ಉಡುಪಿ: ಪ್ರಾಚೀನ ಕಾವ್ಯಗಳು ಓದುಗಬ್ಬ ಹಾಗೂ ಪಾಡುಗಬ್ಬಗಳಾಗಿ ನಮ್ಮ ಪರಂಪರೆಯ ಶ್ರೇಷ್ಠತೆ ತಿಳಿಸಿವೆ. ಚಂಪೂ ಕಾವ್ಯಗಳು ಓದುಗಬ್ಬವಾಗಿದ್ದು ರಾಗ&ತಾಳ ಬದ್ಧವಾಗಿ ಹಾಗೂ ಕಬ್ಬವಾಕ್ಯ ನಿಯಮಗಳೊಂದಿಗೆ ಗಮಕ ಕ್ರಮದಲ್ಲಿ ವಾಚಿಸಿದರೆ ಬಲು ಅಂದ. ರನ್ನ ಮಹಾಕವಿಯ 'ಸಾಹಸ ಭೀಮ ವಿಜಯ' ಕೃತಿಯು ಭೀಮ-ಕೌರವರ ಗದಾಯುದ್ಧದ ಕಥೆಯಾಗಿದೆ. ಮಹಾಭಾರತವನ್ನು ಸಿಂಹಾವಲೋಕನ ತಂತ್ರದಿಂದ ಕಣ್ಣಿಗೆ ಕಟ್ಟಿಕೊಟ್ಟ ಶಕ್ತಿಕವಿ ರನ್ನ ಎಂದು ನಿವೃತ್ತ ಪ್ರಾಂಶುಪಾಲ, ತುಳು-ಕನ್ನಡ ಭಾಷಾ ವಿದ್ವಾಂಸ ಡಾ. ಪಾದೇಕಲ್ಲು ವಿಷ್ಣುಭಟ್ ತಿಳಿಸಿದರು.
ಉಡುಪಿಯ ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಕನ್ನಡ ವಿಭಾಗದ ವತಿಯಿಂದ ಆಯೋಜಿಸಿದ್ದ 'ಗದಾಯುದ್ಧ ಸಂಗ್ರಹಂ-ಭೀಷ್ಮವಚನಂ' ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾಲೇಜ್ನ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವಕರ ಮಾತನಾಡಿ, ಪ್ರಾಚೀನ ಕಾವ್ಯಗಳನ್ನು ಅರ್ಥಗರ್ಭಿತವಾಗಿ ತಿಳಿದುಕೊಂಡರೆ ಅಪಾರ ಜ್ಞಾನ ಲಭಿಸುತ್ತದೆ ಎಂದರು.
ಶೈಕ್ಷಣಿಕ ಸಲಹೆಗಾರ ಡಾ. ಶ್ರೀಧರ ಭಟ್, ಡಾ. ರು ನಾಯ್ಕ, ಡಾ. ಶ್ರೀದೇವಿ ಕೆ., ಡಾ. ದತ್ತಕುಮಾರ, ಉಪನ್ಯಾಸಕರಾದ ಭವ್ಯಾ, ಅರ್ಚನಾ, ಸಂಧ್ಯಾರಾಣಿ ಉಪಸ್ಥಿತರಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥ ಮಾರುತಿ ಸ್ವಾಗತಿಸಿದರು. ಕನ್ನಡ ಸ್ನಾತಕೋತ್ತರ ವಿಭಾಗದ ಸಂಯೋಜಕಿ ಡಾ. ರತ್ನಮಾಲಾ ವಂದಿಸಿದರು. ಉಪನ್ಯಾಸಕಿ ಸರಿತಾ ಕಾರ್ಯಕ್ರಮ ನಿರೂಪಿಸಿದರು.