂ ರಚನೆ ಮತ್ತು ನಿರ್ದೇಶನದಲ್ಲಿ ಬೆಂಗಳೂರಿನ ಅನನ್ಯ ತಂಡದ ಕಲಾವಿದರು "ತಳಿ' ನಾಟಕ ಪ್ರದರ್ಶಿಸಿದರು.
ರಂಗಭೂಮಿಯಿಂದ ವಿಮುಖರಾಗಲು ಜನರು ಕಾರಣರಲ್ಲ. ಶ್ರೀರಾಮನನ್ನು ಖಳನಾಯಕನನ್ನಾಗಿ, ರಾವಣನನ್ನು ನಾಯಕನನ್ನಾಗಿ ಬಿಂಬಿಸುವುದು ರಂಗದಲ್ಲಿಂದು ಕಂಡುಬರುತ್ತಿದೆ. ಯಾರನ್ನೋ ಬೈದು, ವಿಷಯವನ್ನೇ ಬದಲಿಸಿ ನಾಟಕ ಪ್ರಸ್ತುತಿಯಾಗುತ್ತಿದೆ. ಜನರಿಗೆ ಅರ್ಥವೇ ಆಗದ ನಾಟಕ ಪ್ರದರ್ಶನವಾಗುತ್ತಿದೆ. ರಂಗನಟರನ್ನು ಸಾಕದಿದ್ದರೆ ರಂಗಭೂಮಿ ಉಳಿಸಲು ಸಾಧ್ಯವಿಲ್ಲ. ದೊಡ್ಡ ದೊಡ್ಡ ಸಂಗೀತ ಕಲಾವಿದರಿಗೆ ನೀಡುವ ವಿಶೇಷ ವ್ಯವಸ್ಥೆ ರಂಗಕಲಾವಿದರಿಗೂ ಲಭಿಸುವಂತಾದಾಗ ನಮ್ಮ ಸಂಸ್ಕೃತಿ-ನಂಬಿಕೆ ಉಳಿಯಲು ಸಾಧ್ಯ.