ಉಡುಪಿ ಬ್ರಹ್ಮಾವರದಲ್ಲಿ ತಂದೆ-ತಾಯಿಯನ್ನೇ ಹತ್ಯೆ ಮಾಡಿದ ಆರೋಪಿ ಪುತ್ರ ಶಾಹೀದ್​ ಅಲಿ. 
ಉಡುಪಿ

ತಂದೆ-ತಾಯಿ ಹತ್ಯೆ ಪ್ರಕರಣ; ಆರೋಪಿ ಪೊಲೀಸ್​ ಕಸ್ಟಡಿಗೆ

* ತನಿಖೆ ಮುಂದುವರಿಸಿದ ಬ್ರಹ್ಮಾವರ ಠಾಣೆ ಪೊಲೀಸರು

ಉಡುಪಿ: ಬ್ರಹ್ಮಾವರ ತಾಲೂಕಿನ ಬೈಕಾಡಿ ಗ್ರಾಮದ ಗಾಂಧಿನಗರದಲ್ಲಿ ಆ.23ರಂದು ತಂದೆ-ತಾಯಿಯನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣದ ಆರೋಪಿ ಶಾಹೀದ್​ ಅಲಿ (31)ಯನ್ನು ಬ್ರಹ್ಮಾವರ ಠಾಣೆ ಪೊಲೀಸ್​ ಕಸ್ಟಡಿಗೆ ಪಡೆದಿದ್ದಾರೆ.
ಕೊಲೆ ಪ್ರಕರಣದ ಹೆಚ್ಚಿನ ತನಿಖೆ, ಸಾಕ್ಷ್ಯ ಸಂಗ್ರಹ, ಮಹಜರು ಪ್ರಕ್ರಿಯೆಗಾಗಿ ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಪ್ರಕರಣದ ತನಿಖಾಧಿಕಾರಿ ಗೋಪಿಕೃಷ್ಣ ನೇತೃತ್ವದ ತಂಡ ಉಡುಪಿ ನ್ಯಾಯಾಲಯಕ್ಕೆ ಮನವಿ ಮಾಡಿದೆ. ನ್ಯಾಯಾಲಯವು ಐದು ದಿನಗಳ ಕಾಲ ಆರೋಪಿಯನ್ನು ಪೊಲೀಸ್​ ಕಸ್ಟಡಿಗೆ ನೀಡಿದ್ದಾಗಿ ತಿಳಿದುಬಂದಿದೆ.

ಘಟನೆಯ ಹಿನ್ನಲೆ

ಪ್ರತಿದಿನವೂ ತನಗೆ ಮಾನಸಿಕ ಕಿರುಕುಳ ನೀಡುತ್ತಾರೆ ಎಂದು ಪುತ್ರ ಶಾಹೀದ್​ ಅಲಿ ತನ್ನ ತಂದೆ ಮೆಹಬೂಬ್​ ಅಲಿ ಹಾಗೂ ತಾಯಿ ಸಂಶಾದ್​ ಬೇಗಂ ಅವರನ್ನು ಮನೆಯಲ್ಲಿಯೇ ಸಂಜೆ 7 ಗಂಟೆಯ ವೇಳೆಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದನು. ರಾತ್ರಿಯಿಡೀ ಶವದ ಜತೆಯಲ್ಲೇ ಇದ್ದ ಆತ, ಆ.24ರಂದು ಬೆಳಗ್ಗೆ 9 ಗಂಟೆಗೆ ಆತನೇ ಪೊಲೀಸರಿಗೆ ಕರೆ ಮಾಡಿ ಅಪ್ಪ-ಅಮ್ಮನನ್ನು ಕೊಂದಿದ್ದಾಗಿ ಮಾಹಿತಿ ನೀಡಿದ್ದನು. ಸ್ಥಳಕ್ಕೆ ತೆರಳಿದ್ದ ಬ್ರಹ್ಮಾವರ ಠಾಣೆ ಪೊಲೀಸರು ಆರೋಪಿ ಶಾಹೀದ್​ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ಮಾದಕ ದ್ರವ್ಯ ಸೇವಿಸಿಲ್ಲ

ಆರೋಪಿ ಮಾದಕ ದ್ರವ್ಯ ಸೇವಿಸಿ ಈ ಹತ್ಯೆ ಮಾಡಿರಬಹುದು ಎಂಬ ಶಂಕೆ ಇತ್ತು. ಹೀಗಾಗಿ ಆತನ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ, ಆತ ಯಾವುದೇ ಮಾದಕ ದ್ರವ್ಯ ಸೇವಿಸಿರುವುದು ವರದಿಯಲ್ಲಿ ಕಂಡುಬಂದಿಲ್ಲ ಎಂದು ಉಡುಪಿ ಜಿಲ್ಲಾ ಪೊಲೀಸ್​ ವರಿಷ್ಠ ಹರಿರಾಮ್​ ಶಂಕರ್​ ತಿಳಿಸಿದ್ದಾರೆ.