ಉಡುಪಿ: ದೇಗುಲಗಳ ನಾಡು ಖ್ಯಾತಿಯ ಕಡಲ ನಗರಿ ಉಡುಪಿ ಜಿಲ್ಲೆಯಲ್ಲಿ ಶ್ರದ್ಧಾ-ಭಕ್ತಿಯ ಶರನ್ನವರಾತ್ರಿ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅ.11ರಿಂದ ಅ.21ರ ವರಗೆ ನಡೆಯುವ ನವರಾತ್ರಿ ಉತ್ಸವಕ್ಕೆ ಜಿಲೆಯಲ್ಲಿರುವ ನೂರಾರು ದೇವಿ ದೇವಾಲಯಗಳಲ್ಲಿ ವಿವಿಧ ಧಾರ್ಮಿಕ ಆಚರಣೆ ಆರಂಭವಾಗಲಿದೆ.
ದೇವಿ ಮಂದಿರ ಹಾಗೂ ದುರ್ಗಾ ಭಜನಾ ಮಂದಿರಗಳಲ್ಲಿ ರಂಗೋಲಿ, ತಳಿರು-ತೋರಣ, ಕೇಸರಿ ಧ್ವಜ ರಾರಾಜಿಸುತ್ತಿವೆ. 10 ದಿನಗಳ ಕಾಲ ವಿಶೇಷ ಪೂಜೆ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ನಾಟಕ, ಭರತನಾಟ್ಯ, ಯಕ್ಷಗಾನ, ಸಂಗೀತ, ಭಜನೆ, ಪ್ರವಚನ, ಉಪನ್ಯಾಸ ನೆರವೇರಲಿದ್ದು, ಸಾಧಕರಿಗೆ ಸನ್ಮಾನವನ್ನೂ ಹಮ್ಮಿಕೊಳ್ಳಲಾಗಿದೆ.
ಚಂಡಿಕಾ ಯಾಗ, ದುರ್ಗಾ ನಮಸ್ಕಾರ ಪೂಜೆ, ರಂಗ ಪೂಜೆ, ದರ್ಶನ ಸೇವೆ ಹಾಗೂ ವಿವಿದ ಹೋಮ-ಹವನ ನಡೆಯಲಿದ್ದು, ನವರಾತ್ರಿಯ ಎಲ್ಲ 9 ದಿನವೂ ಪ್ರಮುಖ ದೇವಿ ಮಂದಿರಗಳಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ ಇರಲಿದೆ.
ಐದನೇ ವರ್ಷದ ಉಡುಪಿ ಉಚ್ಚಿಲ ದಸರಾ ವೈಭವಕ್ಕೂ ಭರದ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅ.12ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ನೀಡಲಿದ್ದಾರೆ. ಪರ್ಯಾಯ ಶಿರೂರು ಮಠ, ಶ್ರೀಕೃಷ್ಣ ಮಠದ ಸಹಯೋಗದಲ್ಲಿ ಸಾರ್ವಜನಿಕ ಶ್ರೀಶಾರದೋತ್ಸವ ಸಮಿತಿ ವತಿಯಿಂದ ರಾಜಾಂಗಣದಲ್ಲಿ ಅ.11ರಿಂದ 20ರ ತನಕ ಉಡುಪಿ ದಸರಾ (ಸಾರ್ವಜನಿಕ ಶ್ರೀಶಾರದೋತ್ಸವ) ನಡೆಯಲಿದ್ದು, ಶಾರದೆ ಮತ್ತು ನವದುರ್ಗೆಯರ ಪ್ರತಿಷ್ಠಾಪನೆ ನಡೆಯಲಿದೆ.
ಉಡುಪಿ ನಗರದ ಪ್ರಮುಖ ರಸ್ತೆಗಳಲ್ಲಿ ವಿವಿಧ ದೇವಿ ದೇಗುಲದ ವತಿಯಿಂದ ಸ್ವಾಗತ ಕಮಾನು ಅಳವಡಿಸಲಾಗಿದೆ.
ತುಸು ಬೆಲೆ ಏರಿಕೆ
ದೂರದ ಊರುಗಳಿಂದ ಹೂವಿನ ಮಾರಾಟಗಾರರೂ ಉಡುಪಿಗೆ ಲಗ್ಗೆ ಇಟ್ಟಿದ್ದಾರೆ. ರಥಬೀದಿ, ಕೆ.ಎಂ. ಮಾರ್ಗ, ಮೆಸ್ಕಾಂ ಮಾರ್ಗದಲ್ಲಿ ಹೂವುಗಳ ಮಾರಾಟ ಆರಂಭಗೊಂಡಿದೆ. ನವರಾತ್ರಿ ಆರಂಭದ ಹಿನ್ನೆಲೆಯಲ್ಲಿ ಪೂಜಾ ಸಾಮಗ್ರಿಯೊಂದಿಗೆ ನಿತ್ಯೋಪಯೋಗಿ ವಸ್ತು, ಹಣ್ಣು-ಹಂಪಲು, ತರಕಾರಿಗಳ ದರವೂ ತುಸು ಏರಿಕೆ ಕಂಡಿದೆ.
ಕೊಲ್ಲೂರು ಶ್ರೀಮೂಕಾಂಬಿಕಾ ದೇಗುಲ, ಮಂದಾರ್ತಿ ಶ್ರೀದುರ್ಗಾ ಪರಮೇಶ್ವರಿ, ಉಚ್ಚಿಲ ಶ್ರೀಮಹಾಲಕ್ಷ್ಮೀ, ಕುಂಜಾರುಗಿರಿ ಶ್ರೀದುರ್ಗಾಪರಮೇಶ್ವರಿ, ಕಟಪಾಡಿ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇಗುಲ, ಕಟಪಾಡಿ ವಿಶ್ವನಾಥ ಕ್ಷೇತ್ರ, ಕಾಪು ಹೊಸ ಮಾರಿಗುಡಿ, ಹಳೆ ಮಾರಿಗುಡಿ, ಮೂರನೇ ಮಾರಿಗುಡಿ, ಉದ್ಯಾವರ ಶಂಭುಕಲ್ಲು ಶ್ರೀವೀರಭದ್ರ ದುರ್ಗಾಪರಮೇಶ್ವರಿ, ಗಣಪತಿ ಮತ್ತು ಮಹಾಕಾಳಿ ಪಂಜುರ್ಲಿ ದೇವಸ್ಥಾನ, ಕಿನ್ನಿಮುಲ್ಕಿ ಶ್ರೀಜಯದುರ್ಗಾಪರಮೇಶ್ವರಿ, ಕಡಿಯಾಳಿ ಶ್ರೀಮಹಿಷಮರ್ಧಿನಿ, ಇಂದ್ರಾಳಿಯ ಶ್ರೀಇಂದ್ರಾಣಿ ಪಂಚದುರ್ಗಾಪರಮೇಶ್ವರಿ, ಕಮಲಶಿಲೆಯ ಬ್ರಾಹ್ಮಿ ಶ್ರೀದುರ್ಗಾಪರಮೇಶ್ವರಿ, ನೀಲಾವರದ ಶ್ರೀಮಹಿಷಮರ್ಧಿನಿ, ಪುತ್ತೂರು ಶ್ರೀಭಗವತಿ ದುರ್ಗಾಪರಮೇಶ್ವರಿ, ಅಗ್ರಹಾರ ಶ್ರೀವಿರಸ್ತಂಭ ದುರ್ಗಾಪರಮೇಶ್ವರಿ, ಅಂಬಲಪಾಡಿ ಶ್ರೀಮಹಾಕಾಳಿ ಮತ್ತು ಜನಾರ್ದನ ದೇಗುಲ, ಬಾರಕೂರು ಕಾಳಿಕಾಂಬಾ, ಮುಂಡ್ಕೂರು ಶ್ರೀದುರ್ಗಾ ಪರಮೇಶ್ವರಿ ಹಾಗೂ ಇನ್ನಿತರ ದೇವಿ ಮಂದಿರಗಳು ನವರಾತ್ರಿ ಆಚರಣೆಗೆ ಸಜ್ಜಾಗಿವೆ.